ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳ ಗುಂಪೊಂದು ದಾಳಿ ಮಾಡಿದ ಹಿನ್ನೆಲೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಎನ್‌ಐಎ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಎನ್‌ಐಎ ಅಧಿಕಾರಿಗಳ ದಾಳಿ ಬಳಿಕ ಮಮತಾ ಬ್ಯಾನರ್ಜಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. "ಅಧಿಕಾರಿಗಳು ಮಧ್ಯರಾತ್ರಿ ಯಾಕೆ ದಾಳಿ ಮಾಡಿದರು? ಅವರಿಗೆ ಪೂರ್ವ ಪೊಲೀಸ್ ಅನುಮತಿ ಇದೆಯೇ? ಎನ್ಐಎಗೆ ಯಾವ ಹಕ್ಕಿದೆ?" ಮಧ್ಯರಾತ್ರಿಯಲ್ಲಿ ಅಪರಿಚಿತರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಭಾವಿಸಿದ್ದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
''ಇಡಿ, ಸಿಬಿಐ ಮತ್ತು ಎನ್‌ಐಎಯಂತಹ ಕೇಂದ್ರೀಯ ಸಂಸ್ಥೆಗಳು ಬಿಜೆಪಿಯನ್ನು ಬೆಂಬಲಿಸುತ್ತಿವೆ. ಅವರು ನಮ್ಮ ಜನರನ್ನು (ಟಿಎಂಸಿ ಕಾರ್ಯಕರ್ತರ) ಚುನಾವಣೆಯ ಮೊದಲು ಏಕೆ ಬಂಧಿಸುತ್ತಿದ್ದಾರೆ?'' ಎಂದು ಮಮತಾ ಪ್ರಶ್ನಿಸಿದ್ದಾರೆ.
ನಡುವಾ ವಿಲ್ಲಾ ಸ್ಫೋಟ ಪ್ರಕರಣದಲ್ಲಿ (ಭೂಪತಿನಗರ ಸ್ಫೋಟ) ಇಬ್ಬರು ತೃಣಮೂಲ ನಾಯಕರನ್ನು ಎನ್‌ಐಎ ನಿನ್ನೆ ಬಂಧಿಸಿದೆ. ಗ್ರಾಮಸ್ಥರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಭೂಪತಿನಗರ ಪೊಲೀಸರು ತಿಳಿಸಿದ್ದಾರೆ. ಬಳಿಕ ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಪೊಲೀಸರು ಬರುವ ಮುನ್ನವೇ ಎನ್‌ಐಎ ಅಧಿಕಾರಿಗಳು ಆಗಮಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಕೇವಲ ಮೂರು ತಿಂಗಳ ಹಿಂದೆ ಜನವರಿ 5 ರಂದು, ಪಶ್ಚಿಮ ಬಂಗಾಳದ ಉತ್ತರ 24 ಪರಗಣಗಳ ಸಾಡೆಸ್ಖಾಲಿಯಲ್ಲಿ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸುತ್ತಿದ್ದಾಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಸುಮಾರು 200 ಸ್ಥಳೀಯರ ಗುಂಪು ದಾಳಿ ನಡೆಸಿತ್ತು.
ಇದನ್ನೂ ಓದಿ: ಬಿಜೆಪಿ ಸಂಸ್ಥಾಪನಾ ದಿನ 2024: 'ಮತ್ತೊಮ್ಮೆ ಮೋದಿ ಸರ್ಕಾರ' ಥೀಮ್ನೊಂದಿಗೆ ಆಚರಣೆ - BJP Foundation Day