ಹೈದರಾಬಾದ್: ಇಂದಿನ ದುಬಾರಿ ದುನಿಯಾದಲ್ಲಿ ಎಷ್ಟೇ ದುಡಿದರೂ ಕುಟುಂಬ ನಿರ್ವಹಣೆ ಸವಾಲಿನ ಸಂಗತಿಯೇ. ಕಷ್ಟಾರ್ಜಿತ ಆದಾಯ ಜೀವನ ನಿರ್ವಹಣೆಯಲ್ಲೇ ಮುಗಿದುಹೋಗುತ್ತಿದೆ. ಅದರಲ್ಲೂ ನಗರವಾಸಿಗಳ ಪಾಡು ಹೇಳತೀರದು. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.
ಕುಟುಂಬದಲ್ಲಿ ಇಬ್ಬರು ದುಡಿಯುವವರು ಇದ್ದಾರೆ ಎಂದಾದರೆ, ಅಲ್ಲಿ ಖರ್ಚು ಐದು ಪಟ್ಟು ಇರುತ್ತದೆ. ದುಡಿತಕ್ಕಿಂತ ವ್ಯಯವೇ ಹೆಚ್ಚಾಗಿದೆ. ಸರ್ಕಾರಗಳು ಏನೇ ಉಚಿತ ಘೋಷಣೆಗಳನ್ನು ನೀಡಿದ್ದರೂ, ಅವುಗಳು ಈಗಿನ ಜೀವನ ಶೈಲಿಗೆ ಹೊಂದಿಕೆಯಾಗುವುದಿಲ್ಲ.
ಹೋಮ್ ಕ್ರೆಡಿಟ್ ಇಂಡಿಯಾ ದೇಶದ 17 ನಗರಗಳಲ್ಲಿ ದಿ ಗ್ರೇಟ್ ಇಂಡಿಯನ್ ವಾಲೆಟ್ ಎಂಬ ಹೆಸರಿನಲ್ಲಿ ಅಧ್ಯಯನ ನಡೆಸಿದೆ. ನಗರವಾಸಿಗಳ ಆದಾಯ ಎಷ್ಟಿದೆ? ಅದರಲ್ಲಿ ಯಾವುದಕ್ಕೆಲ್ಲಾ ಹಣ ಖರ್ಚು ಮಾಡುತ್ತಾರೆ. ಉಳಿತಾಯ ಹೇಗಿದೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಈ ಸಮೀಕ್ಷೆಯಲ್ಲಿ ಹೈದರಾಬಾದ್ ನಗರವೂ ಒಂದಾಗಿದ್ದು, ಇಲ್ಲಿನ ಜನರ ಆದಾಯ ಮತ್ತು ಖರ್ಚಿನ ವಿವರ ಹೀಗಿದೆ..
- ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಸರಾಸರಿ ಮಾಸಿಕ ಆದಾಯವು 2023 ರಲ್ಲಿ 42 ಸಾವಿರ ರೂಪಾಯಿಯಿಂದ 44 ಸಾವಿರಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
- ಆದಾಯ ಹೆಚ್ಚಳಕ್ಕಿಂತ ಖರ್ಚು ವೆಚ್ಚಗಳೇ ಅಧಿಕವಾಗಿವೆ. 2023 ರಲ್ಲಿ ದುಡಿಮೆಯ ಹಣದಲ್ಲಿ 19 ಸಾವಿರದಿಂದ 24 ಸಾವಿರ ರೂಪಾಯಿ ಖರ್ಚಾಗುತ್ತಿದೆ ಎಂದಿದ್ದಾರೆ.
- ಬರುವ ಆದಾಯದ ಶೇ.21 ರಷ್ಟು ಮನೆ ಬಾಡಿಗೆ ಮತ್ತು ದಿನಸಿಗೆ ಖರ್ಚಾದರೆ, ಶೇ.17 ರಷ್ಟು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಲಾಗುತ್ತಿದೆ.
- ಪ್ರಯಾಣ, ಪ್ರವಾಸ, ಭೇಟಿಗಳಿಗಾಗಿಯೇ ಅತ್ಯಧಿಕ ಹಣ ಪೋಲಾಗುತ್ತಿದೆ. ಅಂದರೆ, ಆದಾಯದ ಶೇಕಡಾ 35 ಪ್ರತಿಶತ ವ್ಯಯವಾಗುತ್ತಿದೆ.
- ನಗರದ ನಿವಾಸಿಗಳು ಆದಾಯದ ಶೇ.28 ರಷ್ಟು ರುಚಿಕರ ಆಹಾರಕ್ಕಾಗಿ ವಿನಿಯೋಗಿಸುತ್ತಿದ್ದಾರೆ.
- ಶೇಕಡಾ 19ರಷ್ಟು ಹಣವನ್ನು ಸಿನಿಮಾ ವೀಕ್ಷಣೆ ಮತ್ತು ಶೇಕಡಾ 10 ರಷ್ಟು OTT ಮನರಂಜನೆಗಾಗಿ ಖರ್ಚು ಮಾಡಲಾಗುತ್ತದೆ.
- ಫಿಟ್ನೆಸ್ ಬಗ್ಗೆ ಕಾಳಜಿ ಹೊಂದಿರುವವರು ಶೇಕಡಾ 6ರಷ್ಟು ಹಣವನ್ನು ಇಲ್ಲಿ ವಿನಿಯೋಗಿಸುತ್ತಿದ್ದಾರೆ.
ಆನ್‌ಲೈನ್ ಬಳಕೆ, ಉಳಿತಾಯ ಹೀಗಿದೆ: ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾ 41 ರಷ್ಟು ಜನರು ಆನ್‌ಲೈನ್ ಹಣಕಾಸು ವಂಚನೆಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಶೇಕಡಾ 27 ಜನರು ಆನ್‌ಲೈನ್ ವಂಚನೆಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ. ಶೇಕಡಾ 64 ರಷ್ಟು ಜನರು ಪ್ರಸ್ತುತ ಚಾಲ್ತಿಯಲ್ಲಿರುವ ಯುಪಿಐ ಸೇವೆಗಳನ್ನು ಉಚಿತವಾಗಿ ಬಳಸುತ್ತಿದ್ದಾರೆ. ಇದಕ್ಕೆ ಚಾರ್ಜ್ ಮಾಡಿದರೆ ಅವುಗಳ ಬಳಕೆಯನ್ನೇ ನಿಲ್ಲಿಸುವುದಾಗಿ ಹೇಳಿದ್ದಾರೆ. ಶೇಕಡಾ 74 ರಷ್ಟು ಜನರು ಮುಂಬರುವ ವರ್ಷಗಳಲ್ಲಿ ತಮ್ಮ ಆದಾಯವನ್ನು ಹೆಚ್ಚಿಸುವ ನಿರೀಕ್ಷೆ ಹೊಂದಿದ್ದಾರೆ. ಶೇಕಡಾ 66 ರಷ್ಟು ಜನರು ಪ್ರತಿ ತಿಂಗಳು ದುಡಿದ ಹಣದಲ್ಲಿ ಸ್ವಲ್ಪ ಹಣವನ್ನು ಉಳಿತಾಯ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ; ಕೃತಕ ಬುದ್ಧಿಮತ್ತೆ ತಂತ್ರದಿಂದ 13 ವರ್ಷದ ಹಿಂದೆ ಕಾಣೆಯಾದ ಮಗುವಿಗೆ ಹುಡುಕಾಟ! - AI Generated Photo Of Missing Girl