ಕೋಲ್ಕತ್ತ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ಆರೋಪ ಕೇಳಿಬಂದಿದೆ. ರಾಜಭವನದ ಮಹಿಳಾ ಸಿಬ್ಬಂದಿಯೊಬ್ಬರು ರಾಜ್ಯಪಾಲರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಸಿವಿ ಆನಂದ ಬೋಸ್ ಅವರ ವಿರುದ್ಧ ಆರೋಪ ಮಾಡಿರುವ ಮಹಿಳೆ 2019ರಿಂದ ರಾಜಭವನದಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮಾಹಿತಿ: ''ಗುರುವಾರ (ಮೇ 2ರಂದು ) ರಾಜ್ಯಪಾಲರು ತಮ್ಮನ್ನು ಭೇಟಿ ಮಾಡಿ ತಮ್ಮ ಹುದ್ದೆಯ ಬಡ್ತಿ ನೀಡುವ ಕುರಿತು ಚರ್ಚೆ ಮಾಡಿದ್ದರು. ಈ ವೇಳೆ ತಮಗೆ ಅಹಿತಕರ ಅನುಭವವಾಗಿದೆ. ರಾಜ್ಯಪಾಲರು ತಮ್ಮನ್ನು ಅನುಚಿತವಾಗಿ ಸ್ಪರ್ಶಿಸಿದ್ದರು'' ಎಂದು ಮಹಿಳಾ ಉದ್ಯೋಗಿ ದೂರಿನಲ್ಲಿ ತಿಳಿಸಿದ್ದಾರೆ. ಹರೇ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಕ್ಕೂ ಮೊದಲು ಮಹಿಳೆ ರಾಜಭವನ ಪೊಲೀಸರಿಗೆ ಈ ಕುರಿತಂತೆ ದೂರು ಕೊಟ್ಟಿದ್ದರು. ದೂರನ್ನು ಸ್ವೀಕರಿಸಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಮಹಿಳೆಯಿಂದ ನಾವು ದೂರು ಸ್ವೀಕಾರ ಮಾಡಿದ್ದೇವೆ, ಪೊಲೀಸ್ ಇಲಾಖೆಯಿಂದ ತನಿಖೆ ನಡೆಸುತ್ತಿದ್ದೇವೆ. ಜೊತೆಗೆ ನಾವು ಕಾನೂನು ಇಲಾಖೆಯ ಸಾಂವಿಧಾನಿಕ ತಜ್ಞರೊಂದಿಗೆ ಈ ವಿಷಯದ ಕುರಿತು ಸುದೀರ್ಘವಾಗಿ ಚರ್ಚಿಸಿದ್ದೇವೆ. ಮಹಿಳೆಯ ಮಾಡಿರುವ ಆರೋಪದ ಪ್ರಕಾರ, ರಾಜಭವನದಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಲಾಗಿದೆ" ಎಂದು ಕೇಂದ್ರ ವಿಭಾಗದ ಉಪ ಆಯುಕ್ತೆ ಇಂದಿರಾ ಮುಖರ್ಜಿ ಮಾಧ್ಯಮದವರಿಗೆ ಮಾಹಿತಿ ಕೊಟ್ಟಿದ್ದಾರೆ.
ಪಶ್ಚಿಮ ಬಂಗಾಳದ ರಾಜಭವನ ಹೇಳಿಕೆ: ಈ ಮಧ್ಯೆಯೇ, ರಾಜ್ಯಪಾಲ ಸಿವಿ ಆನಂದ್ ಬೋಸ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ಪಶ್ಚಿಮ ಬಂಗಾಳದ ರಾಜಭವನ ಹೇಳಿಕೆ ನೀಡಿದೆ. ''ರಾಜ್ಯಪಾಲರ ವಿರುದ್ಧ ಮಾನಹಾನಿಕರ ಮತ್ತು ಸಂವಿಧಾನ ವಿರೋಧಿ ಮಾಧ್ಯಮ ಹೇಳಿಕೆಗೆ ನೀಡಲು, ಜೂನಿಯರ್ ಗವರ್ನರ್ ನೇಮಿಸಿದ ಹಣಕಾಸು ಇಲಾಖೆಯ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಚಂದ್ರಿಮಾ ಭಟ್ಟಾಚಾರ್ಯ ಅವರು ಕೋಲ್ಕತ್ತಾ, ಬ್ಯಾರಕ್‌ಪುರ ಮತ್ತು ಡಾರ್ಜಿಲಿಂಗ್‌ನಲ್ಲಿರುವ ರಾಜಭವನ ಸಂಕೀರ್ಣಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಸಚಿವರ ಸಮ್ಮುಖದಲ್ಲಿ ಯಾವುದೇ ಸಮಾರಂಭದಲ್ಲಿ ಭಾಗವಹಿಸದಂತೆ ರಾಜ್ಯಪಾಲರೂ ಸೂಚಿಸಿದ್ದಾರೆ. ಸಚಿವರ ವಿರುದ್ಧ ಮುಂದಿನ ಕಾನೂನು ಕ್ರಮಗಳ ಕುರಿತು ಸಲಹೆಗಾಗಿ ಭಾರತದ ಅಟಾರ್ನಿ ಜನರಲ್ ಅವರನ್ನು ಸಂಪರ್ಕಿಸಲಾಗಿದೆ'' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆರೋಪ ತಳ್ಳಿ ಹಾಕಿದ ಸಿವಿ ಆನಂದ ಬೋಸ್: ಪಶ್ಚಿಮ ಬಂಗಾಳದ ಗವರ್ನರ್ ಸಿವಿ ಆನಂದ ಬೋಸ್ ಅವರು ರಾಜಭವನದ ಉದ್ಯೋಗಿಯೊಬ್ಬರಿಂದ ಮಾಡಿರುವ ಲೈಂಗಿಕ ಕಿರುಕುಳದ ಆರೋಪವನ್ನು ನಿರಾಕರಿಸಿದ್ದಾರೆ. ಇದನ್ನು "ಇಂಜಿನಿಯರ್ಡ್ ನಿರೂಪಣೆ" ಎಂದು ಕರೆದಿದ್ದಾರೆ. "ನನ್ನನ್ನು ನಿಂದಿಸುವ ಮೂಲಕ ಯಾರಾದರೂ ಚುನಾವಣಾ ಲಾಭವನ್ನು ಬಯಸಿದರೆ, ದೇವರು ಅವರನ್ನು ಆಶೀರ್ವದಿಸಲಿ. ಆದರೆ, ಬಂಗಾಳದಲ್ಲಿ ಭ್ರಷ್ಟಾಚಾರ ಮತ್ತು ಹಿಂಸಾಚಾರದ ವಿರುದ್ಧ ನನ್ನ ಹೋರಾಟವನ್ನು ತಡೆಯಲು ಅವರಿಂದ ಸಾಧ್ಯವಿಲ್ಲ" ಎಂದು ಸಿವಿ ಆನಂದ ಬೋಸ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ಬಿಸಿಲ ಝಳಕ್ಕೆ ಇಬ್ಬರು ಸಾವು; ಮೇ 6ರವರೆಗೆ ಶಿಕ್ಷಣ ಸಂಸ್ಥೆಗಳಿಗೆ ರಜೆ - Kerala Sunstroke Deaths