ನವದೆಹಲಿ: ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ ಎಂ4 ಕಾಂಪಿಟಿಷನ್ ಎಂ ಎಕ್ಸ್ ಡ್ರೈವ್ (M4 Competition M xDrive) ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಕಾರು ಕಂಪ್ಲೀಟ್ ಬಿಲ್ಟ್-ಅಪ್ (ಸಿಬಿಯು) ಮಾದರಿಯಲ್ಲಿ ದೇಶದಲ್ಲಿ ಲಭ್ಯವಿದ್ದು, ಬಿಎಂಡಬ್ಲ್ಯು ಡೀಲರ್ ಶಿಪ್ ನೆಟ್ ವರ್ಕ್ನಲ್ಲಿ ಮತ್ತು ಕಂಪೆನಿಯ ಆನ್‌ಲೈನ್ ಶಾಪ್ ವೆಬ್ಸೈಟ್ ಮೂಲಕ ಬುಕ್ ಮಾಡಬಹುದು. ಈ ಎಂ4 ಕಾಂಪಿಟಿಷನ್ ಎಂ ಎಕ್ಸ್ ಡ್ರೈವ್ ಕಾರಿನ ಎಕ್ಸ್ ಶೋ ರೂಮ್ ಬೆಲೆ 1,53,00,000 ರೂ. (1 ಕೋಟಿ 53 ಲಕ್ಷ) ಆಗಿದೆ.
ಹೊಸ ಕಾರು ಮೆಟಾಲಿಕ್ ಪೇಂಟ್ವರ್ಕ್ ಮಾದರಿಯ ಸ್ಕೈ ಸ್ಕ್ರೇಪರ್ ಗ್ರೇ, ಪೋರ್ಟಿಮಾವೊ ಬ್ಲೂ, ಬ್ಲ್ಯಾಕ್ ಸಫೈರ್, ಸಾವೊ ಪಾಲೊ ಯೆಲ್ಲೋ, ಟೊರೊಂಟೊ ರೆಡ್, ಬ್ರೂಕ್ಲಿನ್ ಗ್ರೇ, ಐಲ್ ಆಫ್ ಮ್ಯಾನ್ ಗ್ರೀನ್, ಅವೆಂಚುರಿನ್ ರೆಡ್ ಮತ್ತು ಆಲ್ಪೈನ್ ವೈಟ್ ಬಣ್ಣಗಳಲ್ಲಿ ಹಾಗೂ ಐಚ್ಛಿಕ ಬಿಎಂಡಬ್ಲ್ಯು ವೈಯಕ್ತಿಕ ಮೆಟಾಲಿಕ್ ಟಾಂಜನೈಟ್ ಬ್ಲೂ ಮತ್ತು ಡ್ರಾವಿಟ್ ಗ್ರೇ ವರ್ಣಗಳಲ್ಲಿ ಲಭ್ಯ.
ಈ ಕಾರಿನಲ್ಲಿ ಏನೇನಿದೆ?: ಹೊಸ ಕಾರಿನಲ್ಲಿ ಬಿಎಂಡಬ್ಲ್ಯು ಎಂ ಟ್ವಿನ್ ಪವರ್ ಟರ್ಬೊ ಎಸ್ 58 ಆರು ಸಿಲಿಂಡರ್ ಇನ್-ಲೈನ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ 3.0-ಲೀಟರ್ ಸಾಮರ್ಥ್ಯದ ಎಂಜಿನ್ ಡೈನಾಮಿಕ್ ಪವರ್ ಡೆಲಿವರಿ ಮತ್ತು ಸಿಗ್ನೇಚರ್ ಎಂ ಸೌಂಡ್ ಅನ್ನು ಹೊಂದಿದೆ. ಇದನ್ನು ಇಂಟೆಲಿಜೆಂಟ್ ಫೋರ್-ವ್ಹೀಲ್ ಡ್ರೈವ್ ಎಂ ಎಕ್ಸ್ ಡ್ರೈವ್‌ನೊಂದಿಗೆ ಸಂಯೋಜಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.
ಈ ಎಂಜಿನ್ ಕೇವಲ 3.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗೋತ್ಕರ್ಷದೊಂದಿಗೆ 530 ಬಿಹೆಚ್‌ಪಿ (ಅಶ್ವಶಕ್ತಿ) ಮತ್ತು 650 ಎನ್ಎಂ (ನ್ಯೂಟನ್ ಮೀಟರ್) ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಸುರಕ್ಷತೆಗಾಗಿ, ಹೊಸ ಬಿಎಂಡಬ್ಲ್ಯು ಎಂ 4 ಕಾಂಪಿಟಿಷನ್ ಕಾರಿನಲ್ಲಿ ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ಹೆಡ್ ಮತ್ತು ಸೈಡ್ ಏರ್ ಬ್ಯಾಗ್‌ಗಳನ್ನು ಮತ್ತು ಹಿಂಭಾಗದ ಸೀಟ್‌ಗಳಿಗೆ ಹೆಡ್ ಏರ್ ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.
BMW ಬಗ್ಗೆ ನಿಮಗಿದು ತಿಳಿದಿರಲಿ: ಜರ್ಮನಿಯ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಗುಣಮಟ್ಟದ ಸ್ಪೋರ್ಟ್ಸ್ ಸೆಡಾನ್‌ಗಳು ಮತ್ತು ಮೋಟಾರ್ ಸೈಕಲ್ಗಳಿಗೆ ಹೆಸರುವಾಸಿಯಾಗಿದ್ದು, ವಿಶ್ವದ ಪ್ರಮುಖ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಕಂಪೆನಿಯ ಪ್ರಧಾನ ಕಚೇರಿ ಮ್ಯೂನಿಚ್ನಲ್ಲಿದೆ. ಇದು 1916ರಲ್ಲಿ ವಿಮಾನ ಎಂಜಿನ್ಗಳನ್ನು ತಯಾರಿಸುವ ಕಂಪನಿಯಾಗಿ ಬೇಯರ್ಶೆ ಫ್ಲುಗ್ಜೆಗ್-ವೆರ್ಕೆ ಹೆಸರಿನಲ್ಲಿ ಆರಂಭಗೊಂಡಿತ್ತು. ನಂತರ ಜುಲೈ 1917ರಲ್ಲಿ ಇದರ ಹೆಸರನ್ನು ಬೇಯರ್ಶೆ ಮೊಟೊರೆನ್ ವೆರ್ಕೆ ಎಂದು ಬದಲಾಯಿಸಲಾಯಿತು. ಕಂಪನಿಯು 1920ರ ದಶಕದಲ್ಲಿ ಮೋಟಾರ್ ಸೈಕಲ್ಗಳನ್ನು ಉತ್ಪಾದಿಸಲು ಪ್ರಾರಂಭಿಸಿತು.
ಇದನ್ನೂ ಓದಿ: ಅಗ್ಗದ ದರದಲ್ಲಿ ರಷ್ಯಾದಿಂದ ಕಚ್ಚಾತೈಲ ಖರೀದಿ: ಭಾರತದ ಖಜಾನೆಗೆ 7.9 ಬಿಲಿಯನ್ ಡಾಲರ್ ಉಳಿತಾಯ - Cheap Oil from Russia