ನವಿ ಮುಂಬೈ: ಮಹಾರಾಷ್ಟ್ರದ ನವಾ ಶೇವಾದಲ್ಲಿರುವ ಅಟಲ್ ಸೇತುವೆಯ (ಅಟಲ್ ಬಿಹಾರಿ ವಾಜಪೇಯಿ ಟ್ರಾನ್ಸ್ ಹಾರ್ಬರ್ ಲಿಂಕ್ ಬ್ರಿಡ್ಜ್) ಸುರಕ್ಷತಾ ರೈಲಿಂಗ್ ಮೇಲಿನಿಂದ ಆಯತಪ್ಪಿ ನದಿಗೆ ಬೀಳುತ್ತಿದ್ದ ಮಹಿಳೆಯನ್ನು ಕ್ಯಾಬ್ ಚಾಲಕ ಹಾಗೂ ಸ್ಥಳೀಯ ಟ್ರಾಫಿಕ್ ಪೊಲೀಸರು ರಕ್ಷಣೆ ಮಾಡಿದ್ದಾರೆ. ಮಹಿಳೆಯ ಹೆಸರು ರಿಮಾ ಪಟೇಲ್ (56). ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆ ಬಗ್ಗೆ ಮಾಹಿತಿ ನೀಡಿದ ನವಾ ಶೇವಾ ಸಂಚಾರ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಗುಲ್ಫರೋಜ್ ಮುಜಾವರ್, "ರಿಮಾ ಪಟೇಲ್ ಮುಲುಂಡ್ನಿಂದ ಕ್ಯಾಬ್ ಬುಕ್ ಮಾಡಿದ್ದರು. ಮುಂಬೈನಿಂದ ನವಿ ಮುಂಬೈ ಕಡೆಗೆ ಸಾಗುವ ರಸ್ತೆಯಲ್ಲಿ ಕ್ಯಾಬ್ ಅಟಲ್ ಸೇತುವೆ ಬಳಿ ಬರುತ್ತಿದ್ದಂತೆ ಚಾಲಕನಿಗೆ ಕ್ಯಾಬ್ ನಿಲ್ಲಿಸುವಂತೆ ಹೇಳಿದ್ದಾರೆ. ಚಾಲಕ ಸಂಜಯ್ ದ್ವಾರಕಾ ಯಾದವ್ ಕ್ಯಾಬ್ ನಿಲ್ಲಿಸುತ್ತಿದ್ದಂತೆ, ಕಾರಿನಿಂದ ಇಳಿದ ಮಹಿಳೆ ಸೇತುವೆಯ ಸುರಕ್ಷತಾ ರೇಲಿಂಗ್ ಮೇಲೆ ಹತ್ತಿದ್ದಾರೆ. ಗಸ್ತು ತಿರುಗುತ್ತಿದ್ದ ನವಾ ಶೇವಾ ಟ್ರಾಫಿಕ್ ವ್ಯಾನ್ ಅಲ್ಲಿಗೆ ಬಂದಿದೆ. ಕಾರು ನಿಂತಿರುವುದು ಹಾಗೂ ಮಹಿಳೆಯೊಬ್ಬರು ರೇಲಿಂಗ್ ಮೇಲೆ ಹತ್ತಿದ್ದನ್ನು ಗಮನಿಸಿ, ಪೊಲೀಸರು ವಾಹನ ನಿಲ್ಲಿಸಿದ್ದಾರೆ. ಅದೇ ಸಮಯಕ್ಕೆ ಆಯತಪ್ಪಿ ನೀರಿಗೆ ಬೀಳುತ್ತಿದ್ದ ಮಹಿಳೆಯ ಕೂದಲನ್ನು ಹಿಡಿದು ಬೀಳದಂತೆ ಕ್ಯಾಬ್ ಚಾಲಕ ರಕ್ಷಿಸಿದ್ದಾನೆ. ಅದೇ ವೇಳೆ ಅಲ್ಲಿಗೆ ಬಂದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಲಲಿತ್ ಶಿರ್ಸಾತ್, ಕಿರಣ್ ಮ್ಹಾತ್ರೆ, ಯಶ್ ಸೋನ್ವಾನೆ, ಮಯೂರ್ ಪಾಟೀಲ್ ಮಹಿಳೆಯ ರಕ್ಷಣೆಗೆ ಧಾವಿಸಿದ್ದಾರೆ" ಎಂದು ತಿಳಿಸಿದರು.
ಸಿಸಿಟಿವಿ ದೃಶ್ಯದಲ್ಲಿ, ಸುರಕ್ಷತಾ ರೇಲಿಂಗ್ ಮೇಲೆ ಕುಳಿತಿರುವ ಮಹಿಳೆ ಕ್ಯಾಬ್ ಡಿಕ್ಕಿಯಿಂದ ತೆಗೆದು ಚಾಲಕ ಕೊಡುತ್ತಿರುವ ಕೆಲ ವಸ್ತುಗಳನ್ನು ನೀರಿಗೆ ಎಸೆಯುತ್ತಿದ್ದಾರೆ. ರೇಲಿಂಗ್ ಮೇಲೆ ಕುಳಿತಿರುವ ಮಹಿಳೆಯನ್ನು ಗಮನಿಸಿ ಗಸ್ತು ತಿರುಗುತ್ತಿದ್ದ ಟ್ರಾಫಿಕ್ ಪೊಲೀಸ್ ವ್ಯಾನ್ ನಿಲ್ಲಿಸಿದ್ದು, ಗಾಬರಿಗೊಂಡ ಮಹಿಳೆ ಸಮತೋಲನ ತಪ್ಪಿ ನದಿಗೆ ಜಾರಿದ್ದಾರೆ. ಚಾಲಕ ಸಮಯಪ್ರಜ್ಞೆಯಿಂದ ಮಹಿಳೆ ಬೀಳದಂತೆ ಕೂದಲನ್ನು ಹಿಡಿದಿದ್ದಾರೆ. ತಕ್ಷಣ ಧಾವಿಸಿದ ಸಂಚಾರ ಪೊಲೀಸ್ ಸಿಬ್ಬಂದಿ ಸೇರಿ ಮಹಿಳೆಯ ಪ್ರಾಣ ಉಳಿಸಿದ್ದಾರೆ.
ಶುಕ್ರವಾರ ಸಂಜೆ 7 ಗಂಟೆಗೆ ಈ ಘಟನೆ ನಡೆದಿದೆ. ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಸುದ್ದಿ ವೈರಲ್ ಆಗುತ್ತಿದೆ. ಆದರೆ ರಿಮಾ ಪಟೇಲ್ ಅವರು "ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ, ದೇವರ ಫೋಟೋಗಳನ್ನು ನೀರಿಗೆ ಹಾಕುತ್ತಿದ್ದೆ" ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಹಾಸನ: ಹೇಮಾವತಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ - Hassan Family Suicide