ಲಖನೌ: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕೇರಳದ ವಯನಾಡು ಮತ್ತು ಉತ್ತರಪ್ರದೇಶದ ರಾಯ್ಬರೇಲಿಯಿಂದ ಸ್ಪರ್ಧಿಸಿ ಎರಡೂ ಕಡೆ ಭರ್ಜರಿ ಜಯ ಸಾಧಿಸಿದ್ದರು. ಈಗ ನಿಯಮದ ಪ್ರಕಾರ ಎರಡರಲ್ಲಿ ಒಂದನ್ನು ತ್ಯಜಿಸಬೇಕಾಗಿದೆ. ಹೀಗಾಗಿ ರಾಗಾ ಅವರು ತಮ್ಮ ಕುಟುಂಬದ ಪರಂಪರಾಗತ ಕ್ಷೇತ್ರ ರಾಯ್ಬರೇಲಿಯನ್ನು ಉಳಿಸಿಕೊಂಡಿದ್ದು, ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಅವರ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಇದರ ಹಿಂದೆ ಕಾಂಗ್ರೆಸ್ ದೊಡ್ಡ ತಂತ್ರಗಾರಿಕೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
- ರಾಯ್ ಬರೇಲಿ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ರಾಹುಲ್ ಗಾಂಧಿ, ಉತ್ತರಪ್ರದೇಶದಲ್ಲಿ ಭರ್ಜರಿ ಪುನರಾಗಮನ ಮಾಡಿದ್ದಾರೆ. ಈ ಅವಕಾಶವನ್ನು ಯಾವುದೇ ಸಂದರ್ಭದಲ್ಲೂ ವ್ಯರ್ಥ ಮಾಡಿಕೊಳ್ಳಲು ಕಾಂಗ್ರೆಸ್ ಬಯಸುವುದಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಉತ್ತರ ಪ್ರದೇಶವೊಂದೇ ದಾರಿ ಎಂಬುದು ಬಹುತೇಕ ರಾಜಕೀಯ ಪಕ್ಷಗಳಿಗೂ ಗೊತ್ತಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.
- ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರಗಳೆರಡನ್ನೂ ಗೆಲ್ಲುವ ಮೂಲಕ ಕಾಂಗ್ರೆಸ್ ಭರ್ಜರಿ ಉತ್ಸಾಹ ತುಂಬಿಕೊಂಡಿದೆ. ಕಳೆದ ಬಾರಿಯ ಅಮೇಥಿ ಸೋಲಿನ ಸೇಡನ್ನು ತೀರಿಸಿಕೊಳ್ಳಲಾಗಿದೆ. ಈ ಗೆಲುವನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ಮತ್ತಷ್ಟು ಬಲ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ರಾಯ್ ಬರೇಲಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯನ್ನು ಉಳಿಸಿಕೊಳ್ಳುವುದು ಪಕ್ಷಕ್ಕೆ ಅನಿವಾರ್ಯವಾಗಿದೆ.
- ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರಗಳನ್ನು ಗಾಂಧಿ ಕುಟುಂಬದ ಪ್ರತಿಷ್ಠೆ ಎಂದು ಪರಿಗಣಿಸಲಾಗಿದೆ. 2019ರಲ್ಲಿ ಅಮೇಥಿ ಕ್ಷೇತ್ರದಿಂದ ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸಿತ್ತು. ಈಗ ಪಕ್ಷವು ಮತ್ತೆ ಯಾವುದೇ ತಪ್ಪನ್ನು ಮಾಡದಿರಲು ಪಕ್ಷ ಬಯಸುವುದಿಲ್ಲ ಮತ್ತು ಗಾಂಧಿ ಕುಟುಂಬದ ಖ್ಯಾತಿಯನ್ನು ಮುಂದುವರೆಸಿಕೊಂಡು ಹೋಗಲು ಕಾಂಗ್ರೆಸ್ ನಿರ್ಧರಿಸಿದೆ.
- 2024ರ ಲೋಕಸಭೆ ಚುನಾವಣೆಯನ್ನು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಭರ್ಜರಿ ಕಮ್ಬ್ಯಾಕ್ ಮಾಡಿದೆ. ಹಲವು ವರ್ಷಗಳ ಕಠಿಣ ಪರಿಶ್ರಮದ ನಂತರ ಪಕ್ಷವು ಈ ಯಶಸ್ಸನ್ನು ಸಾಧಿಸಿದೆ. ಈ ಚುನಾವಣೆಯಲ್ಲಿ ಅಮೇಥಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳ ಬಗ್ಗೆ ಕಾಂಗ್ರೆಸ್‌ನ ಪ್ರಚಾರ ಇಡೀ ಉತ್ತರಪ್ರದೇಶದಲ್ಲಿ ಚರ್ಚೆಯ ವಿಷಯವಾಗಿತ್ತು. ಪ್ರಿಯಾಂಕಾ ಗಾಂಧಿ ಅವರು ತಮ್ಮ ಕುಟುಂಬದ ಬಗ್ಗೆ ಸಾರ್ವಜನಿಕರಿಗೆ ಮಾಡಿದ ಭಾವನಾತ್ಮಕ ಭಾಷಣ ಭಾರಿ ಪ್ರಶಂಸೆಗೆ ಭಾಜನವಾಗಿತ್ತು. ಇದೇ ಓಘವನ್ನು ಕಾಯ್ದುಕೊಳ್ಳುವುದು ಇದೀಗ ಗಾಂಧಿ ಕುಟುಂಬಕ್ಕೆ ಅನಿವಾರ್ಯವಾಗಿದೆ.
- ಉತ್ತರಪ್ರದೇಶ ರಾಜಕೀಯದಲ್ಲಿ ಯೋಗಿ ಆದಿತ್ಯನಾಥ್, ಕೇಶವ್ ಪ್ರಸಾದ್ ಮೌರ್ಯ ಸೇರಿದಂತೆ ಬಿಜೆಪಿಯ ಅನೇಕ ದೊಡ್ಡ ನಾಯಕರಿದ್ದಾರೆ, ಅವರ ಸ್ಪರ್ಧೆಯಲ್ಲಿ ಕಾಂಗ್ರೆಸ್ ಕಡೆಯಿಂದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮಾತ್ರ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೂ ರಾಹುಲ್‌ಗೆ ಉತ್ತರ ಪ್ರದೇಶದ ಜವಾಬ್ದಾರಿ ನೀಡಲಾಗಿದೆ.
- ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯಾ ಸೋಲು ಬಿಜೆಪಿಗೆ ದೊಡ್ಡ ಹೊಡೆತ ನೀಡಿದೆ. ಕಾಂಗ್ರೆಸ್ ಇದನ್ನು ಒಂದು ದೊಡ್ಡ ಅವಕಾಶವಾಗಿ ಬಳಸಿಕೊಳ್ಳಲು ಯೋಜಿಸಿದೆ. ಆಡಳಿತ ವಿರೋಧಿ ಅಲೆಯನ್ನು ಕಾಯ್ದುಕೊಳ್ಳಲು ರಾಹುಲ್ ಗಾಂಧಿ ಉತ್ತರಪ್ರದೇಶದಲ್ಲಿ ಇರುವುದು ತೀರಾ ಅಗತ್ಯ ಎಂಬುದನ್ನು ಪಕ್ಷ ಮನಗಂಡಿದೆ.
- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ಇಬ್ಬರ ಜೋಡಿ ಯುಪಿಯಲ್ಲಿ ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ. ಬಿಜೆಪಿಯನ್ನು ಎದುರಿಸುವ ಈ ಸೂತ್ರವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಕಾಂಗ್ರೆಸ್ ಬಯಸುವುದಿಲ್ಲ
- ಪಕ್ಷದ ನಾಯಕರು ಉತ್ತರಪ್ರದೇಶದಲ್ಲಿ ಪಕ್ಷ ತೊರೆದು ಇತರ ಪಕ್ಷಗಳೊಂದಿಗೆ ಕೈಜೋಡಿಸುತ್ತಿರುವುದರಿಂದ ಕಾಂಗ್ರೆಸ್ ತುಂಬಾ ದುರ್ಬಲವಾಗಿದೆ ಎಂಬ ಅರಿವು ಅದಕ್ಕಾಗಿದೆ. ಯುಪಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಈ ಗೆಲುವು ದೊಡ್ಡ ಬೂಸ್ಟ್ ನೀಡಿರುವುದಂತೂ ಸುಳ್ಳಲ್ಲ. ಈ ಗೆಲುವು ಕಾಂಗ್ರೆಸ್ ನಾಯಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಕಾಂಗ್ರೆಸ್ ಈಗ ಯುಪಿಯಲ್ಲಿ ಪ್ರಬಲವಾಗಬಹುದು ಮತ್ತು ರಾಹುಲ್ ಗಾಂಧಿ ಅದನ್ನು ಮುನ್ನಡೆಸಬಹುದು. ಈ ಕಾರಣಕ್ಕಾಗಿ ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.
- ಮುಸ್ಲಿಂ, ಯಾದವ, ದಲಿತ ಮತದಾರರ ಜತೆಗೆ ಕಾಂಗ್ರೆಸ್‌ನ ಪ್ರಮುಖ ಮತದಾರರೂ ಈ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಶೇಕಡಾವಾರು ಪ್ರಮಾಣ ಇನ್ನೂ ಹೆಚ್ಚಾಗಬಹುದು ಎಂದು ಪಕ್ಷವು ಆಶಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಮತಗಳನ್ನು ಸೆಳೆಯಲು ರಾಹುಲ್ ಗಾಂಧಿ ಅವರನ್ನು ರಾಯ್ಬರೇಲಿಯಲ್ಲಿ ಉಳಿಸಿಕೊಳ್ಳುವುದು ಅನಿವಾರ್ಯ ಎಂದು ವಿಶ್ಲೇಷಿಸಲಾಗುತ್ತಿದೆ.
- ಯುಪಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ಹಣಾಹಣಿ ನೆಕ್ ಟು ನೆಕ್ ಎಂಬ ಪರಿಸ್ಥಿತಿಯಲ್ಲಿತ್ತು. ಇದು ಕಾಂಗ್ರೆಸ್ಗೆ ದೊಡ್ಡ ಮರು ಜೀವ ನೀಡಿದೆ. ಹಾಗಾಗಿ ಸೋಲನ್ನು ಗೆಲುವನ್ನಾಗಿ ಪರಿವರ್ತಿಸಲು ರಾಹುಲ್ ಗಾಂಧಿ ಅವರಿಂದ ಮಾತ್ರ ಸಾಧ್ಯ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಬಂದಂತಿದೆ. ಈ ಕಾರಣಕ್ಕಾಗಿ ಅವರನ್ನು ರಾಯ್ ಬರೇಲಿ ಕ್ಷೇತ್ರದಲ್ಲೂ ಉಳಿಸಿಕೊಳ್ಳಲಾಗಿದೆ. ವಯನಾಡು ಕ್ಷೇತ್ರವನ್ನು ಬಿಟ್ಟರೆ ರಾಯ್ ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ಗೆ ಅಷ್ಟೊಂದೇನೂ ನಷ್ಟವಾಗುವುದಿಲ್ಲ ಎಂಬುದು ಪಕ್ಷಕ್ಕೆ ತಿಳಿದಿದೆ. ಈ ಕಾರಣಕ್ಕಾಗಿ ಪ್ರಿಯಾಂಕಾ ಗಾಂಧಿ ಅವರನ್ನು ವಯನಾಡಿಗೆ ಕಳುಹಿಸುವ ತೀರ್ಮಾನವನ್ನು ಮಾಡಲಾಗಿದೆ.
ವಯನಾಡ ಲೋಕಸಭಾ ಕ್ಷೇತ್ರದ ಉಪ ಚುನಾವಣೆ; ಪ್ರಿಯಾಂಕಾರನ್ನು ಸ್ವಾಗತಿಸಿದ ಕೇರಳ ಕಾಂಗ್ರೆಸ್ - Priyanka Gandhi