ನವದೆಹಲಿ: ಭಾರತದಲ್ಲಿ ದ್ವಿಚಕ್ರ ವಾಹನಗಳ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ 21.3ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಸಿಯಾಮ್) ಶುಕ್ರವಾರ ಬಿಡುಗಡೆ ಮಾಡಿದ ಮಾರಾಟದ ಅಂಕಿ - ಅಂಶಗಳು ತಿಳಿಸಿವೆ. ಜೂನ್ನಲ್ಲಿ ದ್ವಿಚಕ್ರ ವಾಹನಗಳ ಒಟ್ಟು ಮಾರಾಟ ಸಂಖ್ಯೆ 16,14,154 ಯುನಿಟ್ಗಳಷ್ಟಿದ್ದು, ಇದು 2023 ರ ಜೂನ್ನಲ್ಲಿ ಮಾರಾಟವಾಗಿದ್ದ 13,30,826 ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ ಶೇಕಡಾ 21.3 ರಷ್ಟು ಹೆಚ್ಚಾಗಿದೆ.
ಸ್ಕೂಟರ್ ಗಳ ಮಾರಾಟವು ಜೂನ್ನಲ್ಲಿ ವರ್ಷದಿಂದ ವರ್ಷಕ್ಕೆ ದಾಖಲೆಯ ಶೇ 42 ರಷ್ಟು ಏರಿಕೆಯಾಗಿ 5.4 ಲಕ್ಷ ಯುನಿಟ್ಗಳಿಗೆ ತಲುಪಿದೆ. ಕಳೆದ ವರ್ಷ ಜೂನ್ನಲ್ಲಿ ಇದು 3.8 ಲಕ್ಷದಷ್ಟಿತ್ತು. ಬೈಕುಗಳ ಮಾರಾಟ ಎರಡು ಪಟ್ಟು ಬೆಳವಣಿಗೆ ದಾಖಲಿಸಿದ್ದು, ಜೂನ್ನಲ್ಲಿ ಮಾರಾಟವು ಶೇಕಡಾ 11 ರಷ್ಟು ಏರಿಕೆಯಾಗಿ 10.3 ಲಕ್ಷಕ್ಕೆ ತಲುಪಿದೆ.
ಪ್ರಯಾಣಿಕ ವಾಹನಗಳ ಮಾರಾಟವು ಜೂನ್ನಲ್ಲಿ ಶೇಕಡಾ 3 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2024ರ ಜೂನ್ನಲ್ಲಿ ಒಟ್ಟು ಪ್ರಯಾಣಿಕ ವಾಹನಗಳ ಮಾರಾಟವು 3,37,757 ಯುನಿಟ್ಗಳಷ್ಟಿದೆ. ಇದು ಜೂನ್ 2023 ರಲ್ಲಿ 3,27,788 ಯುನಿಟ್ಗಳಾಗಿತ್ತು.
ಅದರಂತೆ ತ್ರಿಚಕ್ರ ವಾಹನಗಳ ಮಾರಾಟ ಕೂಡ ಶೇಕಡಾ 12.3 ರಷ್ಟು ಹೆಚ್ಚಾಗಿದೆ. ಅಂಕಿ - ಅಂಶಗಳ ಪ್ರಕಾರ ಜೂನ್ 2024 ರಲ್ಲಿ ಒಟ್ಟು 59,544 ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ.
ಜೂನ್ ತಿಂಗಳ ಮಾರಾಟ ದತ್ತಾಂಶವು ಭಾರತೀಯ ಆಟೋಮೊಬೈಲ್ ಉದ್ಯಮದ ಸಕಾರಾತ್ಮಕ ದೃಷ್ಟಿಕೋನವನ್ನು ಪ್ರದರ್ಶಿಸುತ್ತದೆ. ದ್ವಿಚಕ್ರ ವಾಹನ ಮಾರಾಟದಲ್ಲಿ, ವಿಶೇಷವಾಗಿ ಸ್ಕೂಟರ್ ಮತ್ತು ಮೋಟಾರ್ ಸೈಕಲ್ಗಳ ಮಾರಾಟದಲ್ಲಿನ ಗಣನೀಯ ಬೆಳವಣಿಗೆ, ಪ್ರಯಾಣಿಕರ ಮತ್ತು ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಸ್ಥಿರವಾದ ಹೆಚ್ಚಳವು ಭಾರತದಲ್ಲಿ ವಿಸ್ತರಿಸುತ್ತಿರುವ ಆಟೋಮೊಬೈಲ್ ಮಾರುಕಟ್ಟೆಯನ್ನು ಪ್ರತಿಬಿಂಬಿಸುತ್ತದೆ.
ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಸಿಯಾಮ್) ಅಂಕಿ - ಅಂಶಗಳ ಪ್ರಕಾರ, ಮೇ ತಿಂಗಳಲ್ಲಿ ಪ್ರಯಾಣಿಕ ಕಾರುಗಳ ಮಾರಾಟವು ಶೇಕಡಾ 11 ಕ್ಕಿಂತ ಕಡಿಮೆಯಾಗಿದೆ. ಪ್ರಯಾಣಿಕ ಕಾರುಗಳ ದೇಶೀಯ ಮಾರಾಟವು ಮೇ 2023 ರಲ್ಲಿ ಇದ್ದ 1,20,364 ಯುನಿಟ್ಗಳಿಂದ ಮೇ 2024 ರಲ್ಲಿ 1,06,952 ಯುನಿಟ್ಗಳಿಗೆ ಅಂದರೆ ಶೇಕಡಾ 11 ರಷ್ಟು ಕುಸಿದಿದೆ.
ಆಟೋ ಕಂಪನಿಗಳು ಪ್ರಯಾಣಿಕ ಕಾರುಗಳ ಉತ್ಪಾದನೆಯನ್ನು ಶೇಕಡಾ 13 ರಷ್ಟು ಕಡಿಮೆ ಮಾಡಿದ್ದು, ಉತ್ಪಾದನೆಯು ಮೇ 2023 ರಲ್ಲಿ ಇದ್ದ 1,63,619 ಯುನಿಟ್ಗಳಿಂದ 2024 ರಲ್ಲಿ 1,42,367 ಯುನಿಟ್ಗಳಿಗೆ ಇಳಿಕೆಯಾಗಿದೆ. ಪ್ರಯಾಣಿಕ ಕಾರುಗಳ ರಫ್ತು ಕೂಡ ಮೇ 2023 ರಲ್ಲಿ ಇದ್ದ 35,806 ಯುನಿಟ್ಗಳಿಂದ ಮೇ 2024 ರಲ್ಲಿ 28,802 ಯುನಿಟ್ಗಳಿಗೆ, ಅಂದರೆ ಶೇಕಡಾ 20 ರಷ್ಟು ಕುಸಿದಿದೆ.
ಇದನ್ನೂ ಓದಿ : ರುಪೇ ಕ್ರೆಡಿಟ್ ಕಾರ್ಡ್ ಪ್ರಯೋಜನಗಳೇನು? ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ - benefits of RUPAY CREDIT CARD