ನವದೆಹಲಿ: ದೇಶದಲ್ಲಿ ಕಳೆದೊಂದು ವಾರದಿಂದ ಚಿನ್ನ, ಬೆಳ್ಳಿ ದರ ಇಳಿಮುಖವಾಗುತ್ತಿದೆ. ಇಂದು ಕೂಡಾ ಕೊಂಚ ತಗ್ಗಿದೆ. ಪ್ರತಿ ಗ್ರಾಂ 24 ಕ್ಯಾರೆಟ್ ಬಂಗಾರಕ್ಕೆ 44 ರೂಪಾಯಿ ಹಾಗೂ 22 ಕ್ಯಾರೆಟ್ ಚಿನ್ನಕ್ಕೆ 39 ರೂಪಾಯಿ ಕಡಿಮೆಯಾಗಿದೆ. ಇದೇ ವೇಳೆ, ಪ್ರತಿ ಕೆಜಿ ಬೆಳ್ಳಿ ದರ 140 ರೂಪಾಯಿ ಇಳಿಕೆಯಾಗಿದೆ.
ಕೇಂದ್ರ ಬಜೆಟ್ ಹಾಗೂ ಇತರ ಪರಿಣಾಮಗಳ ಕಾರಣದಿಂದ ಕಳೆದ ಒಂದು ವಾರದ ಅವಧಿಯಲ್ಲಿ ಹಳದಿ ಲೋಹ ಹಾಗೂ ಬೆಳ್ಳಿ ಬೆಲೆ ಇಳಿಕೆಯಾಗುತ್ತಿದೆ. ಮಂಗಳವಾರ ಮಂಡನೆಯಾದ ಬಜೆಟ್ನಲ್ಲಿ ಚಿನ್ನ, ಬೆಳ್ಳಿ ಸೇರಿದಂತೆ ಹಲವು ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.15ರಿಂದ ಶೇ.6ಕ್ಕೆ ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಇವುಗಳ ಪರಿಣಾಮದಿಂದ ಪ್ರತಿ 10 ಗ್ರಾಂ ಚಿನ್ನಕ್ಕೆ 4,000 ರೂಪಾಯಿ ತಗ್ಗಿದೆ. ಅದೇ ರೀತಿ ಬೆಳ್ಳಿ ಪ್ರತಿ ಕೆಜಿಗೆ 5,000 ರೂಪಾಯಿ ಕಡಿಮೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲೂ ಸ್ವಲ್ಪ ಇಳಿಕೆಯಾಗಿದೆ. ಬುಧವಾರ ಒಂದು ಔನ್ಸ್ (ಅಂದಾಜು 28 ಗ್ರಾಂ) ಚಿನ್ನದ ಬೆಲೆ 2,416 ಡಾಲರ್ ಇದ್ದರೆ ಗುರುವಾರದ ವೇಳೆಗೆ 40 ಡಾಲರ್ ಇಳಿಕೆಯಾಗಿ 2,416 ಡಾಲರ್ಗೆ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿ ಬೆಲೆ 27.96 ಡಾಲರ್ ಇದೆ.
ದೇಶದಲ್ಲಿ ಇಂದು 44 ರೂ. ಇಳಿಕೆಯೊಂದಿಗೆ ಪ್ರತಿ ಗ್ರಾಂ 24 ಕ್ಯಾರೆಟ್ ಬಂಗಾರಕ್ಕೆ 7,067.2 ರೂ. ಇದೆ. 22 ಕ್ಯಾರೆಟ್ ಚಿನ್ನಕ್ಕೆ 39 ರೂ. ಕಡಿಮೆಯಾಗಿದ್ದು, ಪ್ರತಿ ಗ್ರಾಂ 6,473.6 ರೂ.ಗೆ ಮಾರಾಟವಾಗುತ್ತಿದೆ. ಕಳೆದ ಒಂದು ವಾರದಲ್ಲಿ 24 ಕ್ಯಾರೆಟ್ ಬಂಗಾರದ ಬೆಲೆಯಲ್ಲಿ ಶೇ.0.65ರಷ್ಟು ಬದಲಾವಣೆಯಾಗಿದೆ. ಬೆಂಗಳೂರಿನಲ್ಲಿ ಕ್ರಮವಾಗಿ 64,940 ರೂ. ಹಾಗೂ 70,850 ರೂ. ಬೆಲೆ ಇದೆ.
ಯಾವ ನಗರದಲ್ಲಿ ಎಷ್ಟು ಬೆಲೆ?
ನಗರ | 24 ಕ್ಯಾರೆಟ್ ಬಂಗಾರ | 24 ಕ್ಯಾರೆಟ್ ಬಂಗಾರ |
ದೆಹಲಿ | 65,090 (10 ಗ್ರಾಂ) | 71,000 (10 ಗ್ರಾಂ) |
ಮುಂಬೈ | 64,940 | 70,850 |
ಅಹಮದಾಬಾದ್ | 64,990 | 70,900 |
ಚೆನ್ನೈ | 65,490 | 71,450 |
ಕೋಲ್ಕತ್ತಾ | 64,940 | 70,850 |
ಗುರುಗ್ರಾಮ್ | 65,090 | 71,000 |
ಲಖನೌ | 65,090 | 71,000 |
ಬೆಂಗಳೂರು | 64,940 | 70,850 |
ರಾಯಪುರ | 65,090 | 71,100 |
ಪಾಟ್ನಾ | 64,990 | 70,900 |
ಹೈದರಾಬಾದ್ | 64,940 | 70,850 |
ಇಂದಿನ ಷೇರುಪೇಟೆ ಹೇಗಿದೆ?: ಇಂದು ಬೆಳಗ್ಗೆ ದೇಶಿ ಷೇರುಪೇಟೆ ಸೂಚ್ಯಂಕಗಳು ನಷ್ಟದೊಂದಿಗೆ ಆರಂಭಗೊಂಡವು. 9.21ಕ್ಕೆ ಸೆನ್ಸೆಕ್ಸ್ 600 ಅಂಕ ಕಳೆದುಕೊಂಡು 79,548ರಲ್ಲಿ ವಹಿವಾಟು ನಡೆಸಿತು. ಹಾಗೆಯೇ, ನಿಫ್ಟಿ 186 ಅಂಕ ಕುಸಿದು 24,226ರಲ್ಲಿ ವಹಿವಾಟು ಮುಂದುವರಿಸಿದೆ.
ಸೆನ್ಸೆಕ್ಸ್-30 ಸೂಚ್ಯಂಕದಲ್ಲಿ ಟಾಟಾ ಮೋಟಾರ್ಸ್, ಎಚ್‌ಯುಎಲ್, ನೆಸ್ಲೆ ಇಂಡಿಯಾ, ಎಲ್ & ಟಿ ಷೇರುಗಳು ಮಾತ್ರ ಲಾಭ ಗಳಿಸುತ್ತಿವೆ.
ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್, ಪವರ್‌ಗ್ರಿಡ್, ಆಕ್ಸಿಸ್ ಬ್ಯಾಂಕ್, ಜೆಎಸ್‌ಡಬ್ಲ್ಯೂ ಸ್ಟೀಲ್, ಎನ್‌ಟಿಪಿಸಿ, ರಿಲಯನ್ಸ್, ಟೈಟಾನ್, ಇಂಡಸ್‌ಇಂಡ್ ಬ್ಯಾಂಕ್, ಸನ್‌ಫಾರ್ಮಾ, ಅದಾನಿ ಪೋರ್ಟ್ಸ್, ಹೆಚ್‌ಸಿಎಲ್ ಟೆಕ್ ನಷ್ಟ ಕಂಡವು.