ನವದೆಹಲಿ : ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಜುಲೈನಲ್ಲಿ ಭಾರತದಲ್ಲಿ ಉದ್ಯೋಗ ನೇಮಕಾತಿಗಳು ಶೇ 12ರಷ್ಟು ಹೆಚ್ಚಳವಾಗಿದ್ದು, ಹೆಚ್ಚಿನ ವಲಯಗಳು ಅತ್ಯುತ್ತಮ ಎರಡಂಕಿ ಬೆಳವಣಿಗೆಯನ್ನು ದಾಖಲಿಸಿವೆ ಹಾಗೂ ಫಾರ್ಮಾ/ಬಯೋಟೆಕ್ ಮತ್ತು ಎಫ್ಎಂಸಿಜಿ ವಲಯಗಳು ನೇಮಕಾತಿಯಲ್ಲಿ ಮುಂಚೂಣಿಯಲ್ಲಿವೆ ಎಂದು ವರದಿಯೊಂದು ತಿಳಿಸಿದೆ.
ನೌಕ್ರಿ ಜಾಬ್ ಸ್ಪೀಕ್ ಸೂಚ್ಯಂಕದ ಪ್ರಕಾರ, ಜೂನ್ಗೆ ಹೋಲಿಸಿದರೆ, ನೇಮಕಾತಿಯಲ್ಲಿ (ತ್ರೈಮಾಸಿಕದಿಂದ ತ್ರೈಮಾಸಿಕ) ಶೇಕಡಾ 11 ರಷ್ಟು ಬೆಳವಣಿಗೆ ಕಂಡುಬಂದಿದೆ. ಫಾರ್ಮಾ/ಬಯೋಟೆಕ್ ವಲಯದಲ್ಲಿನ ಉದ್ಯೋಗ ನೇಮಕಾತಿಯು ಶೇ 26ರಷ್ಟು ಏರಿಕೆಯನ್ನು ದಾಖಲಿಸಿದ್ದು, ಬರೋಡಾ (ಶೇ 61) ಮತ್ತು ಹೈದರಾಬಾದ್ (ಶೇ 39) ನಗರಗಳಲ್ಲಿ ಹೆಚ್ಚಿನ ನೇಮಕಾತಿ ಕಂಡು ಬಂದಿದೆ.
ಹಾಗೆಯೇ ಎಫ್ಎಂಸಿಜಿ ವಲಯದಲ್ಲಿನ ನೇಮಕಾತಿ ಶೇಕಡಾ 26 ರಷ್ಟು ಏರಿಕೆಯಾಗಿದ್ದು, ಬೆಂಗಳೂರು (52 ಶೇಕಡಾ) ಮತ್ತು ಕೋಲ್ಕತ್ತಾ (43 ಶೇಕಡಾ) ಗಳಲ್ಲಿ ಹೆಚ್ಚಿನ ನೇಮಕಾತಿಗಳು ನಡೆದಿವೆ.
ದೆಹಲಿ-ಎನ್ಸಿಆರ್ ಮತ್ತು ಹೈದರಾಬಾದ್ಗಳ ರಿಯಲ್ ಎಸ್ಟೇಟ್ ವಲಯದಲ್ಲಿನ ನೇಮಕಾತಿಯು ಶೇಕಡಾ 23 ರಷ್ಟು ಬಲವಾದ ಬೆಳವಣಿಗೆಯನ್ನು ಪ್ರದರ್ಶಿಸಿದೆ ಎಂದು ಡೇಟಾ ತೋರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜುಲೈನಲ್ಲಿ ಐಟಿ ವಲಯದಲ್ಲಿನ ನೇಮಕಾತಿ ಶೇಕಡಾ 17 ರಷ್ಟು ಬೆಳವಣಿಗೆಯಾಗಿದೆ.
"ಈ ವರ್ಷದಲ್ಲಿ ಇದೇ ಮೊದಲ ಬಾರಿ ಈ ತಿಂಗಳು ನೇಮಕಾತಿಗಳು ಹೆಚ್ಚಾಗಿವೆ. ವಿಭಿನ್ನ ವಲಯಗಳು ಮತ್ತು ವಿಭಿನ್ನ ಪ್ರದೇಶಗಳಲ್ಲಿ ನೇಮಕಾತಿಗಳು ಹೆಚ್ಚಾಗಿರುವುದು ನಿಜವಾಗಿಯೂ ಭರವಸೆದಾಯಕವಾಗಿದೆ" ಎಂದು ನೌಕ್ರಿ ಜಾಬ್ ಸ್ಪೀಕ್ನ ಮುಖ್ಯ ವ್ಯವಹಾರ ಅಧಿಕಾರಿ ಡಾ. ಪವನ್ ಗೋಯಲ್ ಹೇಳಿದರು. "ಈ ವಿಶಾಲ ವ್ಯಾಪ್ತಿಯ, ಸಕಾರಾತ್ಮಕ ಬದಲಾವಣೆಯು ಭಾರತೀಯ ವೈಟ್-ಕಾಲರ್ ಉದ್ಯೋಗ ಮಾರುಕಟ್ಟೆಯ ಏರಿಕೆ ಪರ್ವದ ಆರಂಭವಾಗಿರಬಹುದು" ಎಂದು ಅವರು ಹೇಳಿದರು.
ಯಂತ್ರ ಕಲಿಕೆ ಎಂಜಿನಿಯರ್ಗಳು, ಡೇಟಾ ಸೈಂಟಿಸ್ಟ್, ಬಿಐ ವ್ಯವಸ್ಥಾಪಕರು ಮತ್ತು ಉತ್ಪನ್ನ ವ್ಯವಸ್ಥಾಪಕ ಹುದ್ದೆಗಳಿಗೆ ಪ್ರಸ್ತುತ ಅತ್ಯಧಿಕ ನೇಮಕಾತಿ ನಡೆಯುತ್ತಿದೆ. ದೆಹಲಿ-ಎನ್ ಸಿಆರ್ ಮತ್ತು ಹೈದರಾಬಾದ್ಗಳಲ್ಲಿ ನಡೆದ ನೇಮಕಾತಿಯಿಂದ ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಶೇಕಡಾ 12 ರಷ್ಟು ಹೆಚ್ಚಿನ ನೇಮಕಾತಿಯನ್ನು ಕಂಡಿವೆ. ನೇಮಕಾತಿಯಲ್ಲಿ ರಾಜ್ ಕೋಟ್, ಜಾಮ್ ನಗರ್ ಮತ್ತು ಬರೋಡಾ ಕ್ರಮವಾಗಿ ಶೇ 39, ಶೇ 38 ಮತ್ತು ಶೇ 25ರಷ್ಟು ಬೆಳವಣಿಗೆ ದಾಖಲಿಸಿವೆ. ವರದಿಯ ಪ್ರಕಾರ, ಹೈದರಾಬಾದ್ ಉದ್ಯೋಗ ಸೃಷ್ಟಿಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ : ರಾಜಸ್ಥಾನದ 700 ಮೆಗಾವ್ಯಾಟ್ ಘಟಕದಲ್ಲಿ ಪರಮಾಣು ಇಂಧನ ಲೋಡಿಂಗ್ ಪ್ರಾರಂಭ - Nuclear Power Project