ನವದೆಹಲಿ : ಭಾರತೀಯ ಸ್ಟಾರ್ಟ್ಅಪ್ಗಳು ಕಳೆದ ವಾರ 10 ಡೀಲ್ಗಳ ಮೂಲಕ 97.3 ಮಿಲಿಯನ್ ಡಾಲರ್ ಫಂಡಿಂಗ್ ಸಂಗ್ರಹಿಸಿವೆ. ಲೋಕಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾಗುತ್ತಿರುವ ಮಧ್ಯದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ವ್ಯವಸ್ಥೆಯಾಗಿರುವ ಭಾರತೀಯ ಸ್ಟಾರ್ಟ್ಅಪ್ಗಳು ಈ ಸಾಧನೆ ಮಾಡಿವೆ.
ಫಿನ್ ಟೆಕ್ ವಲಯವು ಒಟ್ಟಾರೆ ಸ್ಟಾರ್ಟ್ಅಪ್ ಫಂಡಿಂಗ್ ಸಂಗ್ರಹದಲ್ಲಿ ಮುಂಚೂಣಿಯಲ್ಲಿದೆ. ಟಿಆರ್ ಕ್ಯಾಪಿಟಲ್, ಟ್ರೈಫೆಕ್ಟಾ ಕ್ಯಾಪಿಟಲ್ ಮತ್ತು ಅಮರಾ ಪಾರ್ಟನರ್ಸ್ ನೇತೃತ್ವದಲ್ಲಿ ಡಿಜಿಟಲ್ ಸಾಲ ನೀಡುವ ಪ್ಲಾಟ್ಫಾರ್ಮ್ ಫಿಬೆ (Fibe) 90 ಮಿಲಿಯನ್ ಡಾಲರ್ (ಪ್ರಾಥಮಿಕ ಬಂಡವಾಳದಲ್ಲಿ 65.5 ಮಿಲಿಯನ್ ಡಾಲರ್ ಮತ್ತು ಉಳಿದವು ದ್ವಿತೀಯ ವಹಿವಾಟಿನ ಮೂಲಕ) ಪಡೆದುಕೊಂಡಿದೆ.
ಫಿಬೆಯ ಸಹ- ಸಂಸ್ಥಾಪಕ ಮತ್ತು ಸಿಇಒ ಅಕ್ಷಯ್ ಮೆಹ್ರೋತ್ರಾ ಮಾತನಾಡಿ, ಈ ಬಂಡವಾಳ ಸಂಗ್ರಹದ ಸಹಾಯದಿಂದ ನಮ್ಮ ಕಂಪನಿಯು ತನ್ನ ವ್ಯಾಪ್ತಿಯನ್ನು ವಿಸ್ತರಿಸಲು, ತಾಂತ್ರಿಕ ಮೂಲಸೌಕರ್ಯ ಬಲಪಡಿಸಲು ಮತ್ತು ದೇಶಾದ್ಯಂತ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸಲು ಸಜ್ಜಾಗಿದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ (ಎಐ) ಚಾಲಿತ, ಲೋ-ಕೋಡ್ ಟೆಸ್ಟ್ ಆಟೋಮೇಷನ್ ಪ್ಲಾಟ್ ಫಾರ್ಮ್ ಆಗಿರುವ ಟೆಸ್ಟ್ ಸಿಗ್ಮಾ ಮಾಸ್ ಮ್ಯೂಚುವಲ್ ವೆಂಚರ್ಸ್ ಕಡೆಯಿಂದ 8.2 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದೆ. ಇದು ಈ ಹಿಂದೆ ವೆಂಚರ್ ಕ್ಯಾಪಿಟಲ್ ಸಂಸ್ಥೆ ಆಕ್ಸೆಲ್ನಿಂದ 4.6 ಮಿಲಿಯನ್ ಡಾಲರ್ ಸಂಗ್ರಹಿಸಿತ್ತು.
ಮತ್ತೊಂದು ಎಐ ಚಾಲಿತ ಸೇಲ್ಸ್ ಪ್ಲಾಟ್ ಫಾರ್ಮ್ ಕ್ಲೋಡುರಾ ಡಾಟ್ ಎಐ (Clodura AI) ಮಲ್ಪಾನಿ ವೆಂಚರ್ಸ್ನ ಹೆಚ್ಚುವರಿ ಬೆಂಬಲದೊಂದಿಗೆ ಭಾರತ್ ಇನ್ನೋವೇಶನ್ ಫಂಡ್ ನೇತೃತ್ವದಲ್ಲಿ 2 ಮಿಲಿಯನ್ ಡಾಲರ್ ಸಂಗ್ರಹಿಸಿದೆ.
ಪ್ರಾಥಮಿಕ ಸ್ಟಾರ್ಟ್ಅಪ್ ಧನಸಹಾಯದ ಹೊರತಾಗಿ, ನೇತ್ರ ಸಾಧನಗಳ ಪ್ರಮುಖ ರಿಟೇಲ್ ಕಂಪನಿ ಲೆನ್ಸ್ ಕಾರ್ಟ್ ಜಾಗತಿಕ ಹೂಡಿಕೆ ಸಂಸ್ಥೆಗಳಾದ ಟೆಮಾಸೆಕ್ ಮತ್ತು ಫಿಡೆಲಿಟಿ ಮ್ಯಾನೇಜಮೆಂಟ್ ಅಂಡ್ ರಿಸರ್ಚ್ ಕಂಪನಿ (ಎಫ್ಎಂಆರ್) ಗಳಿಂದ ದ್ವಿತೀಯ ಹಂತದ ಹೂಡಿಕೆಯಲ್ಲಿ 200 ಮಿಲಿಯನ್ ಡಾಲರ್ ಫಂಡಿಂಗ್ ಸಂಗ್ರಹಿಸಿದೆ.
ಸ್ಟಾರ್ಟ್ಅಪ್ ಎಂಬುದು ವ್ಯವಹಾರದ ಆರಂಭಿಕ ಹಂತದಲ್ಲಿರುವ ಕಂಪನಿಯಾಗಿದೆ. ಇಂಥ ಕಂಪನಿಗಳ ಸಂಸ್ಥಾಪಕರು ಆರಂಭದಲ್ಲಿ ತಮ್ಮ ಸ್ಟಾರ್ಟ್ಅಪ್ ಗಳಿಗೆ ಹಣಕಾಸು ಒದಗಿಸುತ್ತಾರೆ ಮತ್ತು ವ್ಯವಹಾರವನ್ನು ವಿಸ್ತರಿಸಲು ಹೊರಗಿನಿಂದ ಹೂಡಿಕೆಗಳನ್ನು ತರಲು ಪ್ರಯತ್ನಿಸುತ್ತಾರೆ. ಕುಟುಂಬ ಮತ್ತು ಸ್ನೇಹಿತರು, ವೆಂಚರ್ ಕ್ಯಾಪಿಟಲ್ಸ್, ಕ್ರೌಡ್ ಫಂಡಿಂಗ್ ಮತ್ತು ಸಾಲ ಹೀಗೆ ಹಲವಾರು ಮೂಲಗಳಿಂದ ಇವರು ಹಣ ಸಂಗ್ರಹಿಸುತ್ತಾರೆ.