ಮುಂಬೈ: ಭಾರತೀಯ ಷೇರು ಮಾರುಕಟ್ಟೆಯ ಮಾನದಂಡಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಗುರುವಾರದ ವಹಿವಾಟಿನಲ್ಲಿ ತಲಾ ಶೇಕಡಾ 1ರಷ್ಟು ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದವು. ದಿನದ ವಹಿವಾಟಿನ ಮಧ್ಯೆ ಸೆನ್ಸೆಕ್ಸ್ 85,930.43ರ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ನಂತರ ಸೆನ್ಸೆಕ್ಸ್ ಶೇಕಡಾ 0.78 ರಷ್ಟು ಏರಿಕೆಯೊಂದಿಗೆ 85,836.12 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ ವಹಿವಾಟಿನಲ್ಲಿ 26,250.90 ರ ಹೊಸ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ನಂತರ ನಿಫ್ಟಿ ಶೇಕಡಾ 0.81 ರಷ್ಟು ಏರಿಕೆಯೊಂದಿಗೆ 26,216.05 ರಲ್ಲಿ ಕೊನೆಗೊಂಡಿತು.
ಬಹುತೇಕ ಲಾರ್ಜ್ ಕ್ಯಾಪ್ ಷೇರುಗಳಲ್ಲಿ ಏರಿಕೆ: ಲಾರ್ಜ್ ಕ್ಯಾಪ್ ಷೇರುಗಳು ಬಹುತೇಕ ಏರಿಕೆಯಾದರೆ, ಮಧ್ಯಮ ಮತ್ತು ಸ್ಮಾಲ್ ಕ್ಯಾಪ್ ವಿಭಾಗಗಳು ಇಳಿಕೆಯಾಗಿವೆ. ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕವು ಬಹುತೇಕ ಫ್ಲಾಟ್ ಆಗಿ ಕೊನೆಗೊಂಡಿತು ಮತ್ತು ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇಕಡಾ 0.39 ರಷ್ಟು ಕುಸಿದಿದೆ.
ಬಿಎಸ್ಇ-ಲಿಸ್ಟೆಡ್ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ದಿನದ ವಹಿವಾಟಿನಲ್ಲಿ ಇದ್ದ 475 ಲಕ್ಷ ಕೋಟಿ ರೂ.ಗಳಿಂದ ಗುರುವಾರ 477 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದರಿಂದ ಹೂಡಿಕೆದಾರರು ಒಂದೇ ದಿನದಲ್ಲಿ ಸುಮಾರು 2 ಲಕ್ಷ ಕೋಟಿ ರೂ.ಗಳಷ್ಟು ಶ್ರೀಮಂತರಾಗಿದ್ದಾರೆ.
ಗರಿಷ್ಠ ಮಟ್ಟಕ್ಕೆ ತಲುಪಿದ ಷೇರುಗಳಿವು: ಬಿಎಸ್ಇಯಲ್ಲಿ ಐಟಿಸಿ, ಮಹೀಂದ್ರಾ ಮತ್ತು ಮಹೀಂದ್ರಾ, ಎನ್ಟಿಪಿಸಿ, ಭಾರ್ತಿ ಏರ್ಟೆಲ್, ಬಜಾಜ್ ಫಿನ್ಸರ್ವ್ ಮತ್ತು ಸನ್ ಫಾರ್ಮಾ ಸೇರಿದಂತೆ 257 ಷೇರುಗಳು ಇಂಟ್ರಾಡೇ ವಹಿವಾಟಿನಲ್ಲಿ 52 ವಾರಗಳ ಗರಿಷ್ಠ ಮಟ್ಟ ತಲುಪಿದವು.
ಈ ಎಲ್ಲ ಷೇರುಗಳಿಗೆ ಭರ್ಜರಿ ಲಾಭ: ನಿಫ್ಟಿಯಲ್ಲಿ ಮಾರುತಿ ಸುಜುಕಿ, ಮಹೀಂದ್ರಾ ಮತ್ತು ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ಐಟಿಸಿ ಮತ್ತು ಹಿಂದೂಸ್ತಾನ್ ಯೂನಿಲಿವರ್ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ. ನಿಫ್ಟಿ 50 ಸೂಚ್ಯಂಕದಲ್ಲಿ 41 ಷೇರುಗಳು ಲಾಭದೊಂದಿಗೆ ಕೊನೆಗೊಂಡವು. ನಿಫ್ಟಿ ಆಟೋ ಸೂಚ್ಯಂಕ ಶೇಕಡಾ 2.26 ರಷ್ಟು ಏರಿಕೆ ಕಂಡರೆ, ನಿಫ್ಟಿ ಮೆಟಲ್ ಸೂಚ್ಯಂಕ ಶೇಕಡಾ 2.13 ರಷ್ಟು ಏರಿಕೆಯಾಗಿದೆ.
ರೂಪಾಯಿ 6 ಪೈಸೆ ಕುಸಿತ: ಗುರುವಾರ ಡಾಲರ್ ಎದುರು ಭಾರತೀಯ ರೂಪಾಯಿ 6 ಪೈಸೆ ಕುಸಿದು 83.64 ಕ್ಕೆ (ತಾತ್ಕಾಲಿಕ) ಸ್ಥಿರವಾಯಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿಯು ಅಮೇರಿಕನ್ ಕರೆನ್ಸಿಯ ವಿರುದ್ಧ 83.66 ರಲ್ಲಿ ಸ್ವಲ್ಪ ದುರ್ಬಲವಾಗಿ ಪ್ರಾರಂಭವಾಯಿತು. ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 13 ಪೈಸೆ ಇಳಿಕೆಯಾಗಿ 83.71 ಅಂಕಗಳಿಗೆ ತಲುಪಿತ್ತು. ಆದಾಗ್ಯೂ, ನಂತರ ಚೇತರಿಸಿಕೊಂಡ ರೂಪಾಯಿ 83.64 ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕೆ ಹೋಲಿಸಿದರೆ 6 ಪೈಸೆ ಕುಸಿತವಾಗಿದೆ.
ಇದನ್ನೂ ಓದಿ : ಪೆಟ್ರೋಲ್, ಡೀಸೆಲ್ ಬೆಲೆ 2 ರಿಂದ 3 ರೂ. ಕಡಿತ ಸಾಧ್ಯತೆ: ಐಸಿಆರ್ಎ ಅಂದಾಜು - Petrol Diesel Price