ಹೈದರಾಬಾದ್; ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್‌ಒ ಅಡಿಯಲ್ಲಿ ಉದ್ಯೋಗಿಗಳ ಗರಿಷ್ಠ ವೇತನ ಮಿತಿ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸದ್ಯ 15 ಸಾವಿರ ರೂ ಮಿತಿ ಇದೆ. ಆದರೆ ಇದು 21 ಸಾವಿರಕ್ಕೆ ಏರಿಕೆಯಾಗಲಿದೆ ಎಂಬ ಸುದ್ದಿ ಇದೆ. ಇಪಿಎಫ್ ವೇತನ ಮಿತಿ ಹೆಚ್ಚಿಸಬೇಕು ಎಂಬ ಬೇಡಿಕೆ ಕಳೆದ ಕೆಲ ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ, ಇತ್ತೀಚೆಗಷ್ಟೇ ರಾಷ್ಟ್ರೀಯ ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿತ್ತು ಎಂದು ವಿಶ್ವಸನೀಯ ಮೂಲಗಳನ್ನು ಉಲ್ಲೇಖಿಸಿ ಹೇಳಲಾಗಿದೆ.
ಹೊಸದಾಗಿ ರಚನೆ ಆಗುವ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವೇತನ ಮಿತಿ ಹೆಚ್ಚಿಸುವುದರಿಂದ ನೌಕರರಿಗೆ ಅನುಕೂಲವಾದರೆ, ಸರಕಾರ ಹಾಗೂ ಖಾಸಗಿ ಸಂಸ್ಥೆಗಳ ಮೇಲೆ ಹೊರೆ ಬೀಳಲಿದೆ. ಇಪಿಎಫ್‌ಒ ಗರಿಷ್ಠ ವೇತನ ಮಿತಿಯನ್ನು ಕೊನೆಯದಾಗಿ 2014ರಲ್ಲಿ ಪರಿಷ್ಕರಿಸಲಾಗಿತ್ತು. ಆಗ 6,500 ಇದ್ದಿದ್ದನ್ನು 15,000 ರೂಗಳಿಗೆ ಹೆಚ್ಚಳ ಮಾಡಲಾಗಿತ್ತು. ಮತ್ತೊಂದೆಡೆ, ನೌಕರರ ರಾಜ್ಯ ವಿಮಾ ನಿಗಮ ಇಎಸ್‌ಐಸಿ ಈಗಾಗಲೇ ವೇತನ ಮಿತಿಯನ್ನು ರೂ.21 ಸಾವಿರಕ್ಕೆ ಹೆಚ್ಚಿಸಿದೆ. ಆ ಮೊತ್ತಕ್ಕೆ ಇಪಿಎಫ್ ಕೂಡ ಸೇರಿಸಲು ಸರ್ಕಾರ ಇದೀಗ ಯೋಜಿಸಿದೆ.
ಇದರಿಂದ ಉದ್ಯೋಗಿಗಳಿಗೆ ಹೇಗೆ ಲಾಭವಾಗಲಿದೆ?: ವೇತನ ಮಿತಿ ಹೆಚ್ಚಳದಿಂದಾಗಿ ನೌಕರರ ಭವಿಷ್ಯ ನಿಧಿ ಖಾತೆಗೆ ಜಮಾ ಆಗುವ ಮೊತ್ತವೂ ಏರಿಕೆಯಾಗಲಿದೆ. ಸಾಮಾನ್ಯವಾಗಿ ನೌಕರನ ಪಾಲು ವೇತನದ 12 ಪ್ರತಿಶತ ಮತ್ತು ಉದ್ಯೋಗದಾತರ ಪಾಲು 12 ಪ್ರತಿಶತ ಇರುತ್ತದೆ. ಉದ್ಯೋಗಿಗಳ ಪಾಲು ಸಂಪೂರ್ಣವಾಗಿ ಇಪಿಎಫ್ ಖಾತೆಯಲ್ಲಿ ಜಮೆಯಾಗುತ್ತದೆ. ಉದ್ಯೋಗದಾತರ ಪಾಲಿನ ಶೇ 8.33ರಷ್ಟು ಹಣ ಪಿಂಚಣಿ ಯೋಜನೆಯಲ್ಲಿ ಠೇವಣಿ ಮಾಡಲಾಗುತ್ತದೆ. ಮತ್ತು ಉಳಿದ ಮೊತ್ತವನ್ನು ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ. ಗರಿಷ್ಠ ವೇತನದ ಮಿತಿಯನ್ನು ಹೆಚ್ಚಿಸಿದರೆ, ಉದ್ಯೋಗಿ ಮತ್ತು ಉದ್ಯೋಗದಾತರು ಪಾವತಿಸುವ ಷೇರು ಹೆಚ್ಚಾಗುತ್ತದೆ. ಇದು EPFO ಮತ್ತು EPS ಖಾತೆಯಲ್ಲಿ ಠೇವಣಿ ಮಾಡುವ ಮೊತ್ತವನ್ನು ಹೆಚ್ಚಿಸುತ್ತದೆ. ನಿವೃತ್ತಿಯ ಸಮಯದಲ್ಲಿ ಉದ್ಯೋಗಿ ತನ್ನ ಭವಿಷ್ಯ ನಿಧಿ ಮೀಸಲು ಹೆಚ್ಚಿಸಲು ಇದು ಅನುವು ಮಾಡಿಕೊಡುತ್ತದೆ.
ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗಳಲ್ಲಿನ ಬ್ಯಾಲೆನ್ಸ್ ಮೇಲಿನ ಬಡ್ಡಿ ದರವನ್ನು ಇತ್ತೀಚೆಗೆ ಅಂತಿಮಗೊಳಿಸಲಾಗಿತ್ತು. 2023 -24ನೇ ಹಣಕಾಸು ವರ್ಷದಲ್ಲಿ ಬಡ್ಡಿ ದರವನ್ನು ಶೇಕಡಾ 8.25 ಕ್ಕೆ ನಿಗದಿಪಡಿಸಲಾಗಿದೆ. ಇದು ಕಳೆದ ಮೂರು ವರ್ಷಗಳಲ್ಲಿಯೇ ಅತಿ ಹೆಚ್ಚು. ಕಳೆದ ಹಣಕಾಸು ವರ್ಷಕ್ಕಿಂತ ಬಡ್ಡಿ ದರ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 2022-23ನೇ ಹಣಕಾಸು ವರ್ಷದಲ್ಲಿ ಬಡ್ಡಿ ದರವನ್ನು ಶೇಕಡಾ 8.15 ಕ್ಕೆ ನಿಗದಿಪಡಿಸಲಾಗಿತ್ತು. ಅದಕ್ಕೂ ಮೊದಲು, 2021-22ರಲ್ಲಿ 8.10 ಪ್ರತಿಶತ ಬಡ್ಡಿ ನೀಡಲಾಗುತ್ತಿತ್ತು.
ಇದನ್ನು ಓದಿ :2025 ನೇ ಸಾಲಿನಲ್ಲಿ ಭಾರತದ ಜಿಡಿಪಿ ಶೇ 7ಕ್ಕೆ ಹೆಚ್ಚಿಸಿದ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ - GDP growth forecast