ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಾಲಕಾಲಕ್ಕೆ ಹಣಕಾಸು ನೀತಿಯನ್ನು ಕಾಪಾಡಲು ರೆಪೊ ದರವನ್ನು ಹೆಚ್ಚಿಸುತ್ತದೆ. ಆಗ ಬ್ಯಾಂಕ್‌ಗಳು ಸಹಜವಾಗಿ ಗೃಹ ಸಾಲದ ಬಡ್ಡಿ ದರಗಳನ್ನು ಏರಿಸುತ್ತವೆ. ಇದು ಸಾಲ ಪಡೆದವರಿಗೆ ಹೊರೆಯಾಗುತ್ತದೆ. ಅನೇಕ ಜನರು ಈ ಗೃಹ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಹಣವನ್ನು ತೆಗೆದು ಸಾಲ ಕಟ್ಟುತ್ತಾರೆ.
ಹೀಗೆ ಮಾಡುವ ಅವಕಾಶವಿದ್ದರೂ ಗೃಹ ಸಾಲಕ್ಕೆ ಇಪಿಎಫ್ ಹಣವನ್ನು ಬಳಸುವುದು ಉತ್ತಮವೇ?. ಅದು ಭವಿಷ್ಯದ ಮೇಲೆ ಪರಿಣಾಮ ಬೀರುತ್ತದಾ ಎಂಬುದನ್ನು ಲೆಕ್ಕ ಹಾಕಬೇಕು. ಗೃಹ ಸಾಲಕ್ಕೆ ಪಿಎಫ್ ಹಣವನ್ನು ಸಾಲವಾಗಿ ತೀರಿಸಲು ನೀವು ಯೋಚಿಸಿದ್ದರೆ, ಅದಕ್ಕೂ ಮೊದಲು ಇಲ್ಲಿ ಹೇಳಲಾದ ಅಂಶಗಳನ್ನು ಒಮ್ಮೆ ತಿಳಿದುಕೊಳ್ಳಿ. ಅಂತಹ ಕೆಲವು ಪ್ರಮುಖ ವಿಷಯಗಳನ್ನು ನಾವು ಈಗ ನೋಡೋಣ.
5 ವರ್ಷ ನಿರಂತರ ಸೇವೆ ಇದೆಯೇ?: ಇಪಿಎಫ್ ಯೋಜನೆಯ ಸೆಕ್ಷನ್ 68ಬಿಬಿ ಪ್ರಕಾರ, ನೀವು ಗೃಹ ಸಾಲ ಮರುಪಾವತಿಗಾಗಿ ಪಿಎಫ್ ಮೊತ್ತವನ್ನು ಹಿಂಪಡೆಯಬಹುದು. ಇದಕ್ಕಾಗಿ ನೀವು ನಿಮ್ಮ ಮನೆಯನ್ನು ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಪಿಎಫ್ ಸದಸ್ಯರ ಹೆಸರಿನಲ್ಲಿ ನೋಂದಾಯಿಸಬೇಕು. ಅಲ್ಲದೆ, ಪಿಎಫ್ ಮೊತ್ತವನ್ನು ಹಿಂಪಡೆಯಲು ನೀವು ಕನಿಷ್ಠ 10 ವರ್ಷಗಳ ನಿರಂತರ ಪಿಎಫ್ ಚಾಲ್ತಿಯನ್ನು ಹೊಂದಿರಬೇಕು. 5 ವರ್ಷ ಕಾಲ ನಿರಂತರ ಸೇವೆಯನ್ನು ಪೂರ್ಣಗೊಳಿಸಿದ ನಂತರ ಹಿಂಪಡೆಯಲಾದ ಪಿಎಫ್ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.
ಇಪಿಎಫ್ ನಿಮ್ಮ ಸೇವಾ ನಿವೃತ್ತಿಯ ನಂತರ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಆದರೆ, ನೀವು ಸಾಲ ಪಡೆದುಕೊಂಡು ಅದನ್ನು ತೀರಿಸುವ ಯೋಚನೆಯಲ್ಲಿದ್ದಾಗ ನಿಮ್ಮ ವೃತ್ತಿಜೀವನವನ್ನು ಈಗ ತಾನೆ ಆರಂಭಿಸಿದ್ದಲ್ಲಿ ಇಪಿಎಫ್‌ನಿಂದ ಹಣವನ್ನು ಹಿಂಪಡೆಯುವುದು ಉತ್ತಮ ವಿಧಾನ. ಏಕೆಂದರೆ, ನೀವು ಈಗಷ್ಟೇ ನಿಮ್ಮ ಇಪಿಎಫ್ ಖಾತೆಗೆ ಹಣವನ್ನು ಪಡೆಯುತ್ತಿದ್ದೀರಿ, ಈಗ ಅದರಿಂದ ಹಣ ವಿತ್ಡ್ರಾ ಮಾಡಿಕೊಂಡದಲ್ಲಿ ಮುಂದಿನ ಸೇವಾ ಅವಧಿಯಲ್ಲಿ ಹೆಚ್ಚಿನ ಹಣವನ್ನು ಮರಳಿ ಜಮಾ ಮಾಡಲು ಸಾಕಷ್ಟು ಸಮಯವಿರುತ್ತದೆ.
ಬಡ್ಡಿ ದರಗಳನ್ನು ಹೋಲಿಕೆ ಮಾಡಿ ನೋಡಿ: ಸಾಲ ಪಡೆಯುವ ಮುನ್ನ ಬ್ಯಾಂಕ್ ವಿಧಿಸುವ ಬಡ್ಡಿದರಗಳನ್ನು ನೀವು ಸೂಕ್ಷ್ಮವಾಗಿ ಗಮನಿಸಬೇಕು. ಬಳಿಕ ಗೃಹ ಸಾಲವನ್ನು ತೆಗೆದುಕೊಂಡಾಗ ಬ್ಯಾಂಕ್ ಬಡ್ಡಿದರಗಳು ಮತ್ತು ಇಪಿಎಫ್ ಬಡ್ಡಿದರಗಳನ್ನು ಒಂದಕ್ಕೊಂದು ಹೋಲಿಕೆ ಮಾಡಬೇಕು. ಸಾಲ ಮರುಪಾವತಿ ವೇಳೆ ಗೃಹ ಸಾಲದ ಬಡ್ಡಿ ದರವು ನಿಮ್ಮ ಪಿಎಫ್ ಹಣಕ್ಕಿಂತ ಹೆಚ್ಚಿದ್ದಲ್ಲಿ ಅದನ್ನು ತೀರಿಸಲು ಇಪಿಎಫ್ ಹಣವನ್ನು ಹಿಂಪಡೆಯಬಹುದು. ಕಡಿಮೆ ಇದ್ದಲ್ಲಿ ಭವಿಷ್ಯದ ಭದ್ರತೆಗಾಗಿ ಪಿಎಫ್ ಹಣವನ್ನು ಮುಟ್ಟದೆ ಬೇರೆ ವಿಧಾನಗಳ ಮೂಲಕ ಗೃಹ ಸಾಲವನ್ನು ತೀರಿಸಲು ಪ್ರಯತ್ನಪಡಿ.
ಸಣ್ಣಪುಟ್ಟ ಸಾಲಕ್ಕಾಗಿ ಪಿಎಫ್ ಹಣ ಮುಟ್ಟಬೇಡಿ: ಭವಿಷ್ಯ ನಿಧಿ(ಪಿಎಫ್) ಹಣವನ್ನು ಎಂದಿಗೂ ಪೂರ್ಣವಾಗಿ ಪಡೆದುಕೊಳ್ಳಬಾರದು. ಅದರ ಹಣವನ್ನು ಪಡೆದುಕೊಳ್ಳಬೇಕು ಅಂತಾದರೆ ಅದು ಕೊನೆಯ ಅವಕಾಶವಾಗಿರಬೇಕು. ಪಿಎಫ್ ಹಣವನ್ನು ತಾತ್ಕಾಲಿಕ ಸಮಸ್ಯೆಗಳಿಗೆ, ಸಣ್ಣ ಸಾಲಗಳಿಗೆ ಮತ್ತು ಬಡ್ಡಿ ಪಾವತಿಗೆ ಬಳಕೆ ಸಲ್ಲದು. ಇಂತಹ ಯಾವುದೇ ಬಾಕಿ ಪಾವತಿಯನ್ನು ನಿಮ್ಮ ಉಳಿತಾಯ ಮತ್ತು ನಿಶ್ಚಿತ ಠೇವಣಿ ಖಾತೆಗಳಲ್ಲಿನ ಹಣವನ್ನು ಬಳಸಿಕೊಂಡು ಮನೆ ಸಾಲವನ್ನು ಪಾವತಿಸಲು ಪ್ರಯತ್ನಿಸಿ. ಅಗತ್ಯವಿದ್ದರೆ ನಿಮ್ಮ ತಿಂಗಳ ಕಂತುಗಳ (ಇಎಂಐ) ಅವಧಿಯನ್ನು ವಿಸ್ತರಿಸಿ ಅಥವಾ ಮರುಪಾವತಿಗೆ ಇತರ ವಿಧಾನಗಳಿವೆಯೇ ಎಂಬುದು ಯೋಚಿಸಿ. ಭವಿಷ್ಯಕ್ಕಾಗಿ ಆದಷ್ಟು ಪಿಎಫ್ ಹಣವನ್ನು ಬಳಸದಿರುವುದು ಉತ್ತಮ.
ಇದನ್ನೂ ಓದಿ: 2025ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಅಂದಾಜು ಶೇ 6.8ಕ್ಕೆ ಹೆಚ್ಚಿಸಿದ ಮೋರ್ಗನ್ ಸ್ಟಾನ್ಲಿ - India GDP growth