ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಈ ಹಿಂದೆ ಸತತ ಏಳು ಸಲ ರೆಪೊ ದರವನ್ನು ಬದಲಾಯಿಸದೆ ಶೇಕಡಾ 6.50 ರಲ್ಲಿ ಸ್ಥಿರವಾಗಿರಿಸಿದೆ. ಆದರೆ ಪ್ರಸ್ತುತ ಹವಾಮಾನ ಮತ್ತು ಕಚ್ಚಾ ತೈಲ ಬೆಲೆಗಳನ್ನು ಅವಲಂಬಿಸಿ 2024 ರ ಮಧ್ಯದಿಂದ ಆರ್ಬಿಐ ರೆಪೊ ಬಡ್ಡಿದರ ಕಡಿತಗೊಳಿಸಬಹುದು ಎಂದು ಕ್ರಿಸಿಲ್ ಮುನ್ಸೂಚನೆ ನೀಡಿದೆ. ಸಾಮಾನ್ಯ ಮಾನ್ಸೂನ್ ಆಗಮನದ ನಿರೀಕ್ಷೆ ಮತ್ತು ಆಸ್ತಿ ಕೇಂದ್ರಿತ ಬಜೆಟ್ ಮಂಡನೆಯ ನಿರೀಕ್ಷೆಗಳ ಮಧ್ಯೆ 2024-25ರಲ್ಲಿ ಹಣದುಬ್ಬರವು ಶೇ 4.5 ಕ್ಕೆ ಇಳಿಯುವ ನಿರೀಕ್ಷೆಯಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಈ ತಿಂಗಳ ಸಭೆಯಲ್ಲಿ ಏಳನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ 2024 ರ ಮಧ್ಯಭಾಗದಿಂದ ಬಡ್ಡಿದರ ಕಡಿತ ಪ್ರಾರಂಭವಾಗಲಿದೆ ರೇಟಿಂಗ್ ಏಜೆನ್ಸಿ ಕ್ರಿಸಿಲ್ ನಿರೀಕ್ಷಿಸಿದೆ. ಅಸಮ ಹಣದುಬ್ಬರ ಪ್ರವೃತ್ತಿಗಳನ್ನು ಗಮನಿಸಿದರೆ ಆರ್ಬಿಐನ ಹಣಕಾಸು ನೀತಿ ಸಮಿತಿಯು ಹಣದುಬ್ಬರವು ಶೇಕಡಾ 4ಕ್ಕೆ ಇಳಿಕೆಯಾಗುವ ಸಮಯಕ್ಕೆ ಕಾಯುತ್ತಿದೆ ಎಂದು ಕ್ರಿಸಿಲ್ ಹೇಳಿದೆ.
ಭಾರತದಲ್ಲಿ ಚಿಲ್ಲರೆ ಹಣದುಬ್ಬರವು ಆರ್ಬಿಐನ ಶೇಕಡಾ 2 ರಿಂದ 6 ರಷ್ಟು ಅನುಕೂಲಕರ ಮಟ್ಟದಲ್ಲಿದೆ. ಆದರೆ ಇದು ಆದರ್ಶ ಮಟ್ಟವಾದ ಶೇಕಡಾ 4 ಕ್ಕಿಂತ ಹೆಚ್ಚಾಗಿದೆ. ಮಾರ್ಚ್ನಲ್ಲಿ ಇದು ಶೇ 4.85ರಷ್ಟಿತ್ತು. ಮುಂದುವರಿದ ಆರ್ಥಿಕತೆಗಳು ಸೇರಿದಂತೆ ಅನೇಕ ದೇಶಗಳಲ್ಲಿ ಹಣದುಬ್ಬರ ಹೆಚ್ಚಾಗುತ್ತಿದೆ. ಆದರೆ ಭಾರತವು ತನ್ನ ಹಣದುಬ್ಬರವನ್ನು ಕಡಿಮೆ ಮಟ್ಟದಲ್ಲಿ ಕಾಪಾಡಿಕೊಳ್ಳಲು ಯಶಸ್ವಿಯಾಗಿದೆ.
ರೆಪೊ ದರ ಎಂದರೇನು?: ರೆಪೊ ದರವು ಭಾರತೀಯ ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ತಾನು ನೀಡುವ ಸಾಲದ ಮೇಲಿನ ಬಡ್ಡಿದರವಾಗಿದೆ. Repurchase Agreement or Repurchasing Option ಎಂಬುದು ರೆಪೊ ಶಬ್ದದ ಪೂರ್ಣರೂಪವಾಗಿದೆ. ಅರ್ಹ ಸೆಕ್ಯುರಿಟಿಗಳನ್ನು ಮಾರಾಟ ಮಾಡುವ ಮೂಲಕ ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (ಆರ್ಬಿಐ) ಸಾಲ ಪಡೆಯುತ್ತವೆ.
ರೆಪೊ ದರದ ಮಹತ್ವವೇನು?: ಮಾರುಕಟ್ಟೆಯಲ್ಲಿ ಹಣದ ಹರಿವನ್ನು ನಿರ್ಬಂಧಿಸಲು ಭಾರತೀಯ ಕೇಂದ್ರ ಬ್ಯಾಂಕ್ ರೆಪೊ ದರವನ್ನು ಬಳಸುತ್ತದೆ. ಹಣದುಬ್ಬರವು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದಾಗ ಆರ್ಬಿಐ ರೆಪೊ ದರವನ್ನು ಹೆಚ್ಚಿಸುತ್ತದೆ. ರೆಪೊ ದರ ಹೆಚ್ಚಳವಾದಾಗ ಆರ್ಬಿಐನಿಂದ ಸಾಲ ಪಡೆಯುವ ಬ್ಯಾಂಕುಗಳು ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ. ಇದರಿಂದ ಬ್ಯಾಂಕುಗಳು ಸಾಲ ಪಡೆಯುವುದನ್ನು ಕಡಿಮೆ ಮಾಡುತ್ತವೆ ಮತ್ತು ಆ ಮೂಲಕ ಮಾರುಕಟ್ಟೆಯಲ್ಲಿ ಹಣದ ಪ್ರಮಾಣ ಕಡಿಮೆಯಾಗುತ್ತದೆ. ಇದರ ಪರಿಣಾಮದಿಂದ ಒಟ್ಟಾರೆ ಹಣದುಬ್ಬರ ಇಳಿಕೆಯಾಗುತ್ತದೆ.
ಇದನ್ನೂ ಓದಿ: ವಿದ್ಯುತ್ ಬೇಡಿಕೆ ಹೆಚ್ಚಳ: ಅನಿಲ ಆಧಾರಿತ ಸ್ಥಾವರಗಳ ಕಾರ್ಯಾರಂಭಕ್ಕೆ ಕೇಂದ್ರ ಸರ್ಕಾರ ಸೂಚನೆ - GAS BASED POWER