ನವದೆಹಲಿ: ಪ್ರಸ್ತುತ 3.1 ಬಿಲಿಯನ್ ಡಾಲರ್ ಮೌಲ್ಯದ ಭಾರತದ ಆನ್ ಲೈನ್ ಗೇಮಿಂಗ್ ವಲಯವು 2034 ರ ವೇಳೆಗೆ 60 ಬಿಲಿಯನ್ ಡಾಲರ್ಗೆ ಬೆಳವಣಿಗೆಯಾಗುವ ಸಾಮರ್ಥ್ಯ ಹೊಂದಿದೆ ಎಂದು ವರದಿಯೊಂದು ಸೋಮವಾರ ತೋರಿಸಿದೆ. ಭಾರತದ ಗೇಮಿಂಗ್ ಕ್ಷೇತ್ರಕ್ಕೆ ಅಮೆರಿಕ ಗಮನಾರ್ಹ ಕೊಡುಗೆ ನೀಡುತ್ತಿದ್ದು, ಗೇಮಿಂಗ್ ವಲಯಕ್ಕೆ ಬಂದ ಒಟ್ಟು 2.5 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆಯ (ಎಫ್ಡಿಐ) ಪೈಕಿ 1.7 ಬಿಲಿಯನ್ ಡಾಲರ್ ಅಮೆರಿಕದಿಂದಲೇ ಬಂದಿದೆ. ವಿಶೇಷವೆಂದರೆ, ಈ ಎಫ್ಡಿಐ ಪೈಕಿ ಶೇಕಡಾ 90 ರಷ್ಟು ಎಫ್ಡಿಐ ಪೇ-ಟು-ಪ್ಲೇ ವಿಭಾಗಕ್ಕೆ ಹರಿದು ಬಂದಿದ್ದು, ಇದು ವಲಯದ ಒಟ್ಟಾರೆ ಮೌಲ್ಯಮಾಪನದ ಶೇಕಡಾ 85 ರಷ್ಟಿದೆ.
"ಇದು ವೇಗವಾಗಿ ಬೆಳೆಯುತ್ತಿರುವ ಭಾರತದ ಗೇಮಿಂಗ್ ಮಾರುಕಟ್ಟೆಯಲ್ಲಿ ಜಾಗತಿಕ ಹೂಡಿಕೆದಾರರು ಹೊಂದಿರುವ ಅಪಾರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. 2034 ರ ವೇಳೆಗೆ ಭಾರತದ ಗೇಮಿಂಗ್ ಉದ್ಯಮ 60 ಬಿಲಿಯನ್ ಡಾಲರ್ಗೆ ವೃದ್ಧಿಯಾಗಲಿದೆ" ಎಂದು ಯುನೈಟೆಡ್ ಸ್ಟೇಟ್ಸ್ ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟರ್ಶಿಪ್ ಫೋರಂ (ಯುಎಸ್ಐಎಸ್ಪಿಎಫ್) ಅಧ್ಯಕ್ಷ ಮತ್ತು ಸಿಇಒ ಡಾ. ಮುಕೇಶ ಅಘಿ ಹೇಳಿದರು.
ಗೇಮರ್ಗಳ ಠೇವಣಿ ಮೇಲೆ ಶೇ 28ರಷ್ಟು GST: ಆದಾಗ್ಯೂ, ಕಾನೂನು ಮತ್ತು ತೆರಿಗೆ ವಿಷಯದ ಸಮಸ್ಯೆಗಳು ಮುಂದುವರಿದಿವೆ. ಭಾರತದಲ್ಲಿ ಗೇಮರ್ಗಳ ಠೇವಣಿಯ ಮೇಲೆ ಅತಿ ಹೆಚ್ಚು ಶೇ 28ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ ಎಂದು ಯುಎಸ್ಐಎಸ್ಪಿಎಫ್ ಮತ್ತು ಟಿಎಂಟಿ ಲಾ ಪ್ರಾಕ್ಟೀಸ್ ವರದಿ ಹೇಳಿದೆ. ಜಾಗತಿಕವಾಗಿ ದೇಶೀಯ ನ್ಯಾಯವ್ಯಾಪ್ತಿಗಳಲ್ಲಿ ತೆರಿಗೆಗೆ ಆಧಾರವನ್ನು ರೂಪಿಸುವ ವಿಶ್ವಸಂಸ್ಥೆಯ ಕೇಂದ್ರ ಉತ್ಪನ್ನ ವರ್ಗೀಕರಣ (ಯುಎನ್ ಸಿಪಿಸಿ) ಆನ್ ಲೈನ್ ಗೇಮಿಂಗ್ ಅನ್ನು ಆನ್ ಲೈನ್ ಜೂಜಾಟದಿಂದ ಪ್ರತ್ಯೇಕವಾಗಿ ವ್ಯಾಖ್ಯಾನಿಸುತ್ತದೆ ಎಂಬುದನ್ನು ವರದಿಯು ಎತ್ತಿ ತೋರಿಸಿದೆ.
"600 ದಶಲಕ್ಷಕ್ಕೂ ಹೆಚ್ಚು ಗೇಮರ್ಗಳ ದೊಡ್ಡ ಗ್ರಾಹಕ ನೆಲೆಯನ್ನು ಹೊಂದಿರುವ ಗೇಮಿಂಗ್ ಉದ್ಯಮದಲ್ಲಿ ವೇಗವಾಗಿ ಹಣ ಗಳಿಸುವ ಅವಕಾಶಗಳು ಹೆಚ್ಚಾಗುತ್ತಿವೆ ಮತ್ತು ಉದ್ಯಮ ಗಣನೀಯ ರಫ್ತು ಅವಕಾಶವನ್ನು ಒದಗಿಸುತ್ತಿದೆ. ಆದಾಗ್ಯೂ, ಭಾರತೀಯ ಕಂಪನಿಗಳು ಜಾಗತಿಕ ವೇದಿಕೆಯಲ್ಲಿ ಸ್ಪರ್ಧಿಸಲು, ಅಂತರರಾಷ್ಟ್ರೀಯ ಮಾನದಂಡಗಳಿಗೆ ಹೊಂದಿಕೆಯಾಗುವ ಪ್ರಗತಿಪರ ತೆರಿಗೆ ಮತ್ತು ನಿಯಂತ್ರಕ ನೀತಿಗಳೊಂದಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದು ಅಗತ್ಯವಿದೆ" ಎಂದು ಅಘಿ ಹೇಳಿದರು.
ವರದಿಯು 12 ಪ್ರಮುಖ ಗೇಮಿಂಗ್ ಮಾರುಕಟ್ಟೆಯಲ್ಲಿನ ನಿಯಂತ್ರಕ ಚೌಕಟ್ಟುಗಳು ಮತ್ತು ತೆರಿಗೆ ನೀತಿಗಳನ್ನು ಪರಿಶೀಲಿಸಿದೆ. ಎಲ್ಲಾ 12 ದೇಶಗಳು ಅವಕಾಶದ ಗೇಮ್ಗಳಿಗೆ (games of chance) ಪ್ರತ್ಯೇಕ ಕಾನೂನು ವ್ಯಾಖ್ಯಾನವನ್ನು ಹೊಂದಿವೆ ಎಂದು ಅದು ಹೇಳಿದೆ. ಇದು ಕೌಶಲ್ಯ ಗೇಮಿಂಗ್ ಸ್ವರೂಪಗಳಿಂದ ಸ್ಪಷ್ಟ ವ್ಯತ್ಯಾಸವನ್ನು ಖಚಿತಪಡಿಸುತ್ತದೆ.
ಇದನ್ನೂ ಓದಿ : ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ: ಟಿಕೆಟ್ ದರ ಶೇ 20 ರಿಂದ 25ರಷ್ಟು ಇಳಿಕೆ