ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕಾಗಿಯೇ ಹಲವಾರು ಬ್ಯಾಂಕ್‌ಗಳು ಗ್ರಾಹಕರನ್ನು ಸೆಳೆಯಲು ಕ್ರೆಡಿಟ್ ಕಾರ್ಡ್ ಮೇಲೆ ಆಕರ್ಷಕ ಆಫರ್ಗಳನ್ನು ನೀಡುತ್ತಿವೆ. ಆದರೆ ಹೆಚ್ಚಿನ ಜನರಿಗೆ ಉತ್ತಮ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡಿಕೊಳ್ಳುವುದು ಹೇಗೆ?, ಕಾರ್ಡ್ ಕೊಳ್ಳುವಾಗ ಏನೆಲ್ಲ ಅಂಶಗಳನ್ನು ಗಮನಿಸಬೇಕು ಎಂಬುದೇ ತಿಳಿದಿಲ್ಲ. ನೆನಪಿಡಿ, ಸರಿಯಾದ ಕಾರ್ಡ್ ಆಯ್ಕೆ ಮಾಡುವುದರಿಂದ ನಿಮ್ಮ ಆರ್ಥಿಕ ಜೀವನ ತುಂಬಾ ಸರಳಗೊಳ್ಳಲಿದೆ.
ಕ್ರೆಡಿಟ್ ಕಾರ್ಡ್ ಎಂದರೇನು?: ಕ್ರೆಡಿಟ್ ಕಾರ್ಡ್ ಎನ್ನುವುದು ಹಣಕಾಸಿನ ಸಾಧನ. ನಿಮ್ಮ ಎಲ್ಲಾ ಹಣಕಾಸಿನ ವಹಿವಾಟುಗಳ ಮೇಲೆ ಕ್ರೆಡಿಟ್ ಪಡೆಯಲು ಅನುಮತಿಸುತ್ತದೆ. ಇನ್ನೂ ಸರಳವಾಗಿ ಹೇಳುವುದಾದರೆ, ವಸ್ತುಗಳನ್ನು ಖರೀದಿಸಿ ನಂತರ ಪಾವತಿಸುವ ವ್ಯವಸ್ಥೆ. ಎಲ್ಲಾ ಕ್ರೆಡಿಟ್ ಕಾರ್ಡ್‌ಗಳು ನಿರ್ದಿಷ್ಟ ಕ್ರೆಡಿಟ್ ಮಿತಿಯೊಂದಿಗೆ ಬರುತ್ತವೆ. ಇದನ್ನು ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಅರ್ಹತಾ ಮಾನದಂಡಗಳ ಆಧಾರದ ಮೇಲೆ ನೀಡಲಾಗುತ್ತದೆ.
ಉತ್ತಮ ಕ್ರೆಡಿಟ್ ಕಾರ್ಡ್ ಆಯ್ಕೆ ಹೇಗೆ?
- ಕ್ರೆಡಿಟ್ ಸ್ಕೋರ್ ಪರಿಶೀಲಿಸಿ: ನೀವು ಹೊಸ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡುವಾಗ, ಕೆಲವು ಅಂಶಗಳನ್ನು ಅನುಸರಿಸಬೇಕು. ಅದರಲ್ಲಿ ಮೊದಲು, ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ. ನೀವು ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ಹೆಚ್ಚಿನ ಮಿತಿಯ ಕಾರ್ಡ್‌ಗಳಿಗಾಗಿ ನಿಮ್ಮನ್ನು ಪರಿಗಣಿಸಲಾಗುವುದಿಲ್ಲ.
- ನಿಮ್ಮ ಉದ್ದೇಶ ತಿಳಿದುಕೊಳ್ಳಿ: ಕ್ರೆಡಿಟ್ ಕಾರ್ಡ್ ಪಡೆಯುವ ಮುನ್ನ ಯಾವ ಉದ್ದೇಶಕ್ಕಾಗಿ ಬಳಸಲು ಇಚ್ಚಿಸುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳಿ. ವಹಿವಾಟಿನ ಮೇಲೆ ರಿವಾರ್ಡ್ ಪಾಯಿಂಟ್‌ಗಳು, ಖರೀದಿಗಳ ಮೇಲೆ ಕ್ಯಾಶ್‌ಬ್ಯಾಕ್, ಸುಲಭ EMIಗಳು, ಮಾಸಿಕ ಬಿಲ್ ಪಾವತಿ, ಆನ್‌ಲೈನ್ ಶಾಪಿಂಗ್, ಟ್ರಾವೆಲಿಂಗ್, ದೈನಂದಿನ ವ್ಯವಹಾರ (ಪೆಟ್ರೋಲ್, ದಿನಸಿ, ವಸ್ತುಗಳ ಖರೀದಿ) ಸೇರಿದಂತೆ ಯಾವ ಉದ್ದೇಶಕ್ಕೆ ಆಯ್ಕೆ ಮಾಡಿಕೊಳ್ಳುತ್ತೀದ್ದೀರಿ ಎಂಬುದು ತಿಳಿದಿರಬೇಕು.
- ನಿಯಮ ಮತ್ತು ಷರತ್ತು ಪರಿಶೀಲಿಸಿ: ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮೊದಲು, ಬಡ್ಡಿದರ, ರಿವಾರ್ಡ್ ಪಾಯಿಂಟ್ ಮತ್ತು ಅದರ ಬಳಕೆ ಇತ್ಯಾದಿಗಳಂತಹ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಕನಿಷ್ಠ ಮಾಸಿಕ ಪಾವತಿ, ವಿಳಂಬ ಪೇಮೆಂಟ್ ಮೇಲಿನ ಹೆಚ್ಚುವರಿ ಶುಲ್ಕಗಳ ಬಗ್ಗೆ ತಿಳಿದಿರಿ.
- ಬಡ್ಡಿದರ: ಕ್ರೆಡಿಟ್ ಕಾರ್ಡ್ ಪಡೆಯುವ ಮುನ್ನ ಬಡ್ಡಿ ದರದ ಬಗ್ಗೆ ಗೊತ್ತಿರಬೇಕು. ಪ್ರತಿ ಕ್ರೆಡಿಟ್ ಕಾರ್ಡ್ ವಾರ್ಷಿಕ ಶೇಕಡಾವಾರು ದರ (APR) ಎಂದೂ ಕರೆಯಲ್ಪಡುವ ಬಡ್ಡಿದರದೊಂದಿಗೆ ಬರುತ್ತದೆ. ನೀವು ಸರಿಯಾದ ಸಮಯಕ್ಕೆ ಹಣ ಪಾವತಿ ಮಾಡುತ್ತಿದ್ದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ. ಒಂದು ವೇಳೆ ಅನಿರೀಕ್ಷಿತ ಸಂದರ್ಭಗಳಿಂದ ಬಿಲ್ ಪಾವತಿ ವಿಳಂಬವಾದರೆ ಅದಕ್ಕೆ ವಿಧಿಸುವ ಬಡ್ಡಿ ಅಧಿಕವಾಗಿರುತ್ತದೆ ಎಂಬುದನ್ನು ಮರೆಯಬೇಡಿ. ಕಾರ್ಡ್ ತೆಗೆದುಕೊಳ್ಳುವಾಗ ಹೆಚ್ಚಿನವರು ಈ ಬಗ್ಗೆ ಗಮನ ಹರಿಸುವುದಿಲ್ಲ. ಹಾಗಾಗಿ ಕಡಿಮೆ ವಾರ್ಷಿಕ ಬಡ್ಡಿ ದರ ವಿಧಿಸುವ ಕಾರ್ಡ್ ಅನ್ನು ಆಯ್ಕೆ ಉತ್ತಮ.
- ವಾರ್ಷಿಕ ಶುಲ್ಕ: ಕ್ರೆಡಿಟ್ ಕಾರ್ಡ್ ಬಳಕೆದಾರರು ವಾರ್ಷಿಕ ಶುಲ್ಕ ಪಾವತಿಸಬೇಕಾಗುತ್ತದೆ. ಕೆಲವು ಕಾರ್ಡ್‌ಗಳು ಹೆಚ್ಚಿನ ಶುಲ್ಕ ವಿಧಿಸಿ ಹೆಚ್ಚು ಪ್ರಯೋಜನಗಳನ್ನು ನೀಡುತ್ತವೆ. ಹೆಚ್ಚಿನ ಶುಲ್ಕ ವಿಧಿಸುವ ಕಾರ್ಡ್‌ಗಳನ್ನು ತೆಗೆದುಕೊಳ್ಳದಿರುವುದು ಉತ್ತಮ. ವಾರ್ಷಿಕ ಶುಲ್ಕವಿಲ್ಲದ ಅಥವಾ ಕಡಿಮೆ ಶುಲ್ಕವಿರುವ ಕಾರ್ಡ್ ತೆಗೆದುಕೊಳ್ಳುವುದು ಉತ್ತಮ. ಕೆಲವು ಕಾರ್ಡ್‌ಗಳು ಶುಲ್ಕ ವಿಧಿಸಿ ಬಳಿಕ ಅದನ್ನು ಕ್ರೆಡಿಟ್ ರೂಪದಲ್ಲಿ ಮರುಪಾವತಿ ಮಾಡುತ್ತವೆ. ಅಂತಹ ಕಾರ್ಡ್ ಆಯ್ಕೆ ಉತ್ತಮವಾಗಿದೆ.
- ಆದಾಯಕ್ಕೆ ತಕ್ಕ ಕಾರ್ಡ್: ಕ್ರೆಡಿಟ್ ಕಾರ್ಡ್ ಪಡೆಯುವ ಮುನ್ನ ನಿಮ್ಮ ಮಾಸಿಕ ಆದಾಯ ಗಮನಿಸಿ. ಬಿಲ್ ಪಾವತಿಸಬಹುದಾದ ಸಾಮರ್ಥ್ಯಕ್ಕೆ ತಕ್ಕ ಕಾರ್ಡ್‌ಗಳನ್ನು ಪಡೆಯಿರಿ.
ಇದನ್ನೂ ಓದಿ: ದಿನಕ್ಕೆ 18 ರೂಪಾಯಿ ಕಟ್ಟಿದ್ರೆ 3 ಲಕ್ಷದವರೆಗೆ ಲಾಭ, ಮಕ್ಕಳಿಗಾಗಿ ಸೂಪರ್ ಸ್ಕೀಮ್! - Post Office Saving Scheme