ಹಲ್ದ್ವಾನಿ (ಉತ್ತರಾಖಂಡ): ಹಲ್ದ್ವಾನಿ ನಗರದ ಯುವಕನೊಬ್ಬ ತೃತೀಯಲಿಂಗಿಯನ್ನು ಪ್ರೀತಿಸುತ್ತಿದ್ದ. ಈ ಪ್ರೀತಿ ಮುಂದೆ ಮದುವೆಗೆ ತಿರುಗಿದೆ. ಇದೀಗ ಇಬ್ಬರು ಪ್ರೇಮಬಂಧಕ್ಕೆ ವೈವಾಹಿಕ ರೂಪವನ್ನು ನೀಡಿದ್ದಾರೆ. ಆದರೆ ಯುವಕನ ಮನೆಯವರಿಗೆ ಈ ವಿಷಯ ಮೊದಲಿಗೆ ಗೊತ್ತಿರಲಿಲ್ಲ. ವಿಷಯ ತಿಳಿಯುತ್ತಿದ್ದಂತೆ ವಿರೋಧ ಕೂಡಾ ವ್ಯಕ್ತವಾಗಿದೆ. ಮದುವೆ ಬೇಡ ಎಂದು ಯುವಕನ ಕುಟುಂಬದಲ್ಲಿ ಭಾರಿ ಗಲಾಟೆ ನಡೆದಿದೆ. ಇವರಿಬ್ಬರೂ ಮನೆಯವರಿಗೆ ಕೈಗೆ ಸಿಕ್ಕಿಹಾಕಿಕೊಂಡಾಗ ಕೋಲಾಹಲ ಉಂಟಾಗಿದೆ. ಈ ವೇಳೆ, ತಂದೆ ಹಾಗೂ ಮಗನ ನಡುವೆ ತೀವ್ರ ವಾಗ್ವಾದ ನಡೆದಿದೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟರು. ಇದುವರೆಗೂ ಇಬ್ಬರ ಕಡೆಯಿಂದಲೂ ದೂರು ಬಂದಿಲ್ಲ. ದೂರು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಘಟನೆಯ ಹಿನ್ನೆಲೆ: ಹಲ್ದ್ವಾನಿ ನಿವಾಸಿಯಾಗಿರುವ ಯುವಕ ಹಾಗೂ ಅದೇ ಪ್ರದೇಶದ ತೃತೀಯಲಿಂಗಿಯ ಮಧ್ಯೆ ಪ್ರೇಮಾಂಕುರವಾಗಿದೆ. ಈ ಪ್ರೀತಿ ಒಟ್ಟಿಗೆ ಕೂಡಿ ಬಾಳುವ ನಿರ್ಧಾರಕ್ಕೆ ಬಂದು, ನಂತರ ಇಬ್ಬರೂ ಮದುವೆ ಆಗಿದ್ದಾರೆ. ಯುವಕನ ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಮದುವೆಯ ನಂತರ ಯುವಕ ತೃತೀಯ ಲಿಂಗಿಯ ಜೊತೆಗೆ ಓಡಿಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಯುವಕನಿಗಾಗಿ ಹುಡುಕಾಟ ನಡೆಸಿದ್ದರು. ಈ ನಡುವೆ ನಿನ್ನೆ ರಾತ್ರಿ ಸಿಂಧಿ ಪ್ರದೇಶದಲ್ಲಿ ಇವರಿಬ್ಬರು ಪತ್ತೆಯಾಗಿದ್ದರು. ಈ ವೇಳೆ ಭಾರಿ ಗಲಾಟೆ ನಡೆದು ಅಪ್ಪ-ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರನ್ನೂ ನೋಡಿದ ತಕ್ಷಣ ಕುಟುಂಬಸ್ಥರು ನಿಂದಿಸಿದ್ದು, ಇದೇ ವಿಷಯವಾಗಿ ಮಾರಾಮಾರಿ ಹಂತಕ್ಕೆ ತಲುಪಿದೆ. ಪ್ರೇಮ, ಮದುವೆ, ಗಲಾಟೆ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿ ಜನಸಾಗರವೇ ನೆರೆದಿತ್ತು.
ಅಷ್ಟರಲ್ಲಿ ಯಾರೋ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಪೊಲೀಸರು ಕೂಡ ಸ್ಥಳಕ್ಕೆ ಬಂದರು. ನಂತರ ಪೊಲೀಸರು ತುಂಬಾ ಸಮಯದ ನಂತರ ಸಮಾಧಾನಪಡಿಸಿದರು. ಆದರೆ, ಯುವಕ ತೃತೀಯಲಿಂಗಿಯ ಜೊತೆಗೆ ಜೀವನ ನಡೆಸಲು ಹಠ ಹಿಡಿದಿದ್ದ. ತಾನು ಮತ್ತು ತೃತೀಯಲಿಂಗಿಯನ್ನ ತುಂಬಾ ಪ್ರೀತಿಸುತ್ತೇನೆ ಎಂದು ಯುವಕ ತಿಳಿಸಿದ್ದಾನೆ. ಈಗ ವಿಷಯ ಶಾಂತವಾಗಿದ್ದು, ಈ ಬಗ್ಗೆ ಯಾವುದೇ ದೂರು ಬಂದಿಲ್ಲ, ದೂರು ಬಂದ ನಂತರ ಕ್ರಮ ಕೈಗೊಳ್ಳಲಾಗುವುದು'' ಎಂದು ಪೊಲೀಸ್ ಅಧಿಕಾರಿ ಕೊತ್ವಾಲ್ ಉಮೇಶ್ ಕುಮಾರ್ ಮಲಿಕ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಎಟ್ನಾದ ಜ್ವಾಲಾಮುಖಿ ಪರ್ವತ ಏರಿ ತ್ರಿವರ್ಣ ಧ್ವಜ ಹಾರಿಸಿದ ರಾಜಸ್ಥಾನದ ಧೋಲಿ ಮೀನಾ