ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಕೋಲ್ಡ್ ಸ್ಟೋರೇಜ್ ಘಟಕಗಳ ಮೂಲಕ ಸುಮಾರು 10000 ಯುವಕರು ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದಾರೆ. ಈ ಮೂಲಕ ಕೇವಲ ಗುಂಡಿನ ಸದ್ದುಗಳನ್ನೇ ಕೇಳುತ್ತಿದ್ದ ಇಲ್ಲಿನ ಜನ ಈಗ ಕೆಲಸಕ್ಕಾಗಿ ಮನೆಯಿಂದ ಹೊರಗೆ ಬಂದು, ಉದ್ಯೋಗ ಪಡೆದು ಸಶಕ್ತರಾಗುತ್ತಿದ್ದಾರೆ.
ವಿವಿಧ ರೀತಿಯ ಹಣ್ಣುಗಳನ್ನು ಬೆಳೆಯುವ ಪುಲ್ವಾಮಾ ಜಿಲ್ಲೆಯಲ್ಲಿ, ಸ್ಥಳೀಯರಿಗೆ ಮಾತ್ರ ಉದ್ಯೋಗ ಸಿಗುತ್ತಿಲ್ಲ, ಬೇರೆ ಬೇರೆ ಕಡೆಯಿಂದಲೂ ಬಂದ ಜನರಿಗೂ ಕೆಲಸದ ಅವಕಾಶಗಳು ಸಿಗುತ್ತಿವೆ. ಈ ಜಿಲ್ಲೆಯಲ್ಲಿ ಸೇಬುಗಳ ಅತಿದೊಡ್ಡ ಉತ್ಪಾದನೆಯನ್ನು ಮಾಡಲಾಗುತ್ತಿದೆ. ಇಲ್ಲಿ ಬೆಳೆದು ಹಸನು ಮಾಡಿ ವರ್ಗೀಕರಣ ಮಾಡಿದ ಮೇಲೆ ದೇಶಾದ್ಯಂತ ಸೇಬುಗಳ ವಿತರಣೆ ಮಾಡಲಾಗುತ್ತದೆ. ಅಂದ ಹಾಗೆ ಕಣಿವೆಯ ಅತಿದೊಡ್ಡ ಕೈಗಾರಿಕಾ ಪ್ರದೇಶವಾದ SIDCO ಕೈಗಾರಿಕಾ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಈಗಾಗಲೇ ಕೋಲ್ಡ್ ಸ್ಟೋರೇಜ್ ಘಟಕಗಳು ತಲೆ ಎತ್ತಿವೆ.
ಈ ಕೋಲ್ಡ್ ಸ್ಟೋರೇಜ್ಗಳ ಮೂಲಕ ಹಣ್ಣುಗಳು ತಾಜಾ ಇರುವಂತೆ ಸಂಗ್ರಹಿಡಲಾಗುತ್ತದೆ. ಆದ್ದರಿಂದ ಈ ಹಣ್ಣುಗಳನ್ನು ಆಫ್ ಸೀಸನ್‌ನಲ್ಲೂ ಮಾರಾಟ ಮಾಡಬಹುದಾಗಿದೆ. ಈ ಕೋಲ್ಡ್ ಸ್ಟೋರೇಜ್ ಘಟಕಗಳು ರೈತರಿಗೆ ಪ್ರಯೋಜನ ನೀಡುತ್ತಿವೆಯಲ್ಲದೇ, ಸಾವಿರಾರು ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ. ಇದರಿಂದಾಗಿ ಈ ಶೀತಲ ಶೇಖರಣಾ ಘಟಕಗಳ ಪ್ರಾಮುಖ್ಯತೆ ಈಗ ಎಂದೆಂದಿಗಿಂತಲೂ ಹೆಚ್ಚಾಗಿದೆ.
ಕೈಗಾರಿಕಾ ಕೇಂದ್ರವು ಪ್ರಸ್ತುತ ಸುಮಾರು 40 ಕೋಲ್ಡ್ ಸ್ಟೋರೇಜ್ ಘಟಕಗಳನ್ನು ಹೊಂದಿದೆ. ಈ ಶೀತಲೀಕರಣ ಘಟಕಗಳಲ್ಲಿ ಸುಮಾರು 4 ರಿಂದ 5 ತಿಂಗಳವರೆಗೆ ಸೇಬುಗಳನ್ನು ಸಂಗ್ರಹಿಸಿಡಬಹುದು. ಸೀಸನ್‌ನಲ್ಲಿ ಈ ಹಣ್ಣುಗಳನ್ನು ಹೊರತೆಗೆಯುವ ಪ್ರಕ್ರಿಯೆ ಆರಂಭವಾಗುತ್ತದೆ. ಈ ಮೂಲಕ ಹಣ್ಣುಗಳನ್ನು ಸಂರಕ್ಷಿಸಿ, ಬೇಡಿಕೆ ಬಂದಾಗ ಪೂರೈಕೆ ಮಾಡಲಾಗಿತ್ತಿದೆ. ಅಂದ ಹಾಗೆ ಇಷ್ಟೊಂದು ದೊಡ್ಡ ಪ್ರಮಾಣದ ಕೋಲ್ಡ್ ಸ್ಟೋರೇಜ್ ಘಟಕಗಳಿಂದಾಗಿ ಜಮ್ಮು ಕಾಶ್ಮೀರದಲ್ಲಿ ಸುಮಾರು 10,000 ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಜಿಲ್ಲೆಯಲ್ಲಿ ಕೋಲ್ಡ್ ಸ್ಟೋರೇಜ್ ಘಟಕಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರಿಂದ ಹೆಚ್ಚಿನ ಯುವಕರು ಉದ್ಯೋಗ ಪಡೆಯುವ ನಿರೀಕ್ಷೆಯಿದೆ.
ಕೋಲ್ಡ್ ಸ್ಟೋರೇಜ್ಗಳಿಂದ ಭಾರಿ ಪ್ರಯೋಜನ: ರಾಜ್ಯದಲ್ಲಿನ ಅಭಿವೃದ್ಧಿ ಬಗ್ಗೆ ಮಾತನಾಡಿರುವ ಹಣ್ಣಿನ ವ್ಯಾಪಾರಿ ಅಬ್ದುಲ್ ಅಲೀಂ ಪಾಲ್, ಕೋಲ್ಟ್ ಸ್ಟೋರೇಜ್ಗಳು ಇದೀಗ ಬಹುಮುಖ್ಯ ಪಾತ್ರ ವಹಿಸುತ್ತಿವೆ ಎಂದು ಹೇಳಿದರು. ಹಣ್ಣುಗಳನ್ನು ಕೆಡದಂತೆ ಕೋಲ್ಡ್ ಸ್ಟೋರೇಜ್ಗಳಲ್ಲಿ ಇಟ್ಟು ಬಳಿಕ, ಉತ್ತಮ ಬೆಲೆ ಬಂದಾಗ ಮಾರಾಟ ಮಾಡುತ್ತೇವೆ. ಇದರಿಂದ ರೈತರಿಗೆ ಮತ್ತು ಈ ವ್ಯವಹಾರದಲ್ಲಿ ತೊಡಗಿರುವವರಿಗೆ ಪ್ರಯೋಜನವಾಗುತ್ತಿದೆ ಎಂದು ಹೇಳಿದ್ದಾರೆ.
ಕಣಿವೆ ಜನರಿಗೆ ಹೆಚ್ಚು ಉದ್ಯೋಗಾವಕಾಶ: ಹೆಚ್ಚೆಚ್ಚು ಶೀತಲೀಕರಣ ಘಟಕಗಳ ಸ್ಥಾಪನೆಯಿಂದಾಗಿ ದೇಶದ ವಿವಿಧ ರಾಜ್ಯಗಳಿಂದ ಯುವಕರು ಇಲ್ಲಿಗೆ ಬಂದು ಕೆಲಸ ಮಾಡುತ್ತಾರೆ ಎನ್ನುತ್ತಿದ್ದಾರೆ, ಕೋಲ್ಡ್ ಸ್ಟೋರೇಜ್ ಘಟಕಗಳಲ್ಲಿ ಕೆಲಸ ಮಾಡುವ ನಜೀಂದರ್. ಕಾಶ್ಮೀರದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿರುವ ಶೈತ್ಯಾಗಾರ ಘಟಕದ ಮಾಲೀಕರಾದ ಸಬ್ಜಾರ್ ಅಹಮದ್, ಈ ಕೋಲ್ಡ್ ಸ್ಟೋರೇಜ್ ಘಟಕಗಳಿಂದ ರೈತರಿಗೆ ಅನುಕೂಲವಾಗಿದ್ದು, ಯುವಕರು ಹೆಚ್ಚೆಚ್ಚು ಕೆಲಸಗಳನ್ನು ಪಡೆದುಕೊಂಡು ಉತ್ತಮ ಜೀವನ ಕಂಡುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಕೈಗಾರಿಕೆಗಳು ಕಣಿವೆಯ ಯುವಕರಿಗೆ ಉದ್ಯೋಗ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಮೂಲಕ ಇಲ್ಲಿನ ನಿರುದ್ಯೋಗವನ್ನು ಕಡಿಮೆ ಮಾಡಬಹುದು ಎಂದರು.
ಇದನ್ನು ಓದಿ: ಬೆಳ್ಳುಳ್ಳಿ ಬೆಲೆ ಕೆಜಿಗೆ 500- 550ಕ್ಕೆ ಏರಿಕೆ: ಬೀದಿ ಬದಿ ವ್ಯಾಪಾರಿಗಳಿಗೂ ತಟ್ಟಿದ ಬಿಸಿ