ಮುಂಬೈ (ಮಹಾರಾಷ್ಟ್ರ): ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಎಲ್ಲರ ಗಮನ ಸೆಳೆಯುತ್ತಿದೆ. ಅವರ ನಿಶ್ಚಿತಾರ್ಥ ಹಾಗೂ ವಿವಾಹ ಪೂರ್ವ ಸಮಾರಂಭ ಅದ್ಧೂರಿಯಾಗಿ ನಡೆದಿರುವುದು ಗೊತ್ತಿರುವ ವಿಚಾರ. ಇದೀಗ ಮತ್ತೊಮ್ಮೆ ಅಂಬಾನಿ ಕುಟುಂಬ ವಿವಾಹ ಸಂಭ್ರಮಕ್ಕೆ ಸಿದ್ಧವಾಗಿದೆ. ಇದರ ಅಂಗವಾಗಿ ಹಲವು ಜೋಡಿಗಳಿಗೆ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ.
ಜುಲೈ 2 ರಂದು ಸಂಜೆ ಪಾಲ್ಘರ್‌ನ ಸ್ವಾಮಿ ವಿವೇಕಾನಂದ ವಿದ್ಯಾಮಂದಿರದಲ್ಲಿ ಸಾಮೂಹಿಕ ಮದುವೆ ಕಾರ್ಯಕ್ರಮ ನಡೆಯಲಿದೆ. ಬಡ ಕುಟುಂಬದ ಹಲವು ಜೋಡಿಗಳಿಗೆ ಸಾಮೂಹಿಕ ವಿವಾಹ ನಡೆಯಲಿದೆ. ಮುಕೇಶ್ ಅಂಬಾನಿ ಕುಟುಂಬದ ಸದಸ್ಯರು ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ನಡೆದ ವಿವಾಹಪೂರ್ವ ಸಂಭ್ರಮಾಚರಣೆಯಲ್ಲಿ ಅಂಬಾನಿ ಕುಟುಂಬದವರು ಅಕ್ಕಪಕ್ಕದ ಹಳ್ಳಿಗಳ ಜನರಿಗೆ ಭೋಜನ ಕೂಟ ನಡೆಸಿದ್ದು ಗೊತ್ತೇ ಇದೆ.
ಅನಂತ್ ಅಂಬಾನಿ ಅವರ ವಿವಾಹವು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಅವರೊಂದಿಗೆ ಜುಲೈ 12 ರಂದು ನಡೆಯಲಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಇದಕ್ಕೆ ವೇದಿಕೆಯಾಗಲಿದೆ. ಮೂರು ದಿನಗಳ ಕಾಲ ವಿವಾಹ ಮಹೋತ್ಸವ ನಡೆಯಲಿದೆ. ಜುಲೈ 12 ರಂದು ಮುಖ್ಯ ಕಾರ್ಯಕ್ರಮ 'ಶುಭ ವಿವಾಹ' ದೊಂದಿಗೆ ಆಚರಣೆಗಳು ಪ್ರಾರಂಭವಾಗುತ್ತವೆ. ಇದು ಜುಲೈ 13 ರಂದು 'ಶುಭ ಆಶೀರ್ವಾದ' ಮತ್ತು ಜುಲೈ 14 ರಂದು 'ಮಂಗಳ ಉತ್ಸವ'ದೊಂದಿಗೆ ಕೊನೆಗೊಳ್ಳುತ್ತದೆ.
ಈಗಾಗಲೇ ಮದುವೆಗೆ ಕರೆಯೊಲೇಯ ಆಹ್ವಾನದ ವಿಡಿಯೋ ವೈರಲ್ ಆಗಿದೆ. ಮೊದಲ ಲಗ್ನಪತ್ರಿಕೆಯನ್ನು ವಾರಾಣಸಿಯಲ್ಲಿ ಕಾಶಿ ವಿಶ್ವನಾಥನ ಪಾದಕ್ಕೆ ನೀತಾ ಅಂಬಾನಿ ಇಟ್ಟು ಆಶೀರ್ವಾದ ಪಡೆದರು. ಅಲ್ಲದೇ ಸ್ವತಃ ಅಂಬಾನಿ ಕುಟುಂಬವೇ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸೇರಿದಂತೆ ಹಲವು ರಾಜಕೀಯ, ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡುತ್ತಿದೆ.
ಈ ವರ್ಷದ ಮಾರ್ಚ್ 1-3ರ ವರೆಗೆ ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್-ರಾಧಿಕ್ ವಿವಾಹ ಪೂರ್ವ ಆಚರಣೆಗಳನ್ನು ನಡೆಸಲಾಗಿತ್ತು. ದೇಶ ವಿದೇಶಗಳ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು. ಅಂಬಾನಿ ಕುಟುಂಬ ಅವರಿಗೆ ಭವ್ಯವಾದ ಆತಿಥ್ಯ ನೀಡಿರುವುದು ಗೊತ್ತಿರುವ ಸಂಗತಿ.