ಕಛ್ (ಗುಜರಾತ್) : ದೇಶದಲ್ಲಿ ಹೈನುಗಾರಿಕೆಯಲ್ಲಿ ಮುಂದಿರುವ ರಾಜ್ಯ ಎಂದರೆ ಅದು ಗುಜರಾತ್. ಇಲ್ಲಿನ ಹಸು, ಎಮ್ಮೆಯ ವಿಶೇಷ ತಳಿಗಳು ಹೆಚ್ಚಿನ ಹಾಲು ನೀಡುವ ಮೂಲಕ ದೇಶ, ವಿದೇಶಗಳಿಗೆ ರಫ್ತು ಮಾಡಲು ಸಾಧ್ಯವಾಗಿದೆ. ವಿಶೇಷ ತಳಿಯ ರಾಸುಗಳು ಹಾಲು ನೀಡುವಲ್ಲಿ ಮಾತ್ರವಲ್ಲದೇ ಅವುಗಳ ಮಾರಾಟ ಬೆಲೆಯಲ್ಲೂ ದಾಖಲೆ ಸೃಷ್ಟಿಸಿವೆ.
ರಾಜ್ಯದ ಕಛ್ ಜಿಲ್ಲೆಯನ್ನು ಒಣ ಪ್ರದೇಶ ಎಂದು ಕರೆಯಲಾಗುತ್ತದೆ. ಇಲ್ಲಿನ ಭೌಗೋಳಿಕ ಗುಣಲಕ್ಷಣಗಳು ವಿಭಿನ್ನವಾಗಿರುವುದು ಕೂಡ ಜನರಿಗೆ ವರವೇ. ಪರ್ವತಗಳು, ಕಾಡುಗಳು ಮತ್ತು ನದಿಗಳಿವೆ. ಹೈನುಗಾರಿಕೆಗೂ ಹೆಸರುವಾಸಿಯಾಗಿರುವ ಜಿಲ್ಲೆಯಲ್ಲಿ 'ಬನ್ನಿ' ತಳಿಯ ಎಮ್ಮೆಗಳು ದುಬಾರಿಯಾಗಿವೆ. ಹೆಚ್ಚಿನ ಬೇಡಿಕೆ ಇರುವ ಈ ತಳಿಗಳು ಲಕ್ಷಾಂತರ ರೂಪಾಯಿಗೆ ಬಿಕರಿಯಾಗುತ್ತವೆ. ಕಡಿಮೆ ನೀರು ಇರುವ ಪ್ರದೇಶಗಳಿಗೂ ಹೊಂದಿಕೊಳ್ಳುವ ಈ ಎಮ್ಮೆ ತಳಿ ಇತರ ತಳಿಗಳಿಗಿಂತ ಹಾಲು ನೀಡುವಲ್ಲಿ ಒಂದು ಕೈ ಮೇಲಿದೆ.
ದಾಖಲೆ ದರಲ್ಲಿ ಮಾರಾಟ: ಇತ್ತೀಚೆಗಷ್ಟೇ ಕಛ್ನ ಬನ್ನಿ ಎಮ್ಮೆ ದಾಖಲೆಯ ಮಟ್ಟದಲ್ಲಿ ಮಾರಾಟ ಕಂಡು ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಹಲವು ವರ್ಷಗಳಿಂದ ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡಿರುವ ಸೋನಾಲ್‌ನಗರದ ಮಂಗಲದನ್ ಗಧ್ವಿ ಎಂಬುವವರು, ಗಾಂಧಿನಗರದ ಚಂದ್ರಾಳ ಗ್ರಾಮದ ಪಶುಸಂಗೋಪಕ ಗೋಭಾಯಿ ರಾಬರಿ ಎಂಬುವರಿಂದ ಬನ್ನಿ ತಳಿಯ ಓದನ್ ಹೆಸರಿನ ಎಮ್ಮೆಯನ್ನು ಖರೀದಿಸಿದ್ದಾರೆ. ಇದಕ್ಕೆ ಅವರು ಬರೋಬ್ಬರಿ 7.11 ಲಕ್ಷ ರೂಪಾಯಿ ನೀಡಿದ್ದಾರೆ.
7 ಲಕ್ಷಕ್ಕೂ ಅಧಿಕ ಬೆಲೆ ನೀಡಿ ಒಂದು ಎಮ್ಮೆ ಖರೀದಿ ಮಾಡಿದ್ದು, ಎಲ್ಲರ ಹುಬ್ಬೇರಿಸಿದೆ. ಓದನ್ ಹೆಸರಿನ ಈ ಎಮ್ಮೆಯು ಒಂದು ಬಾರಿಗೆ 20 ಲೀಟರ್ಗೂ ಅಧಿಕ ಹಾಲು ನೀಡುತ್ತದೆ. ಹೀಗಾಗಿ ಈ ಎಮ್ಮೆಗೆ ಭಾರಿ ಬೆಲೆ ಸಿಕ್ಕಿದೆ. ಸಾಮಾನ್ಯವಾಗಿ ಉತ್ತಮ ಹಾಲು ನೀಡುವ ತಳಿಗಳ ಎಮ್ಮೆಗಳ ಬೆಲೆಯು ಅಂದಾಜು 3 ರಿಂದ 4 ಲಕ್ಷ ರೂಪಾಯಿ ಇದೆ. ಆದರೆ, ಈ ಬನ್ನಿ ತಳಿ ಎಮ್ಮೆಗೆ ಇಷ್ಟೊಂದು ಬೆಲೆ ಬಂದಿರುವುದು ಇದೇ ಮೊದಲು.
ಕಛ್ನಲ್ಲಿ ರಾಸುಗಳ ಜಾತ್ರೆಯನ್ನು ನಿಯಮಿತವಾಗಿ ಆಯೋಜಿಸಲಾಗುತ್ತದೆ. ಇದರಲ್ಲಿ ಬನ್ನಿ ತಳಿಯ ಎಮ್ಮೆಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತವೆ. ಈ ತಳಿಯ ಎಮ್ಮೆ ಆರೋಗ್ಯಕರ ಮತ್ತು ಫಿಟ್ ಆಗಿರುವುದರಿಂದ ಅದರ ಬೇಡಿಕೆ ಮತ್ತು ಬೆಲೆ ಹೆಚ್ಚಾಗಿರುತ್ತದೆ. ಹಲವು ಸ್ಪರ್ಧೆಗಳಲ್ಲಿ ಈ ಎಮ್ಮೆಗಳು ಗೆದ್ದು ತನ್ನ ಮಾಲೀಕನಿಗೆ ಪ್ರಶಸ್ತಿ ತಂದುಕೊಟ್ಟಿವೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮುಂದುವರಿದ ತೋಳದ ದಾಳಿ: ಬಿಹಾರದಲ್ಲೂ ಹೆಚ್ಚಿದ ಉಪಟಳ - wolf attack in UP