ಹೈದರಾಬಾದ್: ಇಂದಿನ ಯುವ ಪೀಳಿಗೆ ಕೆಲಸ ಮಾಡುತ್ತಿರಲಿ ಅಥವಾ ವ್ಯಾಪಾರ ಮಾಡುತ್ತಿರಲಿ ಸಾಕಷ್ಟು ಆದಾಯವನ್ನು ಉಳಿಸಬೇಕು ಎಂಬ ಆಸಕ್ತಿಯನ್ನು ಬಹುತೇಕರು ಹೊಂದಿದ್ದಾರೆ, ಭವಿಷ್ಯದಲ್ಲಿ ಯಾವುದೇ ಹಣಕಾಸಿನ ತೊಂದರೆಗಳನ್ನು ತಪ್ಪಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಉಳಿತಾಯದ ಹಣ ಬಳಕೆ ಮಾಡಿ ಸಂಕಷ್ಟದಿಂದ ಪಾರಾಗುವ ಯೋಜನೆ - ಯೋಚನೆ ಹೊಂದಿರುತ್ತಾರೆ. ಯಾವುದೇ ರಿಸ್ಕ್ ಇಲ್ಲದೇ ಹೂಡಿಕೆ ಮಾಡಿದ ಹಣ ಕಳೆದುಹೋಗುತ್ತದೆ ಎಂಬ ಭಯ ಇಲ್ಲದೇ ಪೋಸ್ಟ್ ಆಫೀಸ್ ಆರ್‌ಡಿ ಸ್ಕೀಮ್ನಲ್ಲಿ ಹೂಡಿಕೆ ಮಾಡಿ ಹಣ ಗಳಿಸಬಹುದು.
ಆರ್‌ಡಿ ನಾವು ಗಳಿಸಿದ ಹಣವನ್ನು ಹೂಡಿಕೆ ಮಾಡಲು ಲಭ್ಯವಿರುವ ಅತ್ಯುತ್ತಮ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ಪ್ರಸ್ತುತ ಈ ಆರ್‌ಡಿ ಯೋಜನೆ ದೇಶದ ವಿವಿಧ ಬ್ಯಾಂಕ್‌ಗಳು ಮತ್ತು ಭಾರತೀಯ ಅಂಚೆ ಕಚೇರಿಯಲ್ಲಿ ಸುಲಭವಾಗಿ ಲಭ್ಯವಾಗಿದೆ. ಬ್ಯಾಂಕ್ ಗಳಿಗೆ ಹೋಲಿಸಿದರೆ ಅಂಚೆ ಕಚೇರಿಯಲ್ಲಿಯೇ ಈ ಹೂಡಿಕೆ ಮಾಡಲು ಹೆಚ್ಚು ಜನರು ಆಸಕ್ತಿ ತೋರುತ್ತಾರೆ. ನೀವು 10 ವರ್ಷಗಳ ವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 17 ಲಕ್ಷ ರೂಪಾಯಿ ಆದಾಯಗಳಿಸಬಹುದಾಗಿದೆ.
ಆರ್‌ಡಿ( ರಿಕರಿಂಗ್ ಡಿಪಾಸಿಟ್): ಕಡಿಮೆ ಅವಧಿಯಲ್ಲಿ ಭಾರಿ ಲಾಭ ಪಡೆಯಲು ಬಯಸುವವರಿಗೆ ಪೋಸ್ಟ್ ಆಫೀಸ್ ಆರ್‌ಡಿ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ನೀವು ಮಾಸಿಕ ಆಧಾರದ ಮೇಲೆ ಉಳಿತಾಯ ಮಾಡಬಹುದು. ಈ ಯೋಜನೆಯ ಮುಕ್ತಾಯದ ಅವಧಿ ಕೇವಲ 5 ವರ್ಷಗಳು. ಕೇಂದ್ರ ಸರ್ಕಾರ ಪ್ರಸ್ತುತ ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಶೇಕಡಾ 6.7 ರ ಬಡ್ಡಿದರವನ್ನು ನೀಡುತ್ತಿದೆ. ಅಲ್ಲದೇ ಮೆಚ್ಯೂರಿಟಿಯ ನಂತರ ಬಯಸಿದಲ್ಲಿ ಈ ಯೋಜನೆಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಬಹುದು. ನೀವು ಯೋಜನೆಯಲ್ಲಿ ಕನಿಷ್ಠ 100 ರೂ.ಗಳಿಂದಲೇ ಹೂಡಿಕೆ ಮಾಡಬಹುದು. ಇದಕ್ಕೆ ಯಾವುದೇ ಗರಿಷ್ಠ ಮಿತಿಯಿಲ್ಲ. ಉದಾಹರಣೆಗೆ, ನೀವು ತಿಂಗಳಿಗೆ 1000 ರೂ.ನಂತೆ 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆ 60 ಸಾವಿರ ಆಗುತ್ತದೆ. ಇನ್ನು ಐದು ವರ್ಷ ವಿಸ್ತರಿಸಿ 10 ವರ್ಷಗಳ ನಂತರ ತೆಗೆದುಕೊಂಡರೆ ಬಡ್ಡಿ ಸೇರಿ 1.70 ಲಕ್ಷ ರೂ. ಆದಾಯ ಪಡೆದುಕೊಳ್ಳಬಹುದು.
ತಿಂಗಳಿಗೆ 10 ಸಾವಿರ ಹೂಡಿಕೆ: 10 ವರ್ಷಗಳಲ್ಲಿ ರೂ.17 ಲಕ್ಷಗಳನ್ನು ಪಡೆಯಬೇಕು ಎಂದು ಯೋಚಿಸಿದ್ದರೆ, ನೀವು ದಿನಕ್ಕೆ 333 ಹೂಡಿಕೆ ಮಾಡಬೇಕು. ಇಲ್ಲವೇ ತಿಂಗಳಿಗೆ 10 ಸಾವಿರ ರೂ ಹೂಡಿಕೆ ಮಾಡಬೇಕಾಗುತ್ತದೆ. ಈ ಯೋಜನೆಯ ಮೆಚ್ಯೂರಿಟಿ ಅವಧಿ 5 ವರ್ಷವಾಗಿರುವುದರಿಂದ, ಈ ವೇಳೆಗೆ ನಿಮ್ಮ ಒಟ್ಟು ಹೂಡಿಕೆ ಬಡ್ಡಿ ಸೇರಿ 7 ಲಕ್ಷದ 13 ಸಾವಿರ ರೂ. ಆಗುತ್ತದೆ. ನೀವು ಇನ್ನೂ 5 ವರ್ಷಗಳವರೆಗೆ ಈ ಯೋಜನೆಯನ್ನು ವಿಸ್ತರಿಸಿದರೆ 10 ವರ್ಷಗಳ ಮುಕ್ತಾಯದ ನಂತರ ನಿಮ್ಮ ಹೂಡಿಕೆಯು 12 ಲಕ್ಷ ರೂ. ಹಾಗೂ ಅದರ ಮೇಲಿನ ಬಡ್ಡಿ 5 ಲಕ್ಷದ 8 ಸಾವಿರದ 546 ಆಗಿರುತ್ತದೆ. ಅಂದರೆ 10 ವರ್ಷಗಳ ನಂತರ ನಿಮಗೆ ಅಸಲು ಮತ್ತು ಬಡ್ಡಿ ಸೇರಿ 17 ಲಕ್ಷದ 8 ಸಾವಿರದ 546 ರೂ. ಆದಾಯ ಬರುತ್ತದೆ. ಈ ಯೋಜನೆಯು ಯಾವುದೇ ರಿಸ್ಕ್ ಇಲ್ಲದೇ ತಿಂಗಳಿಗೆ 10 ಸಾವಿರ ರೂ ಹೂಡಿಕೆ ಮಾಡಿ ಸುಲಭವಾಗಿ ಹಣ ಗಳಿಸಬಹುದು.
ವಿಶೇಷ ಸೂಚನೆ: ಮೇಲಿನ ಎಲ್ಲಾ ಮಾಹಿತಿ ಮತ್ತು ಸೂಚನೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ನಾವು ಹೂಡಿಕೆ ತಜ್ಞರ ಸಲಹೆಯಂತೆ ಈ ಮಾಹಿತಿ ನೀಡುತ್ತಿದ್ದೇವೆ. ಹಾಗಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ ಸಂಪೂರ್ಣ ವಿವರಗಳನ್ನು ತಿಳಿದುಕೊಂಡು ಹೂಡಿಕೆ ಮಾಡುವುದು ಉತ್ತಮ ಮಾರ್ಗವಾಗಿರುತ್ತದೆ.