ನವದೆಹಲಿ: ಭಾರತದಲ್ಲಿ ಭಯೋತ್ಪಾದನೆ ಹರಡುತ್ತಿರುವ ಗಂಭೀರ ಆರೋಪ ಎದುರಿಸುತ್ತಿರುವ ವಿವಾದಿತ ಧರ್ಮಗುರು ಜಾಕಿರ್ ನಾಯ್ಕ್ ಹಸ್ತಾಂತರದ ಬಗ್ಗೆ ಮಲೇಷ್ಯಾ ಸಕಾರಾತ್ಮಕ ಸೂಚನೆಗಳನ್ನು ನೀಡಿದೆ. ಬಲವಾದ ಸಾಕ್ಷ್ಯಗಳನ್ನು ನೀಡಿದಲ್ಲಿ ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಪರಿಗಣಿಸಲಾಗುವುದು ಎಂದು ಆ ದೇಶದ ಪ್ರಧಾನಿ ಹೇಳಿದ್ದಾರೆ.
ಭಾರತಕ್ಕೆ ಮೂರು ದಿನಗಳ ಭೇಟಿ ನೀಡಿದ್ದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು, ಪ್ರಧಾನಿ ಮೋದಿ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದೀಗ ಮಲೇಷ್ಯಾಗೆ ವಾಪಸ್ ಆಗಿರುವ ಅನ್ವರ್ ಅವರು ತಮ್ಮ ಪ್ರವಾಸದ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಉಗ್ರವಾದದ ವಿರುದ್ಧ ಹೋರಾಟ: ಈ ವೇಳೆ ಜಾಕಿರ್ ನಾಯ್ಕ್ ಕುರಿತು ಹೇಳಿಕೆ ನೀಡಿರುವ ಅವರು, ಭಾರತದ ಪ್ರಧಾನಿಯ ಜೊತೆಗಿನ ಮಾತುಕತೆಯಲ್ಲಿ ವಿವಾದಿತ ಧರ್ಮಗುರುವಿನ ಪ್ರಸ್ತಾಪವಾಗಿಲ್ಲ. ಆದಾಗ್ಯೂ ಆತನ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಿದಲ್ಲಿ, ಹಸ್ತಾಂತರಿಸುವ ಬಗ್ಗೆ ಯೋಚಿಸಲಾಗುವುದು. ಭಯೋತ್ಪಾದನೆಯನ್ನು ನಮ್ಮ ದೇಶ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ನಾವು ಉಗ್ರವಾದಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಇದು ಒಬ್ಬ ವ್ಯಕ್ತಿ ಅಥವಾ ಗುಂಪಿಗೆ ಸಂಬಂಧಿಸಿದ್ದಲ್ಲ. ಭಯೋತ್ಪಾದನೆ ನಿರ್ಮೂಲನೆ ಮಾಡಲು ನಮ್ಮ ಸರ್ಕಾರವೂ ಶ್ರಮಿಸುತ್ತಿದೆ. ಉಗ್ರವಾದವನ್ನು ನಿಗ್ರಹಿಸುವುದರ ಜೊತೆಗೆ ಹಲವು ವಿಷಯಗಳಲ್ಲಿ ಭಾರತದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈ ಒಂದು ಪ್ರಕರಣ ಭಾರತ ಮತ್ತು ಮಲೇಷ್ಯಾ ನಡುವಿನ ಸಹಕಾರ ಮತ್ತು ಬಲವರ್ಧನೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದು ನನ್ನ ಭಾವನೆ ಎಂದು ಇಬ್ರಾಹಿಂ ಅವರು ಹೇಳಿದ್ದಾರೆ.
ಮೂರು ದಿನಗಳ ಭೇಟಿಗಾಗಿ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಸೋಮವಾರ ದೆಹಲಿಗೆ ಆಗಮಿಸಿದ್ದರು. ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು. ಭಾರತದಿಂದ ಮಲೇಷ್ಯಾಕ್ಕೆ ಮಾನವ ಕಳ್ಳಸಾಗಣೆ ಹೆಚ್ಚುತ್ತಿರುವ ಪ್ರಕರಣಗಳನ್ನು ತಡೆಗಟ್ಟಲು ಉಭಯ ದೇಶಗಳು ಒಪ್ಪಿಕೊಂಡಿವೆ.
ಉಭಯ ದೇಶಗಳ ಸಂಬಂಧ ವೃದ್ಧಿಗೆ ಯತ್ನ: ಮಲೇಷ್ಯಾದ ಮಾಜಿ ಪ್ರಧಾನಿ ಮಹತೀರ್ ಮೊಹಮ್ಮದ್ ಅವಧಿಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಳಸಿದೆ. ಇದನ್ನು ಮರುಸ್ಥಾಪಿಸುವತ್ತ ಮೋದಿ ಮತ್ತು ಇಬ್ರಾಹಿಂ ಗಮನ ಹರಿಸಿದ್ದಾರೆ. ಉಭಯ ಪಕ್ಷಗಳ ನಡುವೆ ಒಟ್ಟು 8 ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಇವುಗಳಲ್ಲಿ ಮಲೇಷ್ಯಾದಲ್ಲಿ ಭಾರತೀಯ ಕಾರ್ಮಿಕರ ರಕ್ಷಣೆ, ಡಿಜಿಟಲೀಕರಣ, ರಕ್ಷಣಾ ವಲಯ, ಭದ್ರತೆ, ಅರೆವಾಹಕಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ಚರ್ಚೆಗಳು ನಡೆದಿವೆ.
ಇದೇ ಭಯೋತ್ಪಾದನೆಯನ್ನು ಉಭಯ ರಾಷ್ಟ್ರಗಳ ನಾಯಕರು ಖಂಡಿಸಿ, ಯಾವುದೇ ದೇಶವು ಭಯೋತ್ಪಾದಕರಿಗೆ ಆಶ್ರಯ ನೀಡಬಾರದು. ಉಗ್ರವಾದಿಗಳನ್ನು ತ್ವರಿತವಾಗಿ ಕಟಕಟೆಗೆ ತರಲು ಒಟ್ಟಾಗಿ ಪ್ರಯತ್ನಿಸಬೇಕು ಎಂದು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.
ಇದನ್ನೂ ಓದಿ: ಬಂಗಾಳ ವೈದ್ಯೆ ಅತ್ಯಾಚಾರ ಪ್ರಕರಣ: ಕಾಲೇಜಿನ ಮಾಜಿ ಪ್ರಾಂಶುಪಾಲನ ವಿರುದ್ಧ ಗಂಭೀರ ಆರೋಪ - Kolkata Doctor Rape Case