ಬದ್ಲಾಪುರ: ಪ್ರತಿಷ್ಟಿತ ಶಾಲೆಯಲ್ಲಿ ನರ್ಸರಿ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಖಂಡಿಸಿ ಬದ್ಲಾಪುರ್ ರೈಲ್ವೆ ಸ್ಟೇಷನ್ನಲ್ಲಿ ಇಂದು ಪ್ರತಿಭಟನೆ ನಡೆಯಿತು. ಈ ವೇಳೆ ಮಹಿಳಾ ಪ್ರತಿಭಟನಾಕಾರರು, ನಮಗೆ ಮುಖ್ಯಮಂತ್ರಿ ಮಜಿ ಲಡ್ಕಿ ಯೋಜನೆಯಡಿ ನೀಡುತ್ತಿರುವ 1,500 ರೂಪಾಯಿ ಬೇಡ. ನಮಗೆ ಬೇಕಾಗಿರುವುದು ನಮ್ಮ ಮಗಳ ಸುರಕ್ಷತೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಲ್ಕು ವರ್ಷದ ಎರಡು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ನೂರಾರು ಕಾರ್ಯಕರ್ತರು ಬದ್ಲಾಪುರ ರೈಲ್ವೆ ನಿಲ್ದಾಣಯಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ನಮ್ಮ ಮಕ್ಕಳ ಸುರಕ್ಷತೆ ಮುಖ್ಯ: ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಮಹಿಳಾ ಪ್ರತಿಭಟನಾಕಾರರು, ನಮ್ಮ ಮಕ್ಕಳು ಸುರಕ್ಷಿತವಾಗಿಲ್ಲದಾಗ ಹಣ ಪಡೆದು ಏನು ಮಾಡುವುದು ಎಂದು ಪ್ರಶ್ನಿಸಿದರು.
ದಹಿ ಹಂಡಿ ಕಾರ್ಯಕ್ರಮಕ್ಕೆ ನಮಗೆ ಯಾವುದೇ ಸೆಲೆಬ್ರಿಟಿಗಳು ಬೇಕಿಲ್ಲ. ನಮಗೆ ನ್ಯಾಯ ಬೇಕು. ಇಂತಹ ಪರಿಸ್ಥಿತಿಯಲ್ಲಿ ನೀವು ಇಲ್ಲದಿದ್ದಾಗ ನೀವು ರಾಜಕರಣಿಯಾಗಿ ಏನು ಪ್ರಯೋಜನ? ನೀವು ನಮ್ಮನ್ನು ಪ್ರೀತಿಯ ಸಹೋದರಿ ಎಂದು ಕರೆಯುತ್ತೀರಿ. ಇವೇನಾ ನಿಮ್ಮ ಲಾಡ್ಕಿ ಬೆಹನ್ (ಪ್ರೀತಿಯ ಸಹೋದರಿ) ಮಗಳಿಗೆ ನೀಡುವ ನ್ಯಾಯ?. ನಿಮ್ಮ ಪ್ರೀತಿಯ ಸಹೋದರಿಗೆ ಮೊದಲಿಗೆ ನ್ಯಾಯ ಕೊಡಿ. ಆಡಳಿತವನ್ನು ನಂಬಿ ನಾವು ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗುತ್ತೇವೆ. ಮಕ್ಕಳು ಸುರಕ್ಷಿತವಾಗಿಲ್ಲ ಎಂದರೆ ನಾವು ಕೆಲಸ ಮಾಡಿ ಏನು ಪ್ರಯೋಜನ? ನಮಗೆ ನಿಮ್ಮ ಲಡ್ಕಿ ಬೆಹನ್ ಯೋಜನೆ ಬೇಡ ಎಂದರು.
ಈ ರೀತಿಯ ಪರಿಸ್ಥಿತಿಗಳು ಮುಂದುವರೆದರೆ, ಮಕ್ಕಳನ್ನು ಶಾಲೆಗೆ ಕಳಹಿಸುವಾಗ ಯೋಚನೆ ಮಾಡಬೇಕಾಗುತ್ತದೆ. ಪ್ರತಿ ದಿನ ನಾವು ನಮ್ಮ ಮಕ್ಕಳಿಗೆ ಕೆಟ್ಟ ಮತ್ತು ಒಳ್ಳೆಯ ಸ್ಪರ್ಶದ ಬಗ್ಗೆ ತಿಳಿಸುತ್ತೇವೆ. ಈ ರೀತಿ ದೌರ್ಜನ್ಯ ನಡೆಸುವವರಿಗೆ ಈ ಸ್ಪರ್ಶದ ಕುರಿತು ತಿಳಿಯದಿದ್ದಾಗ ಮಕ್ಕಳಿಗೆ ಈ ಬಗ್ಗೆ ತಿಳಿಸಿ ಏನು ಪ್ರಯೋಜನ?. ಈ ಬಗ್ಗೆ ಗಂಡು ಮಕ್ಕಳಿಗೆ ಹೆಚ್ಚಿನ ತಿಳುವಳಿಕೆ ಬೇಕಾಗಿದೆ. ವಿಶೇಷವಾಗಿ, ಹೆಣ್ಣು ಮಕ್ಕಳನ್ನು ಗೌರವಿಸುವುದನ್ನು ಅವರಿಗೆ ಕಲಿಸಬೇಕು ಎಂದರು.
ಏನಿದು ಘಟನೆ?: ಆಗಸ್ಟ್ 12-13ರಂದು ಬದ್ಲಾಪುರನಲ್ಲಿ ಇಬ್ಬರು ಹೆಣ್ಣು ಮಕ್ಕಳ ಮೇಲೆ ಗುತ್ತಿಗೆ ಆಧಾರದ ಕಸಗುಡಿಸುವ ವ್ಯಕ್ತಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದು, ಭಾರೀ ಖಂಡನೆ ವ್ಯಕ್ತವಾಗಿತ್ತು.
ಮಹಾ ವಿಕಾಸ ಅಗಡಿಯ ಪಕ್ಷಗಳಾದ ಕಾಂಗ್ರೆಸ್, ಎಸ್ಪಿ ಮತ್ತು ಶಿವಸೇನೆ (ಯುಬಿಟಿ) ಜೊತೆಗೆ ಬಂಚಿತ್ ಬಹುಜನ್ ಅಗಡಿ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಘಟನೆಯನ್ನು ಖಂಡಿಸಿವೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ತವರು ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಇನ್ನೂ ಹೆಚ್ಚು ಆಕ್ರೋಶಕ್ಕೆ ಕಾರಣವಾಗಿದೆ.
ಎಸ್ಐಟಿ ತನಿಖೆ: ಇನ್ನು, ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.(ಐಎಎನ್ಎಸ್)