ಹೈದರಾಬಾದ್: ಸಾಲವು ಯಾವಾಗಲೂ ಹೊರೆ ಎಂಬುದನ್ನು ಮಾತ್ರ ಮರೆಯಬೇಡಿ. ಯಾವುದೇ ಕಾರಣಕ್ಕೂ ಮನೆ, ಮದುವೆಗೆ ಸಾಲ ಮಾಡಬಾರದು ಅಂತಾರೆ ಹಿರಿಯರು. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಜನಪ್ರಿಯ ಗಾದೆ ಮಾತೇ ಇದೆ. ಆದರೆ, ಸಾಲ ತೆಗೆದುಕೊಳ್ಳುವಾಗ ಒಂದಿಷ್ಟು ಮುಂಜಾಗ್ರತೆ ವಹಿಸಿದರೆ ಅದು ನಮಗೆ ಹೊರೆಯಾಗುವುದಿಲ್ಲ. ಮನೆ ಖರೀದಿ ಮಾಡಬೇಕೆಂದರೆ ಗೃಹ ಸಾಲ ಮಾಡುವುದು ಈಗಿಗ ಕಾಮನ್ ಕೂಡಾ ಆಗಿದೆ. ನೀವೇನಾದರೂ ಮೊದಲ ಬಾರಿಗೆ ಗೃಹ ಸಾಲ ಪಡೆಯುತ್ತಿದ್ದರೆ ಈ ಎಲ್ಲ ಮುನ್ನೆಚ್ಚರಿಕೆಗಳನ್ನು ಹೊಂದುವುದು ಅನಿವಾರ್ಯ.
ಗೃಹ ಸಾಲ ಅಂದರೆ ಅದು ದೀರ್ಘಾವಧಿಯದ್ದೇ ಆಗಿರುತ್ತೆ: ಮನೆ ಸಾಲ ಪೂರ್ಣಗೊಳ್ಳಲು ಸಾಮಾನ್ಯವಾಗಿ 15 ರಿಂದ 30 ವರ್ಷಗಳು ಬೇಕಾಗುತ್ತದೆ. ನೀವು ಬೇಗನೇ ಸಾಲ ತೀರಿಸಬೇಕು ಎಂದು ಬಯಸಿದ್ದರೆ ಅದಕ್ಕೆ ಹೆಚ್ಚಿನ ಇಎಂಐ ಪಾವತಿ ಮಾಡಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಅದಕ್ಕಾಗಿಯೇ ಗೃಹ ಸಾಲವನ್ನು ತೆಗೆದುಕೊಳ್ಳುವ ಮೊದಲು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸುವುದು ಜಾಣರ ಲಕ್ಷಣ. ನಿಮ್ಮ ದೈನಂದಿನ ಮತ್ತು ಕನಿಷ್ಠ ಅಗತ್ಯತೆಗಳಿಗಾಗಿ ಯಾವುದೇ ತೊಂದರೆಯಿಲ್ಲದೇ ನೀವು ಮಾಸಿಕ ಕಂತುಗಳನ್ನು (ಇಎಂಐ) ಪಾವತಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ಯಾವುದೇ ಸಮಸ್ಯೆಗಳಿಲ್ಲದೇ ನಿಮ್ಮ ಭವಿಷ್ಯದ ಆರ್ಥಿಕ ಭದ್ರತೆಗಾಗಿ ನಾವು ಮೊದಲೇ ಯೋಜಿಸಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವುದು ಅತಿ ಮುಖ್ಯ. ನೀವು ಪಾವತಿಸುವ ಈ ಮಾಸಿಕ ಕಂತುಗಳು ನಿಮ್ಮ ಹಣಕಾಸಿನ ಗುರಿಗಳನ್ನು ಪೂರೈಸಲು ಸಹ ಅಡ್ಡಿಯಾಗದಂತೆ ಸದಾ ಜಾಗರೂಕರಾಗಿರುವುದು ಹೆಚ್ಚು ಸುರಕ್ಷಿತ.
ಅಗತ್ಯ - ಆಧಾರಿತ ಸಾಲ: ನೀವು ಹೋಮ್ ಲೋನ್ ತೆಗೆದುಕೊಳ್ಳುವ ಮೊದಲು, ನಿಮ್ಮ ಹಣಕಾಸಿನ ಸಾಮರ್ಥ್ಯವನ್ನು ನೀವು ಅರಿತುಕೊಳ್ಳುವುದು ಒಳ್ಳೆಯದು. ನಿರ್ದಿಷ್ಟವಾಗಿ ಹೇಳುವುದಾದರೆ, ನಿಮ್ಮ ಕನಿಷ್ಠ ಅಗತ್ಯತೆಗಳು, ಮನೆಯ ವೆಚ್ಚಗಳು, ಮಾಡಬೇಕಾದ ಉಳಿತಾಯ ಇತ್ಯಾದಿಗಳನ್ನು ನೀವು ಮೊದಲೇ ಲೆಕ್ಕ ಹಾಕಿ ಇಟ್ಟುಕೊಳ್ಳಬೇಕು. ಅದರ ನಂತರವೇ ನೀವು ಎಷ್ಟು ಗೃಹ ಸಾಲ ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಬೇಕು. ಆಗ ನಿಮಗೆ ಮಾಸಿಕ ಕಂತುಗಳನ್ನು ಪಾವತಿಸಲು ಸುಲಭವಾಗುತ್ತದೆ. ಹಾಗಾಗಿ ಯಾವುದೇ ಸಂದರ್ಭದಲ್ಲೂ ನಿಮ್ಮ ಶಕ್ತಿ ಮೀರಿ ಸಾಲ ಮಾಡದಂತೆ ಎಚ್ಚರಿಕೆ ವಹಿಸಿ.
ಸಾಲದ ಮೊತ್ತವು ಅಧಿಕವಾಗಿದ್ದರೆ?: ಸಾಲದ ಮೇಲೆ ನೀವು ಪಾವತಿಸಬೇಕಾದ ಇಎಂಐಗಳು ನಿಮ್ಮ ಒಟ್ಟು ಆದಾಯದ 35 ಪ್ರತಿಶತಕ್ಕಿಂತ ಕಡಿಮೆ ಇರಬೇಕು. ಆ ಬಗ್ಗೆ ಲೆಕ್ಕಾಚಾರ ಸರಿ ಇದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆಗ ಮಾತ್ರ ಬ್ಯಾಂಕ್‌ಗಳು ನಿಮಗೆ ಸಾಲ ನೀಡಲು ಸಿದ್ಧವಾಗುತ್ತವೆ. ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ನಿಮಗೆ ಸಾಲವನ್ನು ಅನುಮೋದಿಸುವ ಮೊದಲು ನಿಮ್ಮ ಆದಾಯ ಮತ್ತು ಇತರ ಸಾಲಗಳನ್ನು ಹೋಲಿಕೆ ಮಾಡುತ್ತವೆ. ನೀವು ಇತರ ಆದಾಯಗಳನ್ನು ಹೊಂದಿದ್ದರೆ ಅವುಗಳ ಬಗ್ಗೆ ಬ್ಯಾಂಕ್‌ಗೆ ತಿಳಿಸುವುದು ಉತ್ತಮ. ಇದು ನಿಮಗೆ ಹೆಚ್ಚಿನ ಸಾಲದ ಮೊತ್ತವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
ಡೌನ್ ಪೇಮೆಂಟ್: ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ಸಾಮಾನ್ಯವಾಗಿ ನೀವು ಖರೀದಿಸುವ ಮನೆಯ ಮೌಲ್ಯದ ಶೇ 80ರಷ್ಟು ಅಥವಾ 90 ರಷ್ಟು ಹಣವನ್ನು ಮಾತ್ರವೇ ನಿಮಗೆ ನೀಡುತ್ತವೆ. ಉಳಿದ ಮೊತ್ತವನ್ನು ನೀವು ಭರಿಸಬೇಕಾಗುತ್ತದೆ. ನೀವು ಹೆಚ್ಚುವರಿ ಉಳಿತಾಯವನ್ನು ಹೊಂದಿದ್ದರೆ, ಡೌನ್ ಪೇಮೆಂಟ್ ಮೊತ್ತವನ್ನು ಹೆಚ್ಚಿಸುವುದು ಉತ್ತಮವಾದ ನಿರ್ಧಾರವಾಗುತ್ತದೆ. ಇದು ನಿಮ್ಮ ಬ್ಯಾಂಕ್ ಸಾಲದ ಮೊತ್ತವನ್ನು ಕಡಿಮೆ ಮಾಡುತ್ತದೆ. ಇನ್ನು ನೀವು ಪಾವತಿಸಬೇಕಾದ EMI ಅನ್ನು ಕೂಡಾ ಕಡಿಮೆ ಮಾಡುತ್ತದೆ. ಮನೆಯ ಒಟ್ಟು ಖರೀದಿ ಬೆಲೆಯ ಶೇ.20ರಷ್ಟು ಡೌನ್ ಪೇಮೆಂಟ್ ಮಾಡುವುದು ಉತ್ತಮ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ. ಆದರೆ ಕೆಲವು ಬ್ಯಾಂಕುಗಳು ಪೂರ್ವಪಾವತಿಯನ್ನು ಪ್ರೋತ್ಸಾಹಿಸುತ್ತವೆ. ಅಂತಹ ಸಮಯದಲ್ಲಿ ನೀವು ಮುಂಗಡ ಪಾವತಿ ಮತ್ತು ಸಾಲವನ್ನು ಸಾಧ್ಯವಾದಷ್ಟು ಬೇಗ ಪಾವತಿಸುವುದು ಉತ್ತಮ. ಇದರಿಂದ ನಿಮ್ಮ ಮೇಲಿನ ಬಡ್ಡಿ ಹೊರೆ ಕಡಿಮೆಯಾಗುತ್ತದೆ.
ಗೃಹ ಸಾಲವನ್ನು ತೆಗೆದುಕೊಂಡ ನಂತರ ಮಾಸಿಕ ಕಂತುಗಳ ಹೊರತಾಗಿ ಹೆಚ್ಚುವರಿ ವೆಚ್ಚಗಳನ್ನು ಕಡಿಮೆ ಮಾಡಿ, ನೀವು ಖರೀದಿಸಿದ ಮನೆಯ ನಿರ್ವಹಣಾ ವೆಚ್ಚವನ್ನು ಸಹ ನೀವು ಕಡಿಮೆ ಮಾಡಿದರೆ ಒಳಿತು. ಇವು ಮುಖ್ಯವಾಗಿ ನಿರ್ವಹಣೆ ಶುಲ್ಕಗಳು, ಆಸ್ತಿ ತೆರಿಗೆಗಳು, ಮಾಸಿಕ ಬಿಲ್‌ಗಳು ಮತ್ತು ಇತರ ವೆಚ್ಚಗಳನ್ನು ಒಳಗೊಂಡಿರುತ್ತವೆ.
ಲೋನ್ ಕವರ್ ಟರ್ಮ್ ಪಾಲಿಸಿ: ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ ನೀವು ಅಥವಾ ನಿಮ್ಮ ಕುಟುಂಬ ಆರ್ಥಿಕವಾಗಿ ನಾಶವಾಗದಂತೆ ಲೋನ್ ಕವರ್ ಟರ್ಮ್ ಪಾಲಿಸಿಯನ್ನು ತೆಗೆದುಕೊಳ್ಳುವುದು ಉತ್ತಮ. ಇದು ನಿಮ್ಮ ಕುಟುಂಬವನ್ನು ರಕ್ಷಿಸುತ್ತದೆ. ಅದಕ್ಕಾಗಿಯೇ ನಿಮ್ಮ ವಾರ್ಷಿಕ ಆದಾಯದ 10 ರಿಂದ 12 ಪಟ್ಟು ವಿಮೆಯನ್ನು ಪಡೆಯಬೇಕು ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ. ಈ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ಯಾವುದೇ ಹಣಕಾಸಿನ ತೊಂದರೆಗಳಿಲ್ಲದೇ ನಿಮ್ಮ ಸ್ವಂತ ಮನೆಯನ್ನು ಹೊಂದುವ ನಿಮ್ಮ ಕನಸು ನನಸಾಗುತ್ತದೆ.