ನವದೆಹಲಿ: ಅಡುಗೆ ಪದಾರ್ಥಗಳ ಬೆಲೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಶಾಕಾಹಾರಿ ಮತ್ತು ಮಾಂಸಾಹಾರಿ ಎರಡೂ ಥಾಲಿಗಳ (ಊಟ) ಬೆಲೆ ಕ್ರಮವಾಗಿ ಶೇ 11 ಮತ್ತು ಶೇ 6ರಷ್ಟು ಏರಿಕೆಯಾಗಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ. ಆದಾಗ್ಯೂ, ವರ್ಷದಿಂದ ವರ್ಷಕ್ಕೆ ನೋಡಿದರೆ ಮನೆಯಲ್ಲಿ ಬೇಯಿಸಿದ ಸಸ್ಯಾಹಾರಿ ಥಾಲಿಯ ಬೆಲೆ ಜುಲೈನಲ್ಲಿ ಶೇಕಡಾ 4ರಷ್ಟು ಕಡಿಮೆಯಾಗಿದ್ದರೆ, ನಾನ್-ವೆಜ್ ಥಾಲಿಯ ಬೆಲೆ ಶೇಕಡಾ 9ರಷ್ಟು ಕಡಿಮೆಯಾಗಿದೆ.
ಕ್ರಿಸಿಲ್ನ ಊಟದ ವೆಚ್ಚದ ಮಾಸಿಕ ಸೂಚಕದ ಪ್ರಕಾರ ಧಾನ್ಯಗಳು, ಬೇಳೆಕಾಳು, ಬ್ರಾಯ್ಲರ್ಗಳು, ತರಕಾರಿ, ಮಸಾಲೆ, ಖಾದ್ಯ ತೈಲ ಮತ್ತು ಅಡುಗೆ ಅನಿಲದ ಬೆಲೆ ಹೆಚ್ಚಾಗಿರುವುದು ಥಾಲಿ ಬೆಲೆ ಏರಿಕೆಯಾಗಲು ಪ್ರಮುಖ ಕಾರಣವಾಗಿವೆ. ವೆಜ್ ಥಾಲಿಯ ಬೆಲೆ ಶೇ 11ರಷ್ಟು ಏರಿಕೆಯಾಗಿದ್ದು, ಇದರಲ್ಲಿ ಶೇ 7ರಷ್ಟು ಪಾಲು ಟೊಮೆಟೊದ್ದೇ ಆಗಿದೆ. ಟೊಮೆಟೊ ಬೆಲೆಗಳು ಜೂನ್ನಲ್ಲಿ ಪ್ರತಿ ಕೆ.ಜಿ.ಗೆ 42 ರೂ. ಇದ್ದುದು ಜುಲೈನಲ್ಲಿ ಪ್ರತಿ ಕೆ.ಜಿ.ಗೆ 66 ರೂ.ಗೆ ಅಂದರೆ ಒಂದೇ ತಿಂಗಳಲ್ಲಿ ಶೇಕಡಾ 55ರಷ್ಟು ಏರಿಕೆಯಾಗಿವೆ.
ಅಂಕಿಅಂಶಗಳ ಪ್ರಕಾರ, ಹೆಚ್ಚಾಗಿ ಟೊಮೆಟೊ ಬೆಳೆಯುವ ಕರ್ನಾಟಕ ಮತ್ತು ಆಂಧ್ರ ಪ್ರದೇಶದಂಥ ರಾಜ್ಯಗಳಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ ಟೊಮೆಟೊ ಬೆಲೆಗಳು ಹೆಚ್ಚಾಗಿವೆ. ಇದಲ್ಲದೆ ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಟೊಮೆಟೊ ಬೆಳೆಗೆ ಬಿಳಿಹುಳುಗಳ ಬಾಧೆ ತಗುಲಿತ್ತು. ಇದರಿಂದ ಟೊಮೆಟೊ ಇಳುವರಿ ಕುಂಠಿತವಾಗಿದೆ.
"ವೆಜ್ ಥಾಲಿಗೆ ಹೋಲಿಸಿದರೆ ನಾನ್-ವೆಜ್ ಥಾಲಿಯ ಬೆಲೆ ನಿಧಾನಗತಿಯಲ್ಲಿ ಏರಿಕೆಯಾಗಿದೆ. ಬ್ರಾಯ್ಲರ್ ಬೆಲೆ ಬಹುತೇಕ ಸ್ಥಿರವಾಗಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ" ಎಂದು ವರದಿ ತಿಳಿಸಿದೆ.
ಟೊಮೆಟೊ ಬೆಲೆಗಳು ಹಿಂದಿನ ವರ್ಷಕ್ಕಿಂತ ಈ ವರ್ಷ ಶೇ 40ರಷ್ಟು ಕಡಿಮೆಯಾಗಿರುವುದರಿಂದ ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ವೆಜ್ ಥಾಲಿ ಬೆಲೆ ಕಡಿಮೆಯಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿನ ಪ್ರವಾಹ ಮತ್ತು ಕರ್ನಾಟಕದಲ್ಲಿ ಟೊಮೆಟೊ ಬೆಳೆಗೆ ಕೀಟ ಬಾಧೆ ಕಾಣಿಸಿಕೊಂಡಿದ್ದರಿಂದ ಜುಲೈ 2023ರಲ್ಲಿ ಟೊಮೆಟೊ ಬೆಲೆಗಳು ಪ್ರತಿ ಕೆ.ಜಿ.ಗೆ 110 ರೂ.ಗೆ ತಲುಪಿದ್ದವು. ನಾನ್-ವೆಜ್ ಥಾಲಿಯ ಬಗ್ಗೆ ನೋಡುವುದಾದರೆ- 2024ರ ಆರ್ಥಿಕ ವರ್ಷದಲ್ಲಿ ಬ್ರಾಯ್ಲರ್ ಬೆಲೆಯಲ್ಲಿ ಅಂದಾಜು 11 ಪ್ರತಿಶತದಷ್ಟು ಕುಸಿತದಿಂದಾಗಿ ವೆಚ್ಚ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.