ಚೆನ್ನೈ : ವಿಯೆಟ್ನಾಂನ ವಿನ್ಫಾಸ್ಟ್ ಗ್ರೂಪ್ನ ಮೊದಲ ಹಂತದ ಎಲೆಕ್ಟ್ರಿಕ್ ವಾಹನ (ಇವಿ) ತಯಾರಿಕಾ ಕಾರ್ಖಾನೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾನುವಾರ ಟ್ಯುಟಿಕೋರಿನ್ನಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ವಿಯೆಟ್ನಾಂ ಗ್ರೂಪ್ನ ಭಾರತೀಯ ಅಂಗವಾದ ವಿನ್ಫಾಸ್ಟ್ ಆಟೋ ಇಂಡಿಯಾ ಲಿಮಿಟೆಡ್ ಭಾರತದಲ್ಲಿ ಒಟ್ಟಾರೆ 16,000 ಕೋಟಿ ರೂ.ಗಳ (2 ಬಿಲಿಯನ್ ಡಾಲರ್) ಹೂಡಿಕೆ ಮಾಡಲು ನಿರ್ಧರಿಸಿದ್ದು, ಈಗ ಅದರ ಪೈಕಿ ಮೊದಲ ಹಂತದಲ್ಲಿ 4,000 ಕೋಟಿ ರೂ. ವೆಚ್ಚದಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಕಾರ್ಖಾನೆ ಆರಂಭಿಸಲು ಯೋಜಿಸಿದೆ.
ಜನವರಿಯಲ್ಲಿ ಇಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ವಿನ್ಫಾಸ್ಟ್ ಆಟೋ ಲಿಮಿಟೆಡ್ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಘಟಕ ಆರಂಭಿಸಲು ತಮಿಳುನಾಡು ಸರ್ಕಾರದೊಂದಿಗೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿತ್ತು. ಪ್ರಸ್ತುತ 380 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕಂಪನಿಯ ಘಟಕವು ವರ್ಷಕ್ಕೆ 1,50,000 ವಾಹನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಲಿದೆ.
ಈಗಾಗಲೇ ದೇಶದ ಆಟೊಮೊಬೈಲ್ ಹಬ್ ಎಂದು ಕರೆಯಲ್ಪಡುವ ತಮಿಳುನಾಡು ಈ ಯೋಜನೆಯೊಂದಿಗೆ ಭಾರತದ ಇವಿ ರಾಜಧಾನಿಯಾಗಿ ಗುರುತಿಸಿಕೊಳ್ಳಲಿದೆ.
ಶಂಕುಸ್ಥಾಪನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಕೈಗಾರಿಕಾ ಸಚಿವ ಟಿ.ಆರ್.ಬಿ. ರಾಜಾ ಮಾತನಾಡಿ, ಭಾರತದಲ್ಲಿ ಮಾರಾಟವಾಗುವ ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪೈಕಿ ಶೇ 70 ಕ್ಕಿಂತ ಹೆಚ್ಚು ಮತ್ತು ಎಲ್ಲಾ ಎಲೆಕ್ಟ್ರಿಕ್ ನಾಲ್ಕು ಚಕ್ರದ ವಾಹನಗಳಲ್ಲಿ ಶೇ 40ರಷ್ಟನ್ನು ತಮಿಳುನಾಡಿನಲ್ಲಿ ತಯಾರಿಸಲಾಗುತ್ತಿದೆ ಎಂದು ಹೇಳಿದರು. ಇವಿ ಘಟಕದ ಶಂಕುಸ್ಥಾಪನೆಯ ನಂತರ ಸ್ಟಾಲಿನ್ ತೂತುಕುಡಿ ಮತ್ತು ತಿರುನೆಲ್ವೇಲಿಯ ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಿಸಿದರು.
ಪ್ರವಾಹ ಪೀಡಿತರಿಗೆ ಕೇಂದ್ರ ಸರ್ಕಾರ ಪರಿಹಾರ ನೀಡದಿದ್ದರೂ, ರಾಜ್ಯ ಸರ್ಕಾರ ಪ್ರವಾಹ ಪೀಡಿತರಿಗೆ ಬೆಂಬಲ ನೀಡುತ್ತಿದೆ ಎಂದು ಮುಖ್ಯಮಂತ್ರಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ಹಲವಾರು ಅಡೆತಡೆಗಳನ್ನು ಒಡ್ಡಿದರೂ, ರಾಜ್ಯ ಸರ್ಕಾರವು ತನ್ನ ಉದ್ದೇಶಗಳನ್ನು ಸಾಧಿಸುತ್ತಿದೆ ಮತ್ತು ಹಲವಾರು ಮೂಲಗಳಿಂದ ರಾಜ್ಯಕ್ಕೆ ಹೂಡಿಕೆಗಳನ್ನು ಸಂಗ್ರಹಿಸುತ್ತಿದೆ ಎಂದು ಅವರು ಹೇಳಿದರು.
ಡಿಎಂಕೆ ಜನ ಕೇಂದ್ರಿತ ರಾಜಕೀಯ ಪಕ್ಷವಾಗಿದೆ ಮತ್ತು ಅದರ ನೀತಿಗಳು ಮತ್ತು ಕಾರ್ಯಕ್ರಮಗಳು ರಾಜ್ಯದ ವಂಚಿತ ಮತ್ತು ದೀನದಲಿತ ಜನರ ಬಗ್ಗೆ ನಿಜವಾದ ಕಾಳಜಿಯನ್ನು ಆಧರಿಸಿವೆ ಎಂದು ಸ್ಟಾಲಿನ್ ಹೇಳಿದರು. ಸ್ಟಾಲಿನ್ 2021 ರಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ರಾಜ್ಯದಲ್ಲಿ ಹೂಡಿಕೆಗಳನ್ನು ಹೆಚ್ಚಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುವುದು ಗಮನಾರ್ಹ.
ಇದನ್ನೂ ಓದಿ : ಐಎಂಇಇಸಿ ಕಾರಿಡಾರ್: ಭೌಗೋಳಿಕ, ರಾಜಕೀಯ ಮತ್ತು ಆರ್ಥಿಕ ಪರಿಣಾಮಗಳು