ನವದೆಹಲಿ : ಮೇ 19, 2023 ರ ವೇಳೆಗೆ ಚಲಾವಣೆಯಲ್ಲಿದ್ದ 2,000 ರೂ.ಗಳ ಕರೆನ್ಸಿ ನೋಟುಗಳ ಪೈಕಿ ಶೇಕಡಾ 97.87 ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಜುಲೈ 1 ರಂದು ತಿಳಿಸಿದೆ. 2023 ರ ಮೇ 19 ರಂದು 2,000 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಆರ್ಬಿಐ ಘೋಷಿಸಿತ್ತು.
ಅವತ್ತಿನ ದಿನದಂದು ವ್ಯವಹಾರದ ಕೊನೆಯಲ್ಲಿ ದೇಶದಲ್ಲಿ ಚಲಾವಣೆಯಲ್ಲಿದ್ದ 3.56 ಲಕ್ಷ ಕೋಟಿ ರೂ. ಮೌಲ್ಯದ 2,000 ರೂ. ಕರೆನ್ಸಿ ನೋಟುಗಳ ಮೊತ್ತವು ಜೂನ್ 28 ರಂದು ವ್ಯವಹಾರದ ಕೊನೆಯಲ್ಲಿ 7,581 ಕೋಟಿ ರೂ.ಗೆ ಇಳಿದಿದೆ ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರೀಯ ಬ್ಯಾಂಕ್ ತನ್ನ ಶುದ್ಧ ನೋಟು ನೀತಿಯ ಭಾಗವಾಗಿ ದೊಡ್ಡ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಅಕ್ಟೋಬರ್ 7, 2023 ರವರೆಗೆ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ 2,000 ರೂ. ಕರೆನ್ಸಿಯನ್ನು ಠೇವಣಿ ಅಥವಾ ವಿನಿಮಯ ಮಾಡುವ ಸೌಲಭ್ಯ ಲಭ್ಯವಿತ್ತು.
2016 ರ ನವೆಂಬರ್ನಲ್ಲಿ ಚಲಾವಣೆಯಲ್ಲಿದ್ದ ಎಲ್ಲಾ 500 ಮತ್ತು 1,000 ರೂ ನೋಟುಗಳನ್ನು ಹಿಂತೆಗೆದುಕೊಂಡ ಸಂದರ್ಭದಲ್ಲಿ ಕರೆನ್ಸಿ ಅಗತ್ಯಗಳನ್ನು ಪೂರೈಸಲು ಆರ್ಬಿಐ 2,000 ರೂ ನೋಟುಗಳನ್ನು ಪರಿಚಯಿಸಿತ್ತು. 2018-19ರಲ್ಲಿ ಇತರ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾದ ನಂತರ ಮತ್ತು 2,000 ರೂ.ಗಳ ನೋಟುಗಳ ಮುದ್ರಣವನ್ನು ನಿಲ್ಲಿಸಿದ ನಂತರ ಈ ನೋಟುಗಳನ್ನು ಚಲಾವಣೆಗೆ ತರಲಾದ ಉದ್ದೇಶ ಈಡೇರಿಕೆಯಾಗಿತ್ತು. ಆದಾಗ್ಯೂ 2,000 ರೂಪಾಯಿ ನೋಟು ಕಾನೂನುಬದ್ಧ ಕರೆನ್ಸಿಯಾಗಿ ಮುಂದುವರೆದಿದೆ ಎಂದು ಆರ್ಬಿಐ ಹೇಳಿದೆ.
ಮೇ 19, 2023 ರಿಂದ ರಿಸರ್ವ್ ಬ್ಯಾಂಕಿನ (ಆರ್ ಬಿಐ ವಿತರಣಾ ಕಚೇರಿಗಳು) 19 ವಿತರಣಾ ಕಚೇರಿಗಳಲ್ಲಿ ಈಗಲೂ 2,000 ರೂ.ಗಳ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 9, 2023 ರಿಂದ, ಆರ್ಬಿಐನ ವಿತರಣಾ ಕಚೇರಿಗಳ ಮೂಲಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ತಮ್ಮ ಬ್ಯಾಂಕ್ ಖಾತೆಗಳಿಗೆ 2,000 ರೂ.ಗಳ ನೋಟುಗಳನ್ನು ಜಮೆ ಮಾಡಬಹುದು ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚುವರಿಯಾಗಿ, ದೇಶಾದ್ಯಂತದ ಸಾರ್ವಜನಿಕರು ಯಾವುದೇ ಅಂಚೆ ಕಚೇರಿಯಿಂದ ಯಾವುದೇ ಆರ್ಬಿಐ ವಿತರಣಾ ಕಚೇರಿಗೆ ಇಂಡಿಯಾ ಪೋಸ್ಟ್ ಮೂಲಕ 2,000 ರೂ.ಗಳ ನೋಟುಗಳನ್ನು ಕಳುಹಿಸಿ ಅದನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬಹುದು.
ಇದನ್ನೂ ಓದಿ : ಉತ್ಪಾದನಾ ಚಟುವಟಿಕೆ ಹೆಚ್ಚಳ: 19 ವರ್ಷದ ಗರಿಷ್ಠ ಮಟ್ಟದಲ್ಲಿ ಉದ್ಯೋಗ ನೇಮಕಾತಿಗಳು - Manufacturing Activity Surges