ನವದೆಹಲಿ: ಹಬ್ಬದ ಸೀಸನ್ ಮತ್ತು ವಿವಾಹ ಸಮಾರಂಭಗಳ ಹಿನ್ನೆಲೆಯಲ್ಲಿ ಬಂಗಾರದ ಬೆಲೆ ಗಗನಮುಖಿಯಾಗುತ್ತಿದೆ. ಚಿನಿವಾರ ಪೇಟೆಯಲ್ಲಿ ಸದ್ಯ 10 ಗ್ರಾಂ ಚಿನ್ನದ ದರ 80,650 ರೂಪಾಯಿ ಇದೆ. ಸೋಮವಾರದ ವಹಿವಾಟಿನಲ್ಲಿ ಬಂಗಾರಕ್ಕೆ 750 ರೂಪಾಯಿ ಏರಿಕೆಯಾಗಿದೆ.
ಬೆಳ್ಳಿಯೂ ಕೂಡ ಹಿಂದೆ ಬೀಳದೆ ಕೆಜಿಗೆ ಒಂದೇ ದಿನ 5 ಸಾವಿರ ರೂಪಾಯಿ ಹೆಚ್ಚಾಗಿದೆ. ಸತತ ನಾಲ್ಕನೇ ದಿನವೂ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿ, ಕೆ.ಜಿಗೆ 99,500 ರೂಪಾಯಿ ಆಗಿದೆ. ಇದು ಸಾರ್ವಕಾಲಿಕ ಅತ್ಯಧಿಕ ಬೆಲೆ. ಬೆಳ್ಳಿ ಶುಕ್ರವಾರದ ವಹಿವಾಟಿನಲ್ಲಿ ಕೆ.ಜಿಗೆ 94,500 ರೂಪಾಯಿಗೆ ಬಿಕರಿಯಾಗಿತ್ತು.
24 ಕ್ಯಾರೆಟ್ನ (99.9 ರಷ್ಟು ಶುದ್ಧತೆ) 10 ಗ್ರಾಂ ಚಿನ್ನವು 750 ರೂಪಾಯಿ ಏರಿಕೆಯಾಗಿ 80,650 ರೂಪಾಯಿಗೆ ತಲುಪುವ ಮೂಲಕ ಹೊಸ ದಾಖಲೆ ಬರೆದಿದೆ. 22 ಕ್ಯಾರೆಟ್ (99.5 ರಷ್ಟು ಶುದ್ಧತೆ) ಹಳದಿ ಲೋಹವು 10 ಗ್ರಾಂಗೆ 79,900 ರೂಪಾಯಿಗೆ ವಹಿವಾಟು ನಡೆಸುತ್ತಿತ್ತು.
ಚಿನ್ನದ ಬೆಲೆಯಲ್ಲಿ ಏರಿಕೆಗೆ ಹಬ್ಬ ಮತ್ತು ಮದುವೆಯ ಋತುವಿನ ಆರಂಭವೇ ಕಾರಣವಾಗಿದೆ. ಇದಲ್ಲದೆ, ಈಕ್ವಿಟಿ ಮಾರುಕಟ್ಟೆಗಳಲ್ಲಿನ ಕುಸಿತವು ಚಿನ್ನದ ಸುರಕ್ಷತೆ ಮೇಲಿನ ಆಕರ್ಷಣೆ ಹೆಚ್ಚಿಸಿದೆ. ಇದೂ ಕೂಡ ಬೆಲೆಯ ಜಿಗಿತಕ್ಕೆ ಮೂಲವಾಗಿದೆ.
ಇನ್ನೂ, ಬೆಳ್ಳಿ ಮಾರುಕಟ್ಟೆಯಲ್ಲಿ ಬದಲಾಗುತ್ತಿರುವ ವಿದ್ಯಮಾನಗಳಿಂದಾಗಿಯೂ ಬೆಲೆ ಹೆಚ್ಚುತ್ತಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಬಳಕೆ, ಹೂಡಿಕೆದಾರರ ದೃಷ್ಟಿ ಇತ್ತ ಹರಿದಿದ್ದು ಮುಂಬರುವ ದಿನಗಳಲ್ಲಿ ಬಿಳಿ ಲೋಹ ಉತ್ತಮ ಹಣದ ಮೂಲ ಎಂಬ ಕಾರಣಕ್ಕಾಗಿ ದರ ಏರಿಕೆಗೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಚೀನಾ-ಭಾರತ ನಡುವೆ ಮಹತ್ವದ ಬೆಳವಣಿಗೆ: ಪೂರ್ವ ಲಡಾಖ್‌ನ LAC ಉದ್ದಕ್ಕೂ ಸೇನಾ ಗಸ್ತಿಗೆ ಒಪ್ಪಂದ