ಡೆಹ್ರಾಡೂನ್(ಉತ್ತರಾ ಖಂಡ್): ಹಿಮಾಲಯದ ತಪ್ಪಲಿನ ರಾಜ್ಯ ಉತ್ತರಾಖಂಡದಲ್ಲಿ ಈ ವರ್ಷದ ಮೊದಲ ಹಿಮ ಬಿದ್ದಿದೆ. ಹೊಸ ವರ್ಷಕ್ಕೆ ಇನ್ನೂ ಎರಡು ವಾರವಿರುವಾಗಲೇ ರಾಜ್ಯ ಹಿಮದಿಂದ ಆವೃತ್ತವಾಗಿದ್ದು, ನೋಡಲು ರಮಣೀಯವಾಗಿದೆ. ಈ ಮೂಲಕ ದೇಶೀ ಹಾಗೂ ವಿದೇಶಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಪವಿತ್ರ ಯಾತ್ರಾಸ್ಥಳಗಳಿರುವ 'ದೇವಭೂಮಿ' ಖ್ಯಾತಿಯ ರಾಜ್ಯ ಇದೀಗ ಬಿಳಿಯ ಹಿಮದಿಂದ ಆಕರ್ಷಣೀಯ ತಾಣವಾಗಿದೆ. ಹಿಮ ಬೀಳುತ್ತಿದ್ದಂತೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದ್ದು, ಹೊಸ ವರ್ಷದ ಸಂಭ್ರಮಕ್ಕಿದು ಇನ್ನಷ್ಟು ಹುರುಪು ನೀಡಲಿದೆ.
ಗರ್ವಾಲ್ ಜಿಲ್ಲೆಯ ಚಕ್ರತಾ, ಮಸ್ಸೂರಿ, ಉತ್ತರಾಕಾಶಿ, ರುದ್ರಪ್ರಯಾಗ್ ಮತ್ತು ಚಮೋಲಿಯಲ್ಲಿ ಹಿಮ ಬಿದ್ದಿದೆ.
ಹಿಮಾಚಲ ಪ್ರದೇಶದಲ್ಲೂ ಹಿಮಪಾತವಾಗುತ್ತಿದೆ. ಹರ್ಷಿ ಕಣಿವೆ, ಗಂಗೋತ್ರಿ, ಯಮುನೋತ್ರಿ ಹಾಗೂ ಡೆಹ್ರಾಡೂನ್ ಲೋಕಂಡಿಯಲ್ಲಿ ಹಾಲ್ನೊರೆಯಂತಹ ಬಿಳಿ ಹಿಮಗಳು ಕಾಣುತ್ತಿವೆ.
ಇಂದು ಮುಂಜಾನೆ ವರ್ಷದ ಮೊದಲ ಹಿಮ ಬೀಳುತ್ತಿದ್ದಂತೆ ಗಿರಿ ಶಿಖರದತ್ತದ ಪ್ರವಾಸಿಗರು ದಂಡು ಆಗಮಿಸಲು ಶುರುವಾಯಿತು. ಹೀಗಾಗಿ, ಅನೇಕ ಪ್ರವಾಸಿ ಸ್ಥಳದಲ್ಲಿ ಜನಸಂದಣಿ ಹೆಚ್ಚಿತ್ತು. ಜನರು ಹಿಮದಲ್ಲಿ ಎಲ್ಲೆಡೆ ಆಟವಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದ ಇತರೆ ಪ್ರದೇಶದಲ್ಲಿ ಡಿಸೆಂಬರ್ 11ರ ಬಳಿಕ ಹಿಮಪಾತ ಉಂಟಾಗಲಿದೆ. ಜನರು ಮುಂದಿನ ದಿನದಲ್ಲಿ ಮತ್ತಷ್ಟು ಹಿಮದ ಅನುಭವ ಪಡೆಯಲಿದ್ದಾರೆ.
ಚಾರ್ದಾಮ್ನಲ್ಲಿ ಹಿಮ ಮಳೆ: ಹೇಮಕುಂಡ ಸಾಹಿಬ್ ಸೇರಿದಂತೆ ಯಮುನೋತ್ರಿ, ಗಂಗೋತ್ರಿ, ಕೇದರಾನಾಥ್ ಮತ್ತು ಬದ್ರಿನಾಥ್ ಧಾಮ್ನಲ್ಲಿ ಭಾರೀ ಹಿಮಪಾತವಾಗಿದೆ. ಈ ಹಿನ್ನೆಲೆಯಲ್ಲಿ ಋತುವಿನಲ್ಲಿ ಚಾರ್ಧಾಮ್ ಸೇರಿದಂತೆ ಹೇಮಕುಂಡ್ನಲ್ಲಿ ದೇಗುಲದ ಬಾಗಿಲುಗಳನ್ನು ಮುಚ್ಚಲಾಗುವುದು. ಮಸ್ಸೂರಿ ಮತ್ತು ಧನೌಲ್ಟಿಯಲ್ಲೂ ಹಿಮಪಾತವಾಗಿದೆ. ಸೋಮವಾರ, ಮಸ್ಸೋರಿ ಆಲಿಕಲ್ಲು ಮಳೆ ಮತ್ತು ಲಘು ಹಿಮಪಾತವಾಗಿದೆ.
ಉತ್ತರಾಖಂಡ್ ಹವಾಮಾನ ಇಲಾಖೆ ನಿರ್ದೇಶಕ ಬಿಕ್ರಮ್ ಸಿಂಗ್ ಪ್ರತಿಕ್ರಿಯಿಸಿ, "ರಾಜ್ಯದ ಅನೇಕ ಕಡೆ ಹಗುರ ಹಿಮ ಬಿದ್ದಿದೆ. ಅನೇಕ ಪ್ರದೇಶದಲ್ಲಿ ಮುಂದಿನ ದಿನದಲ್ಲಿ ಹೆಚ್ಚು ಹಿಮವಾಗಲಿದೆ" ಎಂದರು.
ಇದನ್ನೂ ಓದಿ: ಕಾಶ್ಮೀರದಲ್ಲಿ ಶೀತದ ಅಲೆ ತೀವ್ರ: ಗುಲ್ಮಾರ್ಗ್ನಲ್ಲಿ -9.0°C ತಾಪಮಾನ ದಾಖಲು!