ಲಖನೌ, ಉತ್ತರಪ್ರದೇಶ: 2024ರ ಲೋಕಸಭೆ ಚುನಾವಣೆಯ ಫಲಿತಾಂಶ ಬಂದ ಬಳಿಕ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಬಹುತೇಕ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರು ಉತ್ತರಪ್ರದೇಶದಲ್ಲೇ ಇಲ್ಲ. ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಕಳೆದ 5 ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೈಕಮಾಂಡ್ ಮಟ್ಟದ ನಾಯಕರನ್ನು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಅವರು ಎರಡು ಸಚಿವ ಸಂಪುಟ ಸಭೆಗಳಿಂದಲೂ ದೂರ ಉಳಿದಿದ್ದಾರೆ ಎಂದು ಹೇಳಲಾಗಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಹೀನಾಯ ಪ್ರದರ್ಶನದ ಬಳಿಕ ಡಿಸಿಎಂ ಜವಾಬ್ದಾರಿ ಬದಲಾಗಬಹುದು ಎಂದೂ ಹೇಳಲಾಗುತ್ತಿದೆ. ಈ ಬದಲಾವಣೆ ಸಾಂಸ್ಥಿಕ ಮಟ್ಟದಲ್ಲಿ ಆಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಪಕ್ಷವನ್ನು ಮತ್ತೆ ಬಲವರ್ದನೆಗೆ ತರುವ ನಿಟ್ಟಿನಲ್ಲಿ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಬಳಸಿಕೊಳ್ಳಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಮೌರ್ಯ ಅವರಿಗೆ ಉತ್ತರಪ್ರದೇಶ ಬಿಜೆಪಿ ಅಧ್ಯಕ್ಷ ಪಟ್ಟ ಕಟ್ಟಬಹುದು. ಈ ಮೂಲಕ ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಅಧಿಕಾರದತ್ತ ತೆಗೆದುಕೊಂಡು ಹೋಗಲು ಜವಾಬ್ದಾರಿ ನೀಡಬಹುದು ಎಂದು ಹೇಳಲಾಗುತ್ತಿದೆ. ಮೌರ್ಯ ಅವರಿಂದ ಆಗುವ ಸಚಿವ ಸ್ಥಾನಕ್ಕೆ ಪ್ರಸ್ತುತ ಇರುವ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಕ್ಯಾಬಿನೆಟ್ ಸಚಿವರನ್ನಾಗಿ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಕೇಶವ್ ಪ್ರಸಾದ್ ಮೌರ್ಯ ಅವರು ಉತ್ತರ ಪ್ರದೇಶದ ಉಪಮುಖ್ಯಮಂತ್ರಿಯಾಗಿದ್ದರೂ ಮಂಗಳವಾರ ನಡೆದ ಸಂಪುಟ ಸಭೆ ಹಾಗೂ ಅದಕ್ಕೂ ಮುನ್ನ ನಡೆದ ಸಚಿವ ಸಂಪುಟ ಸಭೆಗೂ ಅವರು ಬಂದಿರಲಿಲ್ಲ. ಹೀಗಾಗಿ ಅವರ ನಿಲುವಿನ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಕೇಶವ್ ಪ್ರಸಾದ್ ಮೌರ್ಯ ಅವರು ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ಬಿಜೆಪಿಯ ಹಿರಿಯ ನಾಯಕರನ್ನು ಪದೇ ಪದೇ ಭೇಟಿ ಮಾಡಿದ್ದಾರೆ ಎಂಬ ಸುದ್ದಿಗಳಿವೆ.
ಕೇಶವ್ ಪ್ರಸಾದ್ ಮೌರ್ಯ ಅವರು 2017 ರಲ್ಲಿ ಉತ್ತರ ಪ್ರದೇಶದ ರಾಜ್ಯಾಧ್ಯಕ್ಷರಾಗಿದ್ದರು. ಉತ್ತರ ಪ್ರದೇಶದಲ್ಲಿ ಆಗ ಭಾರತೀಯ ಜನತಾ ಪಕ್ಷವು ಪ್ರಚಂಡ ಗೆಲುವು ಸಾಧಿಸಿತ್ತು. ಚುನಾವಣೆಯ ನಂತರ ಅವರನ್ನು ಮುಖ್ಯಮಂತ್ರಿ ಮಾಡಬಹುದು ಎಂದೇ ಹೇಳಲಾಗುತ್ತಿತ್ತು. ಆದರೆ ಕೇಂದ್ರ ನಾಯಕತ್ವದಲ್ಲಿ, ಕೇಶವ್ ಪ್ರಸಾದ್ ಮೌರ್ಯ ಬದಲಿಗೆ ಯೋಗಿ ಆದಿತ್ಯನಾಥ್ ಅವರನ್ನು ಉತ್ತರಪ್ರದೇಶ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಕೇಶವ್ ಪ್ರಸಾದ್ ಮೌರ್ಯ ಅವರನ್ನು ಡಾ. ದಿನೇಶ್ ಶರ್ಮಾ ಅವರೊಂದಿಗೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಅವರಿಗೆ ಲೋಕೋಪಯೋಗಿ ಇಲಾಖೆಯನ್ನೂ ನೀಡಲಾಗಿತ್ತು.
ಇನ್ನು 2022ರ ಚುನಾವಣೆಯಲ್ಲಿ ಕೇಶವ್ ಪ್ರಸಾದ್ ಮೌರ್ಯ ಅವರು ಸಿರತುದಿಂದ ಅಪ್ನಾ ದಳದ ನಾಯಕಿ ಪಲ್ಲವಿ ಪಟೇಲ್ ವಿರುದ್ಧ ಸೋಲು ಅನುಭವಿಸಿದ್ದರು. ಆದರೆ ಪಕ್ಷ ಉತ್ತರಪ್ರದೇಶದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿತ್ತು. ಹೀಗಾಗಿ ಮೌರ್ಯ ಸೋತರೂ ಕೂಡಾ ಉಪಮುಖ್ಯಮಂತ್ರಿ ಪಟ್ಟ ಕಟ್ಟಲಾಗಿದೆ. ಪ್ರಸ್ತುತ ಸಚಿವ ಸಂಪುಟದಲ್ಲಿ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ನಡುವೆ ಕೇಶವ್ ಪ್ರಸಾದ್ ಮೌರ್ಯ ಅವರ ಜವಾಬ್ದಾರಿಯಲ್ಲಿ ಬದಲಾವಣೆ ಆಗಲಿವೆ ಎಂದು ಭಾರತೀಯ ಜನತಾ ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಸರ್ಕಾರದಲ್ಲಿ ಈಗಿರುವ ಅವರ ಪಾತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅವರಿಗೆ ಮತ್ತೊಮ್ಮೆ ಲೋಕೋಪಯೋಗಿ ಇಲಾಖೆ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕೇಶವ ಪ್ರಸಾದ್ ಮೌರ್ಯ ಹಿಂದುಳಿದ ವರ್ಗದಿಂದ ಬಂದವರು, ಅವರನ್ನೇ ಮತ್ತೆ ಉತ್ತರ ಪ್ರದೇಶದ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದರೆ, ಬಿಜೆಪಿ ಹಿಂದುಳಿದ ವರ್ಗದವರನ್ನು ಸೆಳೆಯಬಹುದು. ಪ್ರಸ್ತುತ ರಾಜ್ಯಾಧ್ಯಕ್ಷರು ಜಾಟ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ರಾಷ್ಟ್ರೀಯ ಲೋಕದಳವು ಭಾರತೀಯ ಜನತಾ ಪಕ್ಷದೊಂದಿಗೆ ಕೈಜೋಡಿಸಿದ ನಂತರ, ಈಗ ಜಯಂತ್ ಚೌಧರಿ ಅವರರೇ ಜಾಟ್ ಸಮುದಾಯವನ್ನು ಸೆಳೆಯಲಿದ್ದಾರೆ ಎಂದು ಪಕ್ಷ ನಂಬಿದೆ. ಹೀಗಾಗಿ ಭೂಪೇಂದ್ರ ಚೌಧರಿ ಅವರನ್ನು ಬದಲಿಸಿ, ಮೌರ್ಯಗೆ ಪಟ್ಟ ಕಟ್ಟುವ ಸಾಧ್ಯತೆ ಇದೆ.