ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಎಲ್ಲಾ ಪಿಎಫ್ ಖಾತೆದಾರರಿಗೆ ಎಚ್ಚರಿಕೆ ನೀಡಿದೆ. ಹಣ ಹಿಂಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸ್ಥೆ ಮಹತ್ವದ ನಿರ್ಧಾರ ಕೈಗೊಂಡಿದೆ. ಕೋವಿಡ್ ಸಮಯದಲ್ಲಿ ಪಿಎಫ್ ಚಂದಾದಾರರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನೌಕರರು ತಮ್ಮ ನಿಧಿಯಿಂದ ಸ್ವಲ್ಪ ಮೊತ್ತವನ್ನು ಹಿಂಪಡೆಯಲು ಅನುವು ಮಾಡಿಕೊಡಲು ಇಪಿಎಫ್‌ಒ 'ಕೋವಿಡ್ ಅಡ್ವಾನ್ಸ್' ಎಂಬ ಹೊಸ ಸೌಲಭ್ಯ ತಂದಿತ್ತು. ಆದರೆ, ಈಗ ಸೌಲಭ್ಯವನ್ನು ನಿಲ್ಲಿಸುತ್ತಿರುವುದಾಗಿ ತಿಳಿಸಿದೆ.
2020ರಲ್ಲಿ ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಸ್ಫೋಟಗೊಂಡಿತ್ತು. ಇಪಿಎಫ್‌ಒ ಪಿಎಫ್ ಖಾತೆದಾರರಿಗೆ ತಮ್ಮ ವೈದ್ಯಕೀಯ ಮತ್ತು ಆರ್ಥಿಕ ಅಗತ್ಯಗಳನ್ನು ಪೂರೈಸಲು ಖಾತೆಯಿಂದ ಹಣ ತೆಗೆದುಕೊಳ್ಳಲು 'ಕೋವಿಡ್ ಅಡ್ವಾನ್ಸ್' ಸೌಲಭ್ಯ ಪರಿಚಯಿಸಿತ್ತು. ಇದರ ಭಾಗವಾಗಿ, ಕೋವಿಡ್ ಅವಧಿಯಲ್ಲಿ ಎರಡು ಬಾರಿ ನಗದು ಹಿಂಪಡೆಯಲು ಅವಕಾಶ ಒದಗಿಸಿತ್ತು. ಇಪಿಎಫ್‌ಒ ಈ ಸೌಲಭ್ಯವನ್ನು ಮೊದಲ ಬಾರಿಗೆ ಕೋವಿಡ್‌ನ ಮೊದಲ ಅಲೆಯ ಸಮಯದಲ್ಲಿ ತಂದಿತ್ತು. ಮತ್ತು ನಂತರ ಎರಡನೇ ಅಲೆ ಬಂದಾಗ ಮತ್ತೆ ಮುಂದುವರಿಸಿತ್ತು. ಕೋವಿಡ್ ಅಡ್ವಾನ್ಸ್ ಸೌಲಭ್ಯ ಸುಮಾರು ನಾಲ್ಕು ವರ್ಷಗಳಿಂದ ಲಭ್ಯವಿದೆ.
ಮೊದಲು ಒಂದು ಬಾರಿ ಮಾತ್ರ ಮುಂಗಡ ಪಡೆಯಲು ಅವಕಾಶವಿದ್ದರೂ ನಂತರ ಹಲವು ಬಾರಿ ಹಣ ತೆಗೆಯಲು ಅವಕಾಶ ಕಲ್ಪಿಸಲಾಗಿತ್ತು. ಇದರ ಭಾಗವಾಗಿ, ಮೂರು ತಿಂಗಳವರೆಗೆ ಮೂಲ + ಡಿಎ ಅಥವಾ ಇಪಿಎಫ್ ಖಾತೆಯ ಶೇ 75ವರೆಗೆ ಹಿಂಪಡೆಯಲು ಅನುಮತಿಸಲಾಗಿತ್ತು. ಆದರೆ, ಈಗ ಕೋವಿಡ್ ಇಳಿಮುಖವಾದ ಹಿನ್ನೆಲೆಯಲ್ಲಿ ಮುಂಗಡ ಸೌಲಭ್ಯವನ್ನು ನಿಲ್ಲಿಸಲಾಗುವುದು ಎಂದು ಇಪಿಎಫ್‌ಒ ಅಧಿಕೃತವಾಗಿ ಪ್ರಕಟಿಸಿದೆ. ಈ ನಿರ್ಧಾರ ತಕ್ಷಣವೇ ಜಾರಿಗೆ ಬರಲಿದೆ ಎಂದೂ ಸಂಸ್ಥೆ ಬಹಿರಂಗಪಡಿಸಿದೆ.
ವಾಸ್ತವವಾಗಿ, ಈ ಸೌಲಭ್ಯವು ಕೋವಿಡ್ ಸಮಯದಲ್ಲಿ ಅನೇಕ ಜನರಿಗೆ ತುಂಬಾ ಸಹಾಯಕವಾಗಿದೆ. ಆದರೂ ಕೆಲವರು ಈ ಮರುಪಾವತಿಸಲಾಗದ ಮುಂಗಡ ಸೌಲಭ್ಯವನ್ನು ಇತರ ಅಗತ್ಯಗಳಿಗಾಗಿ ಬಳಸಿದ್ದಾರೆ. ಇದು ಅವರ ನಿವೃತ್ತಿ ಉಳಿತಾಯದ ಮೇಲೆ ಪರಿಣಾಮ ಬೀರಿದೆ ಎಂದು ತಜ್ಞರು ಹೇಳುತ್ತಾರೆ.
ಚಿಂತೆ ಬೇಡ, ಈ ಆಯ್ಕೆಗಳಿವೆ: ಮುಂಗಡ ಸೌಲಭ್ಯ ನಿಲ್ಲಿಸಿದರೂ ಮನೆ ಖರೀದಿ, ಮದುವೆ, ಮಕ್ಕಳ ಉನ್ನತ ಶಿಕ್ಷಣ, ಉದ್ಯೋಗ ನಷ್ಟ, ಅನಾರೋಗ್ಯ ಸೇರಿದಂತೆ ಮತ್ತಿತರ ಸಂದರ್ಭಗಳಲ್ಲಿ ಇಪಿಎಫ್ ಖಾತೆಯಲ್ಲಿನ ಮೊತ್ತವನ್ನು ನಿರ್ದಿಷ್ಟ ಮಿತಿಯವರೆಗೆ ಹಿಂಪಡೆಯುವ ಸೌಲಭ್ಯವಿದೆ. EPFO ಇತ್ತೀಚೆಗೆ ನಗದು ಹಿಂಪಡೆಯುವ ಮಿತಿಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಶಿಕ್ಷಣ, ಮದುವೆ ಹಕ್ಕು ಸೇರಿದಂತೆ ವಸತಿ ಹಕ್ಕುಗಳಿಗೂ ಆಟೋ ಸೆಟ್ಲ್‌ಮೆಂಟ್ ಸೌಲಭ್ಯ ತಂದಿದೆ.
ಇದನ್ನೂ ಓದಿ: 82,000ಕ್ಕೆ ತಲುಪಲಿದೆಯಾ ಸೆನ್ಸೆಕ್ಸ್? ರೇಟಿಂಗ್ ಏಜೆನ್ಸಿಗಳ ಮುನ್ಸೂಚನೆ ಏನು? - Stock Market