ನವದೆಹಲಿ: 2024-25ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7ರಷ್ಟು ಬೆಳವಣಿಗೆ ಹೊಂದಲಿದೆ ಎಂದು ಕೇಂದ್ರ ಹಣಕಾಸು ಇಲಾಖೆ ತನ್ನ ಮಾಸಿಕ ಪರಿಶೀಲನಾ ವರದಿಯಲ್ಲಿ ತಿಳಿಸಿದೆ. ದೇಶೀಯ ಬೇಡಿಕೆ ಹೆಚ್ಚಳದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಆರ್ಥಿಕತೆ ಶೇ 7ರ ದರದಲ್ಲಿ ಅಭಿವೃದ್ಧಿ ಕಾಣುತ್ತಿದೆ ಎಂದು ಅಂದಾಜಿಸಲಾಗಿದೆ.
ಭಾರತದ ಆರ್ಥಿಕತೆಯು 2022 - 23ರಲ್ಲಿ ಶೇ.7.2 ಮತ್ತು 2021-22ರಲ್ಲಿ ಶೇ.8.7ರಷ್ಟು ಬೆಳವಣಿಗೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2023 - 24 ರಲ್ಲಿ ಭಾರತದ ಆರ್ಥಿಕತೆಯು 7.3 ಶೇಕಡಾ ಬೆಳವಣಿಗೆ ನಿರೀಕ್ಷಿಸಲಾಗಿದೆ. ಈ ಅಂಕಿ - ಅಂಶಗಳು ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವ ಸಂಕೇತಗಳನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ದೇಶೀಯ ಬೇಡಿಕೆ - ಖಾಸಗಿ ಬಳಕೆ ಮತ್ತು ಹೂಡಿಕೆಯಲ್ಲಿ ಕಂಡು ಬರುತ್ತಿರುವ ದೃಢತೆಯು ಈ ಬೆಳವಣಿಗೆಗೆ ಕಾರಣವಾಗಿದೆ. ಕಳೆದ 10 ವರ್ಷಗಳಲ್ಲಿ ಸರ್ಕಾರವು ಜಾರಿಗೊಳಿಸಿದ ಸುಧಾರಣೆ ಕ್ರಮಗಳಿಂದ ದೇಶದ ಆರ್ಥಿಕತೆ ಚೇತರಿಕೆ ಕಂಡಿದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿದ ವರದಿ ಹೇಳಿದೆ.
"ಮೂಲಸೌಕರ್ಯ - ಭೌತಿಕ ಮತ್ತು ಡಿಜಿಟಲ್ - ಮತ್ತು ಉತ್ಪಾದನೆ ಉತ್ತೇಜಿಸುವ ಗುರಿ ಹೊಂದಿರುವ ಕ್ರಮಗಳ ಹೂಡಿಕೆಯೊಂದಿಗೆ ಪೂರೈಕೆಯ ಭಾಗವನ್ನು ಬಲಪಡಿಸಲಾಗಿದೆ. ಇವುಗಳು ದೇಶದ ಆರ್ಥಿಕ ಚಟುವಟಿಕೆಗೆ ಪ್ರಚೋದನೆಯನ್ನು ಒದಗಿಸುತ್ತವೆ" ಎಂದು ಪರಿಶೀಲನಾ ವರದಿಯಲ್ಲಿ ಹೇಳಲಾಗಿದೆ. "ಅದರ ಪ್ರಕಾರ, FY25 ರಲ್ಲಿ, ನೈಜ GDP ಬೆಳವಣಿಗೆಯು ಶೇಕಡಾ 7 ಕ್ಕೆ ಹತ್ತಿರದಲ್ಲಿದೆ."
ಆದಾಗ್ಯೂ, 2030 ರ ವೇಳೆಗೆ ಬೆಳವಣಿಗೆಯ ದರವು ಶೇಕಡಾ 7 ಕ್ಕಿಂತ ಹೆಚ್ಚಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. "ಶೀಘ್ರವಾಗಿ ವಿಸ್ತರಿಸುತ್ತಿರುವ ಡಿಜಿಟಲ್ ಮೂಲಸೌಕರ್ಯವು ಸಾಂಸ್ಥಿಕ ದಕ್ಷತೆಯನ್ನು ನಿರಂತರವಾಗಿ ಸುಧಾರಿಸುತ್ತಿದೆ. ಸರಕು ಮತ್ತು ಸೇವೆಗಳ ಉತ್ಪಾದನೆಯಲ್ಲಿ ವಿದೇಶಿ ಪಾಲುದಾರರೊಂದಿಗೆ ಹೆಚ್ಚುತ್ತಿರುವ ಸಹಯೋಗದೊಂದಿಗೆ ತಾಂತ್ರಿಕ ಪ್ರಗತಿಯು ವೇಗವನ್ನು ಪಡೆದುಕೊಂಡಿದೆ. ಬಂಡವಾಳ ರಚನೆಯನ್ನು ವೇಗಗೊಳಿಸಲು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಂತಿಮವಾಗಿ, ಒಟ್ಟಾರೆ ಹೂಡಿಕೆ ವಾತಾವರಣ ಆರ್ಥಿಕ ಚೇತರಿಕೆ ಕಾರಣವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಮುಂದಿನ ಮೂರು ವರ್ಷಗಳಲ್ಲಿ ಭಾರತವು 5 ಟ್ರಿಲಿಯನ್ ಅಮೆರಿಕನ್ ಡಾಲರ್ ಜಿಡಿಪಿಯೊಂದಿಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ. ಮುಂದಿನ ಆರರಿಂದ ಏಳು ವರ್ಷಗಳಲ್ಲಿ (2030 ರ ವೇಳೆಗೆ) ಭಾರತವು USD 7 ಟ್ರಿಲಿಯನ್ ಆರ್ಥಿಕತೆ ಹೊಂದಲೂಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. "ಭಾರತೀಯರ ಆಕಾಂಕ್ಷೆಗಳಿಗೆ ಹೊಂದಿಕೆಯಾಗುವ ಮತ್ತು ಅದನ್ನೂ ಮೀರಿದ ಜೀವನ ಗುಣಮಟ್ಟ ಮತ್ತು ಜೀವನ ಮಟ್ಟವನ್ನು ತಲುಪಿಸುವ ಪ್ರಯಾಣದಲ್ಲಿ ಇದು ಮಹತ್ವದ ಮೈಲಿಗಲ್ಲು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಬ್ಯಾಂಕುಗಳ ಸಾಲ ಮತ್ತು ಠೇವಣಿ ಬೆಳವಣಿಗೆಯ ಅಂತರ ಹೆಚ್ಚಳ; ಆರ್ಬಿಐ