ನವದೆಹಲಿ: ಭಾರ್ತಿ ಎಂಟರ್ಪ್ರೈಸಸ್ನ ಅಂತಾರಾಷ್ಟ್ರೀಯ ಹೂಡಿಕೆ ವಿಭಾಗವಾದ ಭಾರ್ತಿ ಗ್ಲೋಬಲ್ ಸೋಮವಾರ ಯುನೈಟೆಡ್ ಕಿಂಗ್ಡಮ್ನ ದೂರಸಂಪರ್ಕ ಕಂಪನಿ ಬಿಟಿ ಗ್ರೂಪ್ನಲ್ಲಿನ (ಬ್ರಿಟಿಷ್ ಟೆಲಿಕಾಂ) ಶೇಕಡಾ 24.5ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ಏರ್ಟೆಲ್ ಬ್ರಿಟಿಷ್ ಟೆಲಿಕಾಂ ಗೆ ಅಂದಾಜು 4 ಬಿಲಿಯನ್ ಡಾಲರ್ ಪಾವತಿಸಲಿದೆ.
ಭಾರ್ತಿ ಗ್ಲೋಬಲ್ ಸ್ಥಾಪಿಸಿದ ಮತ್ತು ಅದರ ಸಂಪೂರ್ಣ ಸ್ವಾಮ್ಯದ ಭಾರ್ತಿ ಟೆಲಿವೆಂಚರ್ಸ್ ಯುಕೆ ಮೂಲಕ ಬಿಟಿಯ ಷೇರುಗಳನ್ನು ಖರೀದಿಸಲಾಗುವುದು. ಕಂಪನಿಯು ಫ್ರೆಂಚ್ ಟೆಲಿಕಾಂ ಉದ್ಯಮಿ ಪ್ಯಾಟ್ರಿಕ್ ಡ್ರಾಹಿ ಸ್ಥಾಪಿಸಿದ ಆಲ್ಟಿಸ್ ಯುಕೆಯಿಂದ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ. ವಹಿವಾಟು ಮುಗಿದ ನಂತರ ಭಾರ್ತಿ ಗ್ಲೋಬಲ್ ಬ್ರಿಟಿಷ್ ಟೆಲಿಕಾಂನ ಅತಿದೊಡ್ಡ ಷೇರುದಾರನಾಗಲಿದೆ ಎಂದು ಕಂಪನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
"ಭಾರ್ತಿ ಮತ್ತು ಬ್ರಿಟಿಷ್ ಟೆಲಿಕಾಂ (ಬಿಟಿ) ಎರಡು ದಶಕಕ್ಕೂ ಹಿಂದಿನಿಂದ ಸಂಬಂಧ ಹೊಂದಿವೆ. ಬಿಟಿ 1997ರಿಂದ 2001ರ ಅವಧಿಯಲ್ಲಿ ಭಾರ್ತಿ ಏರ್ಟೆಲ್ ಲಿಮಿಟೆಡ್ನಲ್ಲಿ ಎರಡು ಆಡಳಿತ ಮಂಡಳಿ ಸ್ಥಾನಗಳೊಂದಿಗೆ ಶೇಕಡಾ 21ರಷ್ಟು ಪಾಲು ಹೊಂದಿತ್ತು" ಎಂದು ಭಾರ್ತಿ ಎಂಟರ್‌ಪ್ರೈಸಸ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ.
"ಬೃಹತ್ ಬ್ರಿಟಿಷ್ ಕಂಪನಿಯಾಗಿರುವ ಬಿಟಿಯಲ್ಲಿ ಹೂಡಿಕೆ ಮಾಡುತ್ತಿರುವ ಇಂದಿನ ದಿನವು ಭಾರ್ತಿ ಗ್ರೂಪ್ನ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಬಿಟಿಯಲ್ಲಿನ ಈ ಹೂಡಿಕೆಯು ಭಾರತ-ಯುಕೆ ಸಂಬಂಧಗಳನ್ನು ಉನ್ನತೀಕರಿಸುವ ಮತ್ತು ವಿಸ್ತರಿಸುವ ದೃಷ್ಟಿಕೋನದ ಬಗ್ಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆಯನ್ನು ಬೆಂಬಲಿಸುವ ಗುರಿ ಹೊಂದಿದೆ" ಎಂದು ಮಿತ್ತಲ್ ಹೇಳಿದರು.
ಭಾರ್ತಿ ಗ್ಲೋಬಲ್ ಬ್ರಿಟನ್ನಲ್ಲಿ ಹಲವಾರು ಪ್ರಮುಖ ಹೂಡಿಕೆಗಳನ್ನು ಮಾಡಿದೆ. ಇದರಲ್ಲಿ ಬಾಹ್ಯಾಕಾಶ ಸಂವಹನ ಕಂಪನಿ ಒನ್ ವೆಬ್ ಕೂಡ ಸೇರಿದೆ. ಒನ್ ವೆಬ್ 2023ರಲ್ಲಿ ಯುಟೆಲ್ಸಾಟ್ನೊಂದಿಗೆ ವಿಲೀನಗೊಂಡಿದೆ.
"ಭಾರ್ತಿ ಗ್ಲೋಬಲ್ನ ಇಷ್ಟು ದೊಡ್ಡ ಪ್ರಮಾಣದ ಹೂಡಿಕೆಯು ಬಿಟಿ ಗ್ರೂಪ್ನ ಭವಿಷ್ಯ ಮತ್ತು ನಮ್ಮ ಕಾರ್ಯತಂತ್ರದ ಬಗ್ಗೆ ವಿಶ್ವಾಸದ ದೊಡ್ಡ ಹೆಜ್ಜೆಯಾಗಿದೆ" ಎಂದು ಬಿಟಿ ಗ್ರೂಪ್ ಸಿಇಒ ಆಲಿಸನ್ ಕಿರ್ಕ್ಬಿ ಹೇಳಿದರು.
ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಏರ್ಟೆಲ್ ಜಾಗತಿಕ ಮಟ್ಟದ ಟೆಲಿಕಾಂ ಕಂಪನಿಯಾಗಿದ್ದು, ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದಾದ್ಯಂತ 17 ದೇಶಗಳಲ್ಲಿ 550 ದಶಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಕಂಪನಿಯು ಜಾಗತಿಕವಾಗಿ ಅಗ್ರ ಮೂರು ಮೊಬೈಲ್ ಆಪರೇಟರ್ ಗಳಲ್ಲಿ ಒಂದಾಗಿದೆ ಮತ್ತು ಅದರ ನೆಟ್ ವರ್ಕ್ಗಳು ಎರಡು ಬಿಲಿಯನ್ ಜನರನ್ನು ಒಳಗೊಂಡಿವೆ.
ಇದನ್ನೂ ಓದಿ: ಭಾರತೀಯ ಶಾಕಾಹಾರಿ ಊಟಕ್ಕೆ ಬೇಡಿಕೆ: ಪಾಕಿಸ್ತಾನದ ಕರಾಚಿಯಲ್ಲಿ ಹೊಸ ಟ್ರೆಂಡ್ - Indian Food in Karachi