ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ವಹಿವಾಟುಗಳ ಸಂಖ್ಯೆ ಕಳೆದ ವರ್ಷದ ದ್ವಿತೀಯಾರ್ಧದಲ್ಲಿ (H2 2023) ವರ್ಷದಿಂದ ವರ್ಷಕ್ಕೆ ಶೇಕಡಾ 56 ರಷ್ಟು ದೊಡ್ಡ ಮಟ್ಟದ ಬೆಳವಣಿಗೆಯನ್ನು ಕಂಡಿದೆ. ಈ ಪ್ರಮಾಣವು 2022ರ ದ್ವಿತೀಯಾರ್ಧದಲ್ಲಿ 42.09 ಬಿಲಿಯನ್ ಇದ್ದುದು 65.77 ಬಿಲಿಯನ್ ಗೆ ತಲುಪಿದೆ ಎಂದು ಹೊಸ ವರದಿ ಬುಧವಾರ ತೋರಿಸಿದೆ.
ಇದೇ ಅವಧಿಯಲ್ಲಿ ಒಟ್ಟಾರೆ ವಹಿವಾಟುಗಳ ಮೌಲ್ಯವು 69.36 ಟ್ರಿಲಿಯನ್ ರೂ.ಗಳಿಂದ 99.68 ಟ್ರಿಲಿಯನ್ ರೂ.ಗೆ ಅಂದರೆ ಶೇಕಡಾ 44 ರಷ್ಟು ಏರಿಕೆಯಾಗಿದೆ ಎಂದು ಜಾಗತಿಕ ಪಾವತಿ ಸೇವೆಗಳ ವಿಶ್ಲೇಷಕ ಕಂಪನಿ ವರ್ಲ್ಡ್ಲೈನ್ ವರದಿ ತಿಳಿಸಿದೆ.
ಪರಿಮಾಣ ಮತ್ತು ಮೌಲ್ಯದ ದೃಷ್ಟಿಯಿಂದ ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂ ಯುಪಿಐ ಅಪ್ಲಿಕೇಶನ್ಗಳ ಪೈಕಿ ಮುಂಚೂಣಿಯಲ್ಲಿವೆ. ಡಿಸೆಂಬರ್ 2023 ರಲ್ಲಿ ಈ ಮೂರು ಅಪ್ಲಿಕೇಶನ್ಗಳು ಎಲ್ಲಾ ವಹಿವಾಟುಗಳ ಪೈಕಿ ಶೇಕಡಾ 95.4 ರಷ್ಟು ವಹಿವಾಟು ಹೊಂದಿದ್ದವು. ಇದು 2022 ರ ಡಿಸೆಂಬರ್ನಲ್ಲಿ ಶೇಕಡಾ 94.8 ರಷ್ಟಿತ್ತು.
ಯುಪಿಐ ವಹಿವಾಟಿನ ಸರಾಸರಿ ಟಿಕೆಟ್ ಗಾತ್ರ (ಎಟಿಎಸ್) 1,648 ರೂ.ಗಳಿಂದ 1,515 ರೂ.ಗೆ ಶೇಕಡಾ 8 ರಷ್ಟು ಕುಸಿದಿದೆ. ಪೀರ್-ಟು-ಪೀರ್ (ಪಿ 2 ಪಿ) ವಹಿವಾಟುಗಳಿಗೆ ಎಟಿಎಸ್ 2,649 ರೂ.ಗಳಿಂದ 2,745 ರೂ.ಗೆ ಶೇಕಡಾ 4 ರಷ್ಟು ಬೆಳವಣಿಗೆಯನ್ನು ಕಂಡಿದೆ. ಇದೇ ಅವಧಿಯಲ್ಲಿ, ಪೀರ್ ಟು ಮರ್ಚೆಂಟ್ (ಪಿ 2 ಎಂ) ವಹಿವಾಟಿನ ಎಟಿಎಸ್ 720 ರೂ.ಗಳಿಂದ 656 ರೂ.ಗೆ ಇಳಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪಾಯಿಂಟ್ ಆಫ್ ಸೇಲ್ (ಪಿಒಎಸ್) ಟರ್ಮಿನಲ್ಗಳ ಬಳಕೆಯು ಅಭೂತಪೂರ್ವ ಮಟ್ಟ ತಲುಪಿದ್ದು, ಮೊಬೈಲ್ ಪಾವತಿಗಳು ಪ್ರಬಲ ವಹಿವಾಟು ಮಾರ್ಗವಾಗಿ ಏರಿಕೆಯಾಗುತ್ತಿವೆ. ಪಿಒಎಸ್ ಟರ್ಮಿನಲ್ಗಳ ಪ್ರಮಾಣ ಶೇಕಡಾ 26 ರಷ್ಟು ಹೆಚ್ಚಾಗಿ 8.56 ಮಿಲಿಯನ್ ತಲುಪಿದೆ. ಇದರಲ್ಲಿ ಖಾಸಗಿ ವಲಯದ ಬ್ಯಾಂಕುಗಳು ಶೇಕಡಾ 73 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದರೆ, ಸಾರ್ವಜನಿಕ ವಲಯದ ಬ್ಯಾಂಕುಗಳು ಶೇಕಡಾ 18 ರಷ್ಟು ಪಾಲನ್ನು ಹೊಂದಿವೆ.
ಕಳೆದ ಒಂದು ವರ್ಷದಲ್ಲಿ ಚಲಾವಣೆಯಲ್ಲಿರುವ ಒಟ್ಟು ಕಾರ್ಡ್ಗಳ ಸಂಖ್ಯೆ ಸಾಧಾರಣ ಬೆಳವಣಿಗೆ ಕಂಡಿದೆ. ಡಿಸೆಂಬರ್ 2023 ರಲ್ಲಿ, ಒಟ್ಟು ಕಾರ್ಡ್ಗಳ ಸಂಖ್ಯೆ 1.384 ಬಿಲಿಯನ್ಗೆ ತಲುಪಿದ್ದು, ಇದು ಶೇಕಡಾ 6 ರಷ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕ್ರೆಡಿಟ್ ಕಾರ್ಡ್ಗಳ ಸಂಖ್ಯೆ ಶೇಕಡಾ 21 ರಷ್ಟು ಬೆಳವಣಿಗೆಯೊಂದಿಗೆ 97.9 ಮಿಲಿಯನ್ಗೆ ತಲುಪಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : 2024ರಲ್ಲಿ 3 ಲಕ್ಷಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನ ಮಾರಾಟ ಮಾಡಿದ ಓಲಾ - Ola Electric Vehicles