ಲಖನೌ, ಉತ್ತರಪ್ರದೇಶ: 2011ರಲ್ಲಿ ಮೊದಲ ಪ್ರಯತ್ನದಲ್ಲೇ ಐಎಎಸ್ ಪಾಸ್ ಮಾಡಿದ ಅಧಿಕಾರಿ ಅಭಿಷೇಕ್ ಸಿಂಗ್ ಉತ್ತರ ಪ್ರದೇಶ ಕೇಡರ್ ಅಧಿಕಾರಿ. ಆಡಳಿತದ ಕೆಲಸಕ್ಕಿಂತ ಇತರ ಕಾರಣಗಳಿಂದಲೇ ಸುದ್ದಿಯಾದ ಆಫೀಸರ್ ಇವರು. ರಾಜಕೀಯದಲ್ಲಿ ನೆಲೆ ಪಡೆಯಬೇಕು ಎಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದ ಈ ಅಧಿಕಾರಿ ಇದೀಗ ತಮ್ಮ ರಾಜೀನಾಮೆ ಹಿಂಪಡೆಯಲು ಮುಂದಾಗಿದ್ದು, ಈ ಸಂಬಂಧ ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ, ಸಿಎಂ ಆದಿತ್ಯನಾಥ ಅವರ ಸರ್ಕಾರ ಇದಕ್ಕೆ ನಿರಾಕರಿಸಿದೆ.
ರಾಜಕೀಯದಲ್ಲಿ ಆಸಕ್ತಿಯನ್ನು ಹೊಂದಿದ್ದ ಅಭಿಷೇಕ್ ಸಿಂಗ್, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆಯುವ ನಿರೀಕ್ಷೆ ಹೊಂದಿದ್ದರು. ಇದೇ ಕಾರಣಕ್ಕೆ ತಮ್ಮ ರಾಜಕೀಯ ಸಿದ್ಧತೆಗಾಗಿ 2023ರ ಅಕ್ಟೋಬರ್ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಕೂಡಾ ನೀಡಿದ್ದರು. ಅಷ್ಟೇ ಅಲ್ಲದೇ, ಚುನಾವಣೆಗೆ ಮುನ್ನವೇ ಈ ಕುರಿತು ಪೂರ್ಣ ಪುಟದ ಜಾಹೀರಾತನ್ನು ನೀಡಿ, ಸ್ಥಳೀಯ ಜನರಿಗೆ ಅಯೋಧ್ಯೆಗೆ ಉಚಿತ ಬಸ್ ಪ್ರಯಾಣ ಘೋಷಿಸಿದ್ದರು.
ಇಷ್ಟೆಲ್ಲಾ ಪ್ರಯತ್ನಗಳ ನಡುವೆ ಅಭಿಷೇಕ್ ಚುನಾವಣೆಯಲ್ಲಿ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಚುನಾವಣೆಯಲ್ಲಿ ಟಿಕೆಟ್ ನಿರಾಶೆ ಉಂಟಾದ ಹಿನ್ನಲೆ ಇದೀಗ ಅಧಿಕಾರಿ, ತಮ್ಮ ರಾಜೀನಾಮೆಯನ್ನು ತಾವು ಹಿಂಪಡೆಯುತ್ತಿದ್ದು, ಮರಳಿ ಹುದ್ದೆಗೆ ಸೇರುವ ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಮನವಿಯನ್ನು ತಿರಸ್ಕರಿಸಿದ್ದಾರೆ.
ಈ ಅಧಿಕಾರಿಯನ್ನು ಸರ್ಕಾರಿ ಹುದ್ದೆಗೆ ಮರಳಿ ಬರಲು ನಿರಾಕರಣೆ ಮಾಡಲು ಇಷ್ಟು ಮಾತ್ರ ಕಾರಣವಲ್ಲ. 2023ರಲ್ಲಿ ರಜೆ ಹಾಕಿ ಗೈರಾದ ಆರೋಪದ ಮೇಲೆ ಇವರನ್ನು ಹುದ್ದೆಯಿಂದ ಅಮಾನತು ಕೂಡಾ ಮಾಡಲಾಗಿತ್ತು. ಇದಕ್ಕೂ ಮುನ್ನ ಅಂದರೆ, 2014ರಲ್ಲಿ ಕಂದಾಯ ಮಂಡಳಿಗೆ ಸಂಬಂಧಿಸಿದ ಪ್ರಕರಣದಲ್ಲೂ ಇವರು ಅಮಾನತಾಗಿದ್ದರು.
ಸಿನಿಮಾರಂಗದಲ್ಲಿ ಆಸಕ್ತಿ: 2020ರಲ್ಲಿ ಗಾಯಕ ಬಿ ಪ್ರಾಕ್ ಹಾಡಾದ ದಿಲ್ ತೊಡ್ ಕೆ 'ದಿಲ್ ತೋಡ್ ಕೆ' ನಲ್ಲೂ ಕೂಡಾ ಇವರು ಕೆಲಸ ಮಾಡಿದ್ದರು. ನಂತರ ಅವರು ಜುಬಿನ್ ನೌಟಿಯಾಲ್ ಅವರ ಆಲ್ಬಂ 'ತುಜೆ ಭೂಲ್ನಾ ತೋ ಚಾಹಾ' ನಲ್ಲಿಯೂ ಮಿಂಚಿದ್ದರು ಬಳಿಕ, ನೆಟ್‌ಫ್ಲಿಕ್ಸ್‌ನ ವೆಬ್ ಸರಣಿ ದೆಹಲಿ ಕ್ರೈಮ್‌ನ ಸೀಸನ್ 2 ರಲ್ಲಿ ಕಾಣಿಸಿಕೊಂಡಿದ್ದರು. 'ಚಾರ್ ಪಂದ್ರಾ' ಎಂಬ ಕಿರುಚಿತ್ರದಲ್ಲೂ ನಟಿಸಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ಅವರು ಗಾಯಕ ಹಾರ್ಡಿ ಸಂಧು ಅವರ 'ಯಾದ್ ಆತಿ ಹೈ' ಹಾಡಿನಲ್ಲಿ ಕೂಡಾ ನಟಿಸಿದ್ದರು.
ಸಿನಿಮಾ ನಟನಾಗಬೇಕು ಎಂಬ ಇಚ್ಛೆ ಹೊಂದಿದ್ದರೂ ಅದರಲ್ಲಿ ಯಶಸ್ಸು ಕಾಣಲಿಲ್ಲ. ಇದೀಗ ರಾಜಕೀಯದಲ್ಲೂ ಭವಿಷ್ಯ ಕಂಡು ಕೊಳ್ಳಲಾಗಲಿಲ್ಲ. ಹೀಗಾಗಿ ತಮ್ಮ ಹುದ್ದೆಗೆ ನೀಡಿದ್ದ ರಾಜೀನಾಮೆ ವಾಪಸ್ ಪಡೆಯಲು ಚಿಂತಿಸಿದ್ದು, ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಇವರ ಮನವಿಯನ್ನು ಸಿಎಂ ಯೋಗಿ ಆದಿತ್ಯನಾಥ ತಿರಸ್ಕರಿಸಿದ್ದಾರೆ. (ಐಎಎನ್ಎಸ್)