ನವದೆಹಲಿ: ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಫಿನ್ಟೆಕ್ ಉದ್ಯಮವು ತಾನು ಸಂಗ್ರಹಿಸಿದ ಫಂಡಿಂಗ್ನಲ್ಲಿ ಜಾಗತಿಕವಾಗಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ವರದಿಯೊಂದು ಶುಕ್ರವಾರ ತಿಳಿಸಿದೆ. 2023 ರ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಫಿನ್ಟೆಕ್ ವಲಯವು ಪಡೆದುಕೊಂಡ ಒಟ್ಟು ಫಂಡಿಂಗ್ 2024 ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 59 ರಷ್ಟು ಹೆಚ್ಚಾಗಿದೆ. ಇದು ಸದೃಢ ಆರ್ಥಿಕ ವಾತಾವರಣದ ನಡುವೆ ಭಾರತೀಯ ಫಿನ್ಟೆಕ್ ವಲಯದ ಸ್ಥಿರತೆಯನ್ನು ಒತ್ತಿಹೇಳುತ್ತದೆ.
ಫಿನ್ಟೆಕ್ ಕ್ಷೇತ್ರದಲ್ಲಿ ಬೆಂಗಳೂರು ಅಗ್ರಜ: ಪ್ರಮುಖ ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ಟ್ರಾಕ್ಸನ್ ವರದಿಯ ಪ್ರಕಾರ, ಹಿಂದಿನ ತ್ರೈಮಾಸಿಕದಲ್ಲಿ ಪಡೆಯಲಾದ 346 ಮಿಲಿಯನ್ ಡಾಲರ್ ಫಂಡಿಂಗ್ಗೆ ಹೋಲಿಸಿದರೆ 2024 ರ ಮೊದಲ ತ್ರೈಮಾಸಿಕದಲ್ಲಿ ಒಟ್ಟು 551 ಮಿಲಿಯನ್ ಡಾಲರ್ ಫಂಡಿಂಗ್ ಹರಿದು ಬಂದಿದೆ. ಭಾರತೀಯ ಫಿನ್ಟೆಕ್ ಕ್ಷೇತ್ರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದರೆ, ಮುಂಬೈ ಮತ್ತು ಹೈದರಾಬಾದ್ ನಂತರದ ಸ್ಥಾನಗಳಲ್ಲಿವೆ.
ಜಾಗತಿಕ ಫಿನ್ಟೆಕ್ ಕೇಂದ್ರವಾಗಿ ಭಾರತ: "ಹೂಡಿಕೆದಾರರ ನಿರಂತರ ಆಸಕ್ತಿಯು ಸ್ಟಾರ್ಟ್ಅಪ್ಗಳು ಮತ್ತು ಸಂಶೋಧನೆಯನ್ನು ಉತ್ತೇಜಿಸುವ ಮಹತ್ವವನ್ನು ಒತ್ತಿಹೇಳುತ್ತದೆ. ಇದು 'ಸ್ಟಾರ್ಟ್ಅಪ್ ಇಂಡಿಯಾ' ಉಪಕ್ರಮದೊಂದಿಗೆ ಹೊಂದಿಕೆಯಾಗುತ್ತದೆ. ಈ ಬೆಳವಣಿಗೆಯು ಉದ್ಯಮದ ಚಲನಶೀಲತೆ ಮತ್ತು ನಾವೀನ್ಯತೆಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಭಾರತವು ಪ್ರಮುಖ ಜಾಗತಿಕ ಫಿನ್ಟೆಕ್ ಕೇಂದ್ರವಾಗಿರುವುದನ್ನು ಸೂಚಿಸುತ್ತದೆ" ಎಂದು ಟ್ರಾಕ್ಸನ್ ಸಹ-ಸಂಸ್ಥಾಪಕಿ ನೇಹಾ ಸಿಂಗ್ ಹೇಳಿದರು.
ಪೀಕ್ ಎಕ್ಸ್ ವಿ ಪಾರ್ಟ್ನರ್ಸ್, ವೈ ಕಂಬೈನೇಟರ್ ಮತ್ತು ಲೆಟ್ಸ್ ವೆಂಚರ್ ಹೂಡಿಕೆ ಕಂಪನಿಗಳು ಈ ವಲಯದಲ್ಲಿ ಪ್ರಮುಖ ಹೂಡಿಕೆದಾರರಾಗಿ ಹೊರಹೊಮ್ಮಿವೆ. ಭಾರತೀಯ ಆರ್ಥಿಕತೆಯಾಗಿ ಫಿನ್ಟೆಕ್ ಬೆಳವಣಿಗೆಯು ಹಿಂದಿನ ತ್ರೈಮಾಸಿಕದಲ್ಲಿ ಶೇಕಡಾ 8.4 ರಷ್ಟು ಬೆಳವಣಿಗೆಯ ದರದೊಂದಿಗೆ ದೃಢವಾದ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ. ಐಎಂಎಫ್ ಪ್ರಕಾರ, 2027 ರ ವೇಳೆಗೆ ಭಾರತವು 5 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ.
ಫಿನ್ಟೆಕ್ ಎಂದರೇನು?: ಫಿನ್ಟೆಕ್ ಎಂಬ ಪದವು ಸರಳವಾಗಿ ಹಣಕಾಸು ಮತ್ತು ತಂತ್ರಜ್ಞಾನ ಎಂಬ ಪದಗಳ ಸಂಯೋಜನೆಯಾಗಿದೆ. ಇದು ಗ್ರಾಹಕರಿಗೆ ಹಣಕಾಸು ಸೇವೆಗಳು ಮತ್ತು ಉತ್ಪನ್ನಗಳನ್ನು ತಲುಪಿಸಲು ತಂತ್ರಜ್ಞಾನದ ಬಳಕೆಯನ್ನು ಸೂಚಿಸುತ್ತದೆ. ಬ್ಯಾಂಕಿಂಗ್, ವಿಮೆ, ಹೂಡಿಕೆ ಹೀಗೆ ಹಣಕಾಸಿಗೆ ಸಂಬಂಧಿಸಿದ ಯಾವುದೇ ಕ್ಷೇತ್ರದ ತಂತ್ರಜ್ಞಾನ ಆಧರಿತ ಉದ್ಯಮವಾಗಿದೆ.
ಉದಾಹರಣೆಗೆ: ಫಿನ್ಟೆಕ್ ಹಣಕಾಸು ಜಗತ್ತನ್ನು ವಿವಿಧ ರೀತಿಗಳಲ್ಲಿ ಬದಲಾಯಿಸುತ್ತಿದೆ. ಉದಾಹರಣೆಗೆ,
* ನೀವು ಈಗ ಬ್ಯಾಂಕಿಗೆ ಭೌತಿಕವಾಗಿ ಭೇಟಿ ನೀಡದೆ ಇಂಟರ್ನೆಟ್ ಮೂಲಕ ಬ್ಯಾಂಕ್ ಖಾತೆಯನ್ನು ತೆರೆಯಬಹುದು.
* ಖಾತೆಯನ್ನು ನಿಮ್ಮ ಸ್ಮಾರ್ಟ್ ಫೋನ್ ಗೆ ಲಿಂಕ್ ಮಾಡಬಹುದು ಮತ್ತು ನಿಮ್ಮ ವಹಿವಾಟುಗಳನ್ನು ನಿರ್ವಹಿಸಲು ಅದನ್ನು ಬಳಸಬಹುದು.
* ನಿಮ್ಮ ಸ್ಮಾರ್ಟ್ ಫೋನ್ ಅನ್ನು ಡಿಜಿಟಲ್ ವ್ಯಾಲೆಟ್ ಆಗಿ ಪರಿವರ್ತಿಸಬಹುದು. ನಿಮ್ಮ ಖಾತೆಯಲ್ಲಿರುವ ಹಣವನ್ನು ವಿವಿಧ ಖರೀದಿಗಳಿಗೆ ಬಳಸಬಹುದು.
ಇದನ್ನೂ ಓದಿ: ಚೀನಾದ ಆರ್ಥಿಕ ಬೆಳವಣಿಗೆ ಅಂದಾಜನ್ನು ಋಣಾತ್ಮಕಕ್ಕೆ ಇಳಿಸಿದ ಫಿಚ್ - China Economy