ನವದೆಹಲಿ: ಅಕ್ಷಯ ತೃತೀಯ ಹಬ್ಬದ ಅಂಗವಾಗಿ ಚಿನ್ನದ ಖರೀದಿ ಭರಾಟೆ ಹೆಚ್ಚಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 950 ರೂ.ಗಳ ಏರಿಕೆಯಾಗಿ 73,000 ರೂ.ಗಳ ಗಡಿ ದಾಟಿದೆ. ಸತತ ಎರಡು ದಿನಗಳ ಕುಸಿತದ ನಂತರ ಶುಕ್ರವಾರ ಬೆಲೆಗಳು ಮತ್ತೆ ಏರಿಕೆಯಾಗಿವೆ.
ಅಮೂಲ್ಯ ಲೋಹ ಚಿನ್ನದ ಬೆಲೆ 10 ಗ್ರಾಂಗೆ 950 ರೂ. ಏರಿಕೆಯಾಗಿ 73,200 ರೂ.ಗೆ ತಲುಪಿದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ ಹೇಳಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಇದು 10 ಗ್ರಾಂಗೆ 72,250 ರೂ. ಆಗಿತ್ತು. ಬೆಳ್ಳಿಯ ಬೆಲೆಯೂ 2,300 ರೂಪಾಯಿ ಏರಿಕೆಯಾಗಿ ಪ್ರತಿ ಕೆ.ಜಿ.ಗೆ 85,500 ರೂ.ಗೆ ತಲುಪಿದೆ. ಹಿಂದಿನ ದಿನ ಮುಕ್ತಾಯದಲ್ಲಿ ಪ್ರತಿ ಕೆ.ಜಿ.ಯ ದರ 83,200 ರೂ. ಆಗಿತ್ತು. ದೆಹಲಿ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನವು (24 ಕ್ಯಾರೆಟ್) 10 ಗ್ರಾಂಗೆ 73,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ.
"ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಜನತೆ ಚಿನ್ನದ ನಾಣ್ಯ, ಬಾರ್ಗಳು ಮತ್ತು ಆಭರಣಗಳನ್ನು ಖರೀದಿಸುವುದರಿಂದ ಚಿಲ್ಲರೆ ಬೇಡಿಕೆ ಹೆಚ್ಚಾಗಲಿದೆ" ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ನ ಕಮಾಡಿಟೀಸ್ ವಿಭಾಗದ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.
ಜಾಗತಿಕ ಮಾರುಕಟ್ಟೆಗಳನ್ನು ನೋಡುವುದಾದರೆ, ಕಾಮೆಕ್ಸ್ನಲ್ಲಿ ಸ್ಪಾಟ್ ಚಿನ್ನವು ಔನ್ಸ್ಗೆ 2,360 ಡಾಲರ್ ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ. ಇದು ಹಿಂದಿನ ಮುಕ್ತಾಯಕ್ಕಿಂತ 52 ಡಾಲರ್ ಹೆಚ್ಚಾಗಿದೆ. ಬೆಳ್ಳಿ ಕೂಡ ಪ್ರತಿ ಔನ್ಸ್ಗೆ 28.60 ಡಾಲರ್ಗೆ ಏರಿಕೆಯಾಗಿದೆ. ಹಿಂದಿನ ವಹಿವಾಟಿನಲ್ಲಿ ಇದು ಔನ್ಸ್ಗೆ 27.50 ಡಾಲರ್ನಲ್ಲಿ ಕೊನೆಗೊಂಡಿತ್ತು.
"ಅಮೆರಿಕದಲ್ಲಿನ ಇತ್ತೀಚಿನ ನಿರುದ್ಯೋಗ ಕ್ಲೈಮ್ ದತ್ತಾಂಶವು ಕಾರ್ಮಿಕ ಮಾರುಕಟ್ಟೆಯು ಇನ್ನಷ್ಟು ನಿಧಾನವಾಗಲಿದೆ ಎಂಬ ಸೂಚನೆಗಳನ್ನು ನೀಡಿದ್ದರಿಂದ ಚಿನ್ನದ ಬೆಲೆ ಏರಿಕೆಯಾಗಿದೆ ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಈ ವರ್ಷ ಬಡ್ಡಿದರಗಳನ್ನು ಕಡಿತಗೊಳಿಸಲು ಪ್ರಾರಂಭಿಸಲು ಸಾಧ್ಯವಾಗಲಿದೆ ಎಂಬ ವಿಶ್ವಾಸ ಮೂಡಿಸಿದೆ" ಎಂದು ಗಾಂಧಿ ಹೇಳಿದರು.
ಭಾರತದಲ್ಲಿ ಹಬ್ಬದ ಸೀಸನ್ನ ಬೇಡಿಕೆಯ ಹೆಚ್ಚಳದಿಂದ ಚಿನ್ನದ ಬೆಲೆ ಹೆಚ್ಚಾಗಿದೆ. ಜೊತೆಗೆ ದುರ್ಬಲ ಯುಎಸ್ ಡಾಲರ್ ಕೂಡ ಚಿನ್ನದ ಬೆಲೆ ಹೆಚ್ಚಳಕ್ಕೆ ಬೆಂಬಲ ನೀಡಿದೆ.
"ಅಮೂಲ್ಯ ಲೋಹಗಳ ಬೆಲೆ ಹೆಚ್ಚಳಕ್ಕೆ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಮತ್ತು ಜಾಗತಿಕ ಷೇರುಗಳಲ್ಲಿನ ಮಿಶ್ರ ವಹಿವಾಟುಗಳು ಕೂಡ ಕಾರಣವಾಗಿವೆ" ಎಂದು ಬ್ಲಿಂಕ್ಎಕ್ಸ್ ಮತ್ತು ಜೆಎಂ ಫೈನಾನ್ಷಿಯಲ್ನ ಸಂಶೋಧನಾ (ಸರಕು ಮತ್ತು ಕರೆನ್ಸಿ) ಉಪಾಧ್ಯಕ್ಷ ಪ್ರಣವ್ ಮೆರ್ ಹೇಳಿದ್ದಾರೆ.
ಇದನ್ನೂ ಓದಿ : ಐಷಾರಾಮಿ ಮನೆಗಳ ಖರೀದಿಯತ್ತ ಭಾರತೀಯರ ಚಿತ್ತ: ಅಗ್ಗದ ಮನೆಗಳ ಮಾರಾಟದಲ್ಲಿ ಕುಸಿತ! - Housing Market