ಬೆಂಗಳೂರು : ಬೆಂಗಳೂರು ಮೂಲದ ಫಾರ್ಮಾಸ್ಯುಟಿಕಲ್ ಕಂಪನಿ ಬಯೋಕಾನ್ ಲಿಮಿಟೆಡ್ 2023-24ರ ಆರ್ಥಿಕ ವರ್ಷದ ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 42 ಕೋಟಿ ರೂ. ನಿವ್ವಳ ನಷ್ಟಕ್ಕೆ ಪ್ರತಿಯಾಗಿ ಕಂಪನಿ ಈ ವರ್ಷ 660 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಇದಲ್ಲದೆ, ಕಂಪನಿಯ ಆದಾಯ ಶೇಕಡಾ 34 ರಷ್ಟು ಏರಿಕೆಯಾಗಿ 3,954 ಕೋಟಿ ರೂ.ಗೆ ತಲುಪಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿ 2,941 ಕೋಟಿ ರೂ. ಆದಾಯ ಗಳಿಸಿತ್ತು. ಬಡ್ಡಿ, ತೆರಿಗೆ, ಸವಕಳಿ ಮತ್ತು ಅಮೋರ್ಟೈಸೇಶನ್ (ಇಬಿಐಟಿಡಿಎ) ಗೆ ಮುಂಚಿತವಾಗಿ ಕಂಪನಿಯ ಆದಾಯ 926 ಕೋಟಿ ರೂ.ಗೆ ಇಳಿದಿದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ ಇದ್ದ 644.3 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ ಎಂದು ಸಂಸ್ಥೆ ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದೆ. ಇಬಿಐಟಿಡಿಎ ಮಾರ್ಜಿನ್ ಹಿಂದಿನ ವರ್ಷದ ಅವಧಿಯಲ್ಲಿ ಶೇಕಡಾ 21.9 ರಿಂದ ಶೇಕಡಾ 23.4 ಕ್ಕೆ ಇಳಿದಿದೆ.
ಈ ಬಗ್ಗೆ ಮಾತನಾಡಿದ ಬಯೋಕಾನ್ ಮತ್ತು ಬಯೋಕಾನ್ ಬಯೋಲಾಜಿಕ್ಸ್ನ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, "ಬಯೋಕಾನ್ ಮೂರನೇ ತ್ರೈಮಾಸಿಕದಲ್ಲಿ 4,519 ಕೋಟಿ ರೂ.ಗಳ ಏಕೀಕೃತ ಆದಾಯ ಗಳಿಸಿದೆ. ಬಯೋಸಿಮಿಲರ್ಸ್ ವಿಭಾಗದ ಶೇಕಡಾ 65 ರಷ್ಟು ಬೆಳವಣಿಗೆ ಮತ್ತು ಸಂಶೋಧನಾ ಸೇವೆಗಳಲ್ಲಿ ಶೇಕಡಾ 9 ರಷ್ಟು ಬೆಳವಣಿಗೆಯಿಂದ ಆದಾಯ ಹೆಚ್ಚಳವಾಗಿದೆ. 1,492 ಕೋಟಿ ರೂ.ಗಳ ಏಕೀಕೃತ ಇಬಿಐಟಿಡಿಎ ಶೇಕಡಾ 106 ರಷ್ಟು ಹೆಚ್ಚಾಗಿದೆ. ಕಂಪನಿಯ ನಿವ್ವಳ ಲಾಭವು 660 ಕೋಟಿ ರೂ.ಗಳಾಗಿದೆ" ಎಂದು ತಿಳಿಸಿದರು.
ಸಿಎಫ್ಒ ಆಗಿದ್ದ ಇಂದ್ರನೀಲ್ ಸೇನ್ ಅವರು ಮಾರ್ಚ್ 15, 2024 ರಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದು, ನಿತಿನ್ ಪ್ರಭಾಕರ್ ಶೆಣೈ ಅವರನ್ನು ಬಯೋಕಾನ್ ಲಿಮಿಟೆಡ್ನ ಐಟಿ ಮತ್ತು ಡಿಜಿಟಲ್ ರೂಪಾಂತರದ ಮುಖ್ಯಸ್ಥರಾಗಿ ನೇಮಿಸಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.
ಆಸ್ಟ್ರೇಲಿಯಾದಲ್ಲಿ ಕ್ಯಾನ್ಸರ್ ಔಷಧಿ ಮಾರಾಟಕ್ಕೆ ಒಪ್ಪಂದ: ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಒಗಿವ್ರಿ, (ಬಯೋಸಿಮಿಲರ್ ಟ್ರಾಸ್ಟುಜುಮಾಬ್) ಮತ್ತು ಫುಲ್ಫಿಲಾ (ಬಯೋಸಿಮಿಲರ್ ಪೆಗ್ಫಿಲ್ಗ್ರಾಸ್ಟಿಮ್) ಅನ್ನು ಆಸ್ಟ್ರೇಲಿಯಾದಲ್ಲಿ ಮಾರಾಟ ಮಾಡಲು ಸ್ಯಾಂಡೋಜ್ ಆಸ್ಟ್ರೇಲಿಯಾದೊಂದಿಗೆ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿರುವುದಾಗಿ ಬಯೋಕಾನ್ ಬಯೋಲಾಜಿಕ್ಸ್ ಘೋಷಿಸಿದೆ. ಈ ಪಾಲುದಾರಿಕೆಯು ಆಸ್ಟ್ರೇಲಿಯಾದಲ್ಲಿ ಬಯೋಸಿಮಿಲರ್ ಟ್ರಾಸ್ಟುಜುಮಾಬ್ ಮತ್ತು ಬಯೋಸಿಮಿಲರ್ ಬೆವಾಸಿಜುಮ್ಯಾಬ್ ಅನ್ನು ಮಾರಾಟ ಮಾಡಲು ಮತ್ತು ವಿತರಿಸಲು ಸ್ಯಾಂಡೋಜ್ ಗೆ ವಿಶೇಷ ಹಕ್ಕು ಒದಗಿಸುತ್ತದೆ.
ಇದನ್ನೂ ಓದಿ : ಭಾರತದಿಂದ ಬಾಳೆಹಣ್ಣು ತರಿಸಿಕೊಳ್ಳಲಾರಂಭಿಸಿದ ರಷ್ಯಾ: ಕಾರಣ ಏನು ಗೊತ್ತಾ?