ಮುಂಬೈ: ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯ ಪ್ರಸ್ತುತ 2 ಮಿಲಿಯನ್ ಜನರಿಗೆ ಉದ್ಯೋಗ ನೀಡಿದ್ದು, ಮುಂದಿನ ದಿನದಲ್ಲಿ ಸ್ಥಳೀಯ ಚಿಪ್ ಉತ್ಪಾದನಾ ಘಟಕಗಳಿಂದ 4.5 ಮಿಲಿಯನ್ ಉದ್ಯೋಗ ಸೃಷ್ಟಿಸಲಿದೆ ಎಂದು ಐಟಿ ಸಚಿವಾಲಯದ ಕಾರ್ಯದರ್ಶಿ ಎಸ್.ಕೃಷ್ಣನ್ ತಿಳಿಸಿದ್ದಾರೆ.
ಭಾರತದ ಡಿಜಿಟಲ್ ಶೃಂಗಸಭೆಯಲ್ಲಿ (2024) ಮಾತನಾಡಿದ ಅವರು, ದೇಶದಲ್ಲಿ ಮುಂದಿನ ದಿನದಲ್ಲಿ ಸೆಮಿಕಂಡಕ್ಟರ್ ಹೆಚ್ಚಿನ ಬೆಳವಣಿಗೆ ಕಾಣುವ ಕ್ಷೇತ್ರವಾಗಿದೆ. ಹೆಚ್ಚಿನ ಕಂಪನಿಗಳು ಈ ಕ್ಷೇತ್ರಕ್ಕೆ ಬರುತ್ತಿವೆ. ಅವರಿಗೆ ಅಗತ್ಯ ನೆರವು ನೀಡಲಾಗುತ್ತಿದೆ. ಈ ಕ್ಷೇತ್ರವು ಮುಂದಿನ ಐದರಿಂದ ಹತ್ತು ವರ್ಷದಲ್ಲಿ ವೇಗದ ಬೆಳವಣಿಗೆ ಕಾಣಿಲಿದೆ. ಇದರಲ್ಲಿ ಹೆಚ್ಚಿನ ಆಸಕ್ತಿಯ ಕ್ಷೇತ್ರ ಸೆಮಿಕಂಡಕ್ಟರ್ ಆಗಿದ್ದು, ಇದು ಮುಕ್ತವಾಗಿದೆ ಎಂದರು. ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದಲ್ಲಿ ನಾವು ಸರಿಸುಮಾರು 2 ಮಿಲಿಯನ್ ಉದ್ಯೋಗಿಗಳನ್ನು ಹೊಂದಿದ್ದು, ಈ ಸಂಖ್ಯೆ 4.5 ಮಿಲಿಯನ್ ತಲುಪಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಡ್ರೀಮ್ಸ್ ಸ್ಪೋರ್ಟ್ ಗ್ರೂಪ್ ಪ್ರಧಾನ ಸಮಾಲೋಚಕ ದೀಪಕ್ ಜಾಕೋಬ್ ಜೊತೆ ಚರ್ಚೆಯ ವೇಳೆ ಮಾತನಾಡಿದ ಕೃಷ್ಣನ್, ಮುಂದಿನ ಕೆಲವು ವರ್ಷದಲ್ಲಿ ಡಿಜಿಟಲ್ ಆರ್ಥಿಕತೆ ವೇಗದ ಬೆಳವಣಿಗೆ ನಿರೀಕ್ಷಿಸಲಾಗಿದೆ. ಗ್ರಾಹಕರ ರಕ್ಷಣೆ ಮತ್ತು ವೈವಿಧ್ಯತೆ ಅವಶ್ಯಕತೆ ಕುರಿತು ಮಾತನಾಡಿದ ಅವರು, ಬಳಕೆದಾರರ ಮಾಹಿತಿಗಳ ರಕ್ಷಣೆ ಮಾಡುವಲ್ಲಿ ನಿಯಂತ್ರಣಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದ್ದೇವೆ ಎಂದರು.
ದೇಶದ ಸಾಫ್ಟ್ವೇರ್ ಉತ್ಪಾದನೆಯು 200ರಿಂದ 250 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯ ಹೊಂದಿದ್ದರೆ, ಎಲೆಕ್ಟ್ರಾನಿಕ್ ಉತ್ಪಾದನೆಯು ವರ್ಷಕ್ಕೆ 100 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯ ಹೊಂದಿದೆ. ನಾವು ಮುಂದಿನ ಐದು ವರ್ಷದಲ್ಲಿ ಈ ವಲಯದಲ್ಲಿ 1 ಟ್ರಿಲಿಯನ್ ಬೆಳವಣಿಗೆ ಬಯಸುತ್ತಿದ್ದೇವೆ ಎಂದು ಹೇಳಿದರು.
ಎಲೆಕ್ಟ್ರಾನಿಕ್ ಉತ್ಪಾದನಾ ವಲಯ ವಿಶಾಲ ಉದ್ಯೋಗಾವಕಾಶವನ್ನು ಒದಗಿಸುತ್ತಿದ್ದು, ದೇಶದ ಜಿಡಿಪಿಗೆ ಶೇ 25ರಷ್ಟು ಕೊಡುಗೆ ನೀಡುತ್ತಿದೆ. ಶೀಘ್ರದಲ್ಲೇ ಭಾರತದ ಎಲೆಕ್ಟ್ರಾನಿಕ್ ಉತ್ಪಾದನಾ ವಲಯ ಅತಿ ದೊಡ್ಡ ವಲಯವಾಗಿ ಹೊರಹೊಮ್ಮಲಿದೆ. ನಾವು ಇದೀಗ ಐದನೇ ದೊಡ್ಡ ಆರ್ಥಿಕತೆ ಹೊಂದಿದ್ದು, ಮೂರನೇ ಅತಿ ದೊಡ್ಡ ಆರ್ಥಿಕತೆಯತ್ತ ಬೆಳೆಯುತ್ತಿದೆ. ದೇಶದ ಸೆಮಿಕಂಡಕ್ಟರ್ ಯೋಜನೆ ಮಹತ್ವಾಕಾಂಕ್ಷೆ ಮತ್ತು ಉದಾರ ಯೋಜನೆಯಾಗಿದೆ. ಸೆಮಿಕಂಡಕ್ಟರ್ ವಲಯದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದರು.
ಇದನ್ನೂ ಓದಿ: 10 ವರ್ಷಗಳಲ್ಲಿ $2 ಟ್ರಿಲಿಯನ್ ತಲುಪಲಿದೆ ಭಾರತದ ರಿಟೇಲ್ ಮಾರುಕಟ್ಟೆ: ಸಂಶೋಧನಾ ವರದಿ