ಹೈದರಾಬಾದ್: ಪ್ರತಿ ವರ್ಷ ಸೆಪ್ಟೆಂಬರ್ 21 ರಂದು 'ವಿಶ್ವ ಕೃತಜ್ಞತಾ ದಿನ'ವನ್ನು ಆಚರಿಸಲಾಗುತ್ತದೆ. ನಾವೆಷ್ಟು ಅದೃಷ್ಟಶಾಲಿಗಳು ಎಂಬುದನ್ನು ಸ್ಮರಿಸುವವ ದಿನವೇ ಈ 'ವಿಶ್ವ ಕೃತಜ್ಞತಾ ದಿನ'. ನಮ್ಮಲ್ಲಿರುವ ಕೃತಜ್ಞತಾ ಮನೋಭಾವ ಮತ್ತು ನಮ್ಮ ಸುತ್ತಲಿರುವವರಿಗೆ ಕೃತಜ್ಞತೆಯನ್ನು ತೋರಿಸುವ ದಿನ ಕೂಡ ಇದಾಗಿದೆ. ಕೃತಜ್ಞತೆ ಸಲ್ಲಿಸುವುದಕ್ಕೂ ಒಂದು ದಿನವಿದ್ದು, ಇದು ಕೂಡ ತನ್ನದೇಯಾದ ಇತಿಹಾಸ ಹೊಂದಿದೆ.
ಇತಿಹಾಸ: ವಿಶ್ವ ಕೃತಜ್ಞತಾ ದಿನವನ್ನು 1965ರಲ್ಲಿ ಹವಾಯಿಯಲ್ಲಿ ಮೊದಲು ಆರಂಭಿಸಲಾಯಿತು. ಇಂತಹದ್ದೊಂದು ದಿನ ಆಚರಿಸುವ ಬಗ್ಗೆ ವಿಶ್ವಸಂಸ್ಥೆಯ ಧ್ಯಾನ ಕೊಠಡಿಯಲ್ಲಿ ಪ್ರಪಂಚದಾದ್ಯಂತ ಬಂದ ಜನರು ಸಭೆ ಸೇರಿದ್ದರು. ಆಗ ತಜ್ಞತೆಗೆ ಒಂದು ಅಂತಾರಾಷ್ಟ್ರೀಯ ದಿನ ನಿಗದಿ ಮಾಡುವ ಸಲಹೆ ಮುಂದಿಡಲಾಯಿತು. ಅದರಂತೆ 1966ರಲ್ಲಿ, ಮೊದಲ ವಿಶ್ವ ಕೃತಜ್ಞತಾ ದಿನವನ್ನು ಸೆ. 21 ರಂದು ಕೃತಜ್ಞತಾ ದಿನವನ್ನು ಆಚರಿಸಲಾಯಿತು. ಆಗಿನಿಂದ ಪ್ರತೀ ವರ್ಷವೂ ಒಂದೊಂದು ಥೀಮ್ನೊಂದಿಗೆ ಈ ದಿನ ಆಚರಣೆಯಲ್ಲಿದೆ.
ಈ ವರ್ಷದ ಥೀಮ್: ಪ್ರತೀ ವರ್ಷದಂತೆ ಈ ವರ್ಷವೂ ಹೊಸ ವಿಚಾರದೊಂದಿಗೆ ಈ ದಿನದ ಆಚರಣೆ ನಡೆಯುತ್ತಿದೆ. "ಮೇರಿಯ ಜೊತೆಯಾಗಿ, (ಅನುಗ್ರಹ) ಕನಸಿನ ಮಾರ್ಗ ದರ್ಶನದಿಂದ ನಾವು ನಮ್ಮ ಸಾಮಾನ್ಯ ಮನೆಯನ್ನು, ಶಾಂತಿಯನ್ನು ಸ್ಥಾಪಿಸಿಕೊಳ್ಳುವುದರ ಮುಲಕ ಚಂದದಿ ನೋಡಿಕೊಳ್ಳುತ್ತೇವೆ" ಅನ್ನೋದು ಈ ವರ್ಷದ ಥೀಮ್ ಆಗಿದೆ.
ಕೃತಜ್ಞತೆ ಎಂದರೇನು?: ಕೃತಜ್ಞತೆ ಎಂದರೆ "ಧನ್ಯವಾದಗಳು" ಎಂದು ಹೇಳುವುದಕ್ಕಿಂತ ಹೆಚ್ಚು. ಇದು ಅಂತರಾಳದ ಭಾವನೆ ಮತ್ತು ಒಬ್ಬರ ಜೀವನವನ್ನು ಬದಲಾಯಿಸುವ ಪದ ಕೂಡ ಹೌದು. ಕೃತಜ್ಞತೆಯು ನಮ್ಮ ಜೀವನದ ಉತ್ಸಾಹ, ಉದಾರತೆ, ಸಹಾನುಭೂತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ, ಸಕಾರಾತ್ಮಕತೆಯನ್ನು ಗುರುತಿಸುವುದು, ಜೀವನದ ಅದ್ಭುತ ಅಂಶಗಳನ್ನು ಒಪ್ಪಿಕೊಳ್ಳುವ ಮತ್ತು ಶ್ಲಾಘಿಸುವ ಒಂದು ಮಾರ್ಗ ಕೂಡ ಹೌದು. ಕೃತಜ್ಞತೆ ಎಂಬ ಪದವು ಲ್ಯಾಟಿನ್ ಪದ ಗ್ರ್ಯಾಟಿಯಾದಿಂದ ಬಂದಿದ್ದು, ಇದರರ್ಥ ಅನುಗ್ರಹ, ಕೃಪೆ, ಸಂತೋಷ, ಸ್ವಾಗತ ಅಂತಲೂ ಹೇಳಬಹುದು. ಕೃತಜ್ಞತೆ ನಮ್ಮ ಭಾವನಾತ್ಮಕ ಪ್ರತಿಕ್ರಿಯೆಗಿಂತ ಹೆಚ್ಚಾಗಿದ್ದರಿಂದ ನಮ್ಮ ಜೀವನದ ಮೇಲೆ ಬಹುದೊಡ್ಡ ಪರಿಣಾಮ ಕೂಡ ಬೀರುತ್ತದೆ. ನಮಗೆ ತಿಳುವಳಿಕೆ ನೀಡಿದ, ಜ್ಞಾನ ವೃದ್ಧಿ ಮಾಡಲು ಸಹಾಯ ಮಾಡಿದ ಯಾವುದೇ ವ್ಯಕ್ತಿಗಾದರೂ ನಾವು ಗೌರವ ತೋರುವುದೇ ಕೃತಜ್ಞತೆ ಆಗಿದೆ.
ಮಾನಸಿಕ ಸ್ವಾಸ್ಥ್ಯ: ಕೃತಜ್ಞತೆಯು ದುಃಖ ಮತ್ತು ಚಿಂತೆಯ ಭಾವನೆಗಳನ್ನು ಕಡಿಮೆ ಮಾಡುತ್ತದೆ. ಆತ್ಮವಿಶ್ವಾಸವನ್ನು ಹೆಚ್ಚಿಸುವ ಮೂಲಕ ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ದೈಹಿಕ ಆರೋಗ್ಯದ ಜೊತೆಗೆ ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ. ಹೃದಯರಕ್ತನಾಳದ ಆರೋಗ್ಯವನ್ನು ವೃದ್ಧಿಸುತ್ತದೆ. ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಮತ್ತು ಒತ್ತಡವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ದೈಹಿಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.
ಸಾಮಾಜಿಕ ಸಂಬಂಧಗಳು: ಕೃತಜ್ಞತೆಯು ಇತರರೊಂದಿಗೆ ಆಳವಾದ ಸಂಪರ್ಕಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಪರಸ್ಪರ ಸಂಬಂಧಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಸಹಾನುಭೂತಿಯನ್ನು ಹೆಚ್ಚಿಸಲು, ಹಗೆತನವನ್ನು ಕಡಿಮೆ ಮಾಡಲು ಮತ್ತು ಸಾಮಾಜಿಕ ಸಂತೃಪ್ತಿಯ ಭಾವವನ್ನು ಬೆಳೆಸಲು ಸಹಾಯ ಮಾಡುತ್ತದೆ. ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಹಂಚಿಕೊಳ್ಳುವ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಸಂತೋಷದ ಮೂಲ: ಕೃತಜ್ಞತೆಯು ಸಂತೋಷ ಮತ್ತು ಸಕಾರಾತ್ಮಕ ಭಾವನೆಗಳಿಗೆ ಸಂಬಂಧಿಸಿದೆ. ಕಷ್ಟದ ಸಮಯದಲ್ಲೂ ವ್ಯಕ್ತಿಗಳು ಹೆಚ್ಚು ತೃಪ್ತಿ ಮತ್ತು ಸಂತೋಷವನ್ನು ಅನುಭವಿಸಲು ಇದು ಸಹಾಯ ಮಾಡುತ್ತದೆ. ವೈಯಕ್ತಿಕ ಬೆಳವಣಿಗೆಯಲ್ಲಿ ಸಹ ಸಹಾಯ ಮಾಡುತ್ತದೆ. ಮಾನಸಿಕ ನೆಮ್ಮದಿಯನ್ನು ಹೆಚ್ಚಿಸುವುದರ ಜೊತೆಗೆ ಹೆಚ್ಚು ಆಶಾವಾದಿ ದೃಷ್ಟಿಕೋನವನ್ನು ಬೆಳೆಸುತ್ತದೆ. ಕೃತಜ್ಞತೆಯನ್ನು ಹೇಳುವ ವ್ಯಕ್ತಿಗಳು ಬೇಗ ಚೇತರಿಸಿಕೊಳ್ಳುವ ಮೂಲಕ ಜೀವನದ ಸವಾಲುಗಳನ್ನು ದಿಟ್ಟತನದಿಂದ ಎದುರಿಸುತ್ತಾರೆ. ಕಡಿಮೆ ಹತಾಶೆ, ಅಸೂಯೆ, ಅಸಮಾಧಾನ ಮತ್ತು ವಿಷಾದವನ್ನು ಅನುಭವಿಸಲು ಸಹಾಯ ಮಾಡುತ್ತದೆ. ಶಾಂತಿಯ ಭಾವವನ್ನು ಸಾಧಿಸಲು ಮತ್ತು ಅವರ ಜೀವನದ ಸಕಾರಾತ್ಮಕ ಅಂಶಗಳ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಅಲ್ಲದೇ ಜನರನ್ನು ಹೆಚ್ಚು ಪ್ರಾಮಾಣಿಕ ಮತ್ತು ಉದಾರರನ್ನಾಗಿ ಮಾಡಬಹುದು.
ಕೃತಜ್ಞತಾ ದಿನದಂದು ಹೀಗೆ ಮಾಡಿ: ನಿಮ್ಮ ಜನ್ಮಕ್ಕೆ ಕಾರಣರಾದ ಮತ್ತು ನಿಮ್ಮನ್ನು ಸಾಕಿ ಸಲುಹಿದ ಅಪ್ಪ ಅಮ್ಮನಿಗೆ ನೀವು ಎಷ್ಟು ಕೃತಜ್ಞರಾದರೂ ಕಡಿಮೆಯೇ. ಅವರಿಂದ ನೀವು ಅದೆಷ್ಟು ಲಾಭ ಗಳಿಸಿದ್ದೀರಿ, ಜೀವನ ಎದುರಿಸುವ ಅದೆಷ್ಟು ಶಕ್ತಿ ಪಡೆದಿದ್ದೀರಿ ಎಲ್ಲವನ್ನೂ ಸ್ಮರಿಸಿ ಅವರಿಗೆ ಧನ್ಯವಾದ ಹೇಳುವುದನ್ನು ಮರೆಯಬೇಡಿ. ಸಮುದಾಯ, ಸೇವೆ ಸಲ್ಲಿಸಿದ ಸ್ಥಳ, ಶಿಕ್ಷಣ ಸಂಸ್ಥೆಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿ. ನಿಮ್ಮ ಸಹೋದರ, ಸಹೋದರಿಯರು, ಸ್ನೇಹಿತರ ಉಪಕಾರ ಸ್ಮರಣೆ ಮಾಡಿರಿ. ಮುಖತಃ ಭೇಟಿ ಮಾಡಿ ಭಾವನೆಗಳನ್ನು ಹಂಚಿಕೊಳ್ಳಿ. ಎಲ್ಲರಿಗೂ ನಿಮ್ಮ ಕೃತಜ್ಞತೆಯನ್ನು ಸಲ್ಲಿಸಿ.
ಹಾಗೇ, ನಿಮ್ಮ ಜೀವನದಲ್ಲಿ ನಿಮ್ಮಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾದ ಎಲ್ಲಾ ವ್ಯಕ್ತಿಗಳು ಮತ್ತು ಸಂದರ್ಭಗಳನ್ನು ಸ್ಮರಿಸಿಕೊಳ್ಳಿ. ನಿಮಗೇ ಗೊತ್ತಿಲ್ಲದಂತೆ ಅದೆಷ್ಟು ಜನರು ನಿಮ್ಮ ಜೀವನದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂಬುದು ನಿಮಗೆ ಅರಿವಾಗಿ ನಿಮ್ಮನ್ನು ವಿನಮ್ರರನ್ನಾಗಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಒಳ್ಳೆಯ ಗುಣಗಳನ್ನು ಪಟ್ಟಿ ಮಾಡಿ, ನೀವು ಅದೆಷ್ಟು ಕೃತಜ್ಞರು ಎಂಬುದನ್ನು ಕಂಡುಕೊಳ್ಳಿ.