ಮುಂಬೈ : ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ ಬೆಳೆಯುತ್ತಿರುವ ಭಾರತದ ಚಿಲ್ಲರೆ ಮಾರುಕಟ್ಟೆ ಮುಂದಿನ 10 ವರ್ಷಗಳಲ್ಲಿ 2 ಟ್ರಿಲಿಯನ್ ಡಾಲರ್ಗೆ ಬೆಳವಣಿಗೆಯಾಗುವ ನಿರೀಕ್ಷೆಯಿದೆ ಹಾಗೂ ಇದು ಚಿಲ್ಲರೆ ವ್ಯಾಪಾರಿಗಳಿಗೆ ದೊಡ್ಡ ಅವಕಾಶಗಳನ್ನು ತೆರೆಯಲಿದೆ ಎಂದು ಹೊಸ ವರದಿಯೊಂದು ಬುಧವಾರ ತೋರಿಸಿದೆ. ಭಾರತವು ಪ್ರಸಕ್ತ ಅಗ್ರ ಐದು ಜಾಗತಿಕ ಆರ್ಥಿಕತೆಗಳ ಪೈಕಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ ಮತ್ತು 2030 ರ ವೇಳೆಗೆ ಮೂರನೇ ಅತಿದೊಡ್ಡ ಜಿಡಿಪಿ ದೇಶವಾಗುವ ನಿರೀಕ್ಷೆಯಿದೆ.
ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ಮತ್ತು ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಆರ್ಎಐ) ವರದಿಯ ಪ್ರಕಾರ, ಭಾರತದ ಚಿಲ್ಲರೆ ಮಾರುಕಟ್ಟೆ ಶೇಕಡಾ 9 ರಿಂದ 10 ರಷ್ಟು ದರದಲ್ಲಿ ಬೆಳವಣಿಗೆಯಾಗುವ ಸಾಧ್ಯತೆಯಿದೆ.
"ಭಾರತೀಯ ಚಿಲ್ಲರೆ ಮಾರುಕಟ್ಟೆ ಕ್ಷೇತ್ರವು ಮುಂದಿನ ದಶಕದಲ್ಲಿ ದ್ವಿಗುಣಗೊಂಡು 2 ಟ್ರಿಲಿಯನ್ ಡಾಲರ್ಗೆ ತಲುಪಲಿದೆ." ಎಂದು ಬಿಸಿಜಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಹಿರಿಯ ಪಾಲುದಾರ ಅಭೀಕ್ ಸಿಂಘಿ ಹೇಳಿದರು. "ಇ-ಕಾಮರ್ಸ್ ವಲಯ ಬೆಳೆವಣಿಗೆಯಾಗುತ್ತಿದ್ದರೂ ಈ ವರ್ಷ ನಿವ್ವಳ ಹೊಸ ಬಳಕೆದಾರರ ಸೇರ್ಪಡೆಯು ನಿಧಾನಗತಿಯಲ್ಲಿದೆ ಮತ್ತು ಆನ್ ಲೈನ್ನ ಪಾತ್ರ ಮತ್ತು ಪ್ರಸ್ತಾಪವನ್ನು ಮರು ಕಲ್ಪಿಸಿಕೊಳ್ಳಬೇಕಾಗಿದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಳಿಗೆಗಳ ಸಂಖ್ಯೆಗಳು ಹೆಚ್ಚಾಗುತ್ತಿದ್ದು, ಹೆಚ್ಚುತ್ತಿರುವ ನಗರೀಕರಣದೊಂದಿಗೆ ಶ್ರೇಣಿ 1 ರಿಂದ 4ನೇ ಶ್ರೇಣಿಯ ನಗರಗಳಲ್ಲಿ ಹೆಚ್ಚಿನ ಬಳಕೆ ಕಂಡು ಬರುವ ನಿರೀಕ್ಷೆಯಿದೆ. ಜನರ ಆದಾಯದ ಬೆಳವಣಿಗೆ ಸ್ಥಿರವಾಗಿ ಉಳಿದಿದ್ದು, ಗ್ರಾಹಕರು ತಮ್ಮ ವೈಯಕ್ತಿಕ ಆದಾಯ ಹೆಚ್ಚಾಗುವ ಬಗ್ಗೆ ಆಶಾವಾದಿಗಳಾಗಿದ್ದಾರೆ ಎಂದು ವರದಿ ಹೇಳಿದೆ.
"ಸಂಘಟಿತ ಚಿಲ್ಲರೆ ವ್ಯಾಪಾರಿಗಳು ಕಾರ್ಯಕ್ಷಮತೆಯನ್ನು ಉಳಿಸಿಕೊಳ್ಳಬೇಕು ಮತ್ತು ತಮ್ಮ ವ್ಯಾಪಾರದ ಪಾಲು ಬೆಳೆಸುವುದನ್ನು ಮುಂದುವರಿಸಬೇಕು. ಚಿಲ್ಲರೆ ವ್ಯಾಪಾರವು ಬೆಳವಣಿಗೆಯ ವೇಗ ಮತ್ತು ಗಾತ್ರದ ಮೇಲೆ ಪರಿಣಾಮ ಬೀರುವ ಪ್ರಮುಖ ಬದಲಾವಣೆಗಳ ಹಂತದಲ್ಲಿ ಸಾಗುತ್ತಿದೆ" ಎಂದು ಸಂಶೋಧನೆಗಳು ತೋರಿಸಿವೆ.
ಭಾರತದ ಚಿಲ್ಲರೆ ಮಾರುಕಟ್ಟೆಯ ಭವಿಷ್ಯದ ಬಗ್ಗೆ ಮಾತನಾಡಿದ ಆರ್ಎಐ ಸಿಇಒ ಕುಮಾರ್ ರಾಜಗೋಪಾಲನ್, "ವೈಯಕ್ತಿಕಗೊಳಿಸಿದ ಗ್ರಾಹಕರ ಅನುಭವಗಳ ಮೇಲೆ ಗಮನ ಕೇಂದ್ರೀಕರಿಸುವ, ಹೊಸ ಸಹಯೋಗಗಳನ್ನು ಅನ್ವೇಷಿಸುವ ಮತ್ತು ಎಐ ಅನ್ನು ಬಳಸಿಕೊಳ್ಳುವ ಮೂಲಕ ನಾವು ಭಾರತದ ಚಿಲ್ಲರೆ ಉದ್ಯಮವನ್ನು ಅಭೂತಪೂರ್ವ ಬೆಳವಣಿಗೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯತ್ತ ಕೊಂಡೊಯ್ಯಬಹುದು" ಎಂದರು.
ಇದನ್ನೂ ಓದಿ : 45 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಕ್ಕೆ ಮುಂದಾದ ವೊಡಾಫೋನ್ ಐಡಿಯಾ