ಉತ್ತರ 24 ಪರಗಣ (ಪಶ್ಚಿಮ ಬಂಗಾಳ): ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸಿಖ್ ಪೊಲೀಸ್ ಅಧಿಕಾರಿ ವಿರುದ್ಧ ಖಲಿಸ್ತಾನಿ ಎಂದು ನಿಂದನೆ ಮಾಡಿದ್ದಾರೆ ಎಂದು ಪಶ್ಚಿಮಬಂಗಾಳ ಪೊಲೀಸರು ಆರೋಪಿಸಿದ್ದಾರೆ. ಈ ಸಂಬಂದ ಪಶ್ಚಿಮ ಬಂಗಾಳ ಪೊಲೀಸ್ ಎಕ್ಸ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ವಿರುದ್ಧ ಹರಿಹಾಯಲಾಗಿದೆ.
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಮಾಡಿರುವ ಟೀಕೆ ದುರುದ್ದೇಶಪೂರಿತವಾಗಿದ್ದು, ಜನಾಂಗೀಯ ಮತ್ತು ಕೋಮು ಪ್ರಚೋದನೆ ಮಾಡುವ ಉದ್ದೇಶ ಹೊಂದಿದ್ದು, ಇದು ಕ್ರಿಮಿನಲ್ ಕೃತ್ಯ ಎಂದು ಬಂಗಾಳ ಪೊಲೀಸರು ಆರೋಪಿಸಿದ್ದಾರೆ. ವ್ಯಕ್ತಿಯ ಧಾರ್ಮಿಕ ಗುರುತಿನ ಮೇಲೆ ಅಪ್ರಚೋದಿತ ಹಾಗೂ ಸ್ವೀಕಾರಾರ್ಹವಲ್ಲದ ವಾಗ್ದಾಳಿಯನ್ನು ಖಂಡಿಸುತ್ತೇವೆ ಎಂದಿದ್ದಲ್ಲದೇ ಈ ಹೇಳಿಕೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
‘‘ನಾವು ಪಶ್ಚಿಮ ಬಂಗಾಳ ಪೊಲೀಸ್ ಬಂಧುಗಳು, ಈ ವಿಡಿಯೋ ಹಂಚಿಕೊಳ್ಳುತ್ತಿದ್ದೇವೆ ಹಾಗೂ ಈ ಬಗ್ಗೆ ನಮಗೆ ಆಕ್ರೋಶವೂ ಇದೆ. ಅಲ್ಲಿ ನಮ್ಮದೇ ಅಧಿಕಾರಿಯೊಬ್ಬರನ್ನು ರಾಜ್ಯದ ವಿರೋಧ ಪಕ್ಷದ ನಾಯಕ 'ಖಲಿಸ್ತಾನಿ' ಎಂದು ಕರೆದಿದ್ದಾರೆ. ಅದು ತಪ್ಪು, ಈ ಸಂಬಂಧ ನಾವು ಕಾನೂನು ಕ್ರಮ ಜರುಗಿಸುತ್ತೇವೆ. ಈ ಹೇಳಿಕೆ ಎಷ್ಟು ದುರುದ್ದೇಶಪೂರಿತ ಮತ್ತು ಜನಾಂಗೀಯ ದ್ವೇಷಿಯಾಗಿದೆ. ಅಷ್ಟೇ ಅಲ್ಲ ಕೋಮು ಪ್ರಚೋದನೆಯನ್ನು ಹೊಂದಿದೆ. ಇದೊಂದು ಕ್ರಿಮಿನಲ್ ಕೃತ್ಯವಾಗಿದೆ. ಒಬ್ಬ ವ್ಯಕ್ತಿಯ ಧಾರ್ಮಿಕ ಗುರುತು ಮತ್ತು ನಂಬಿಕೆಗಳನ್ನು ಪ್ರಚೋದಿಸುವ ಉದ್ದೇಶದಿಂದ ಅಪ್ರಚೋದಿತ, ಸ್ವೀಕಾರಾರ್ಹವಲ್ಲದ ದಾಳಿಯನ್ನು ಮಾಡಲಾಗಿದೆ. ಇದನ್ನು ನಾವು ಖಂಡಿಸುತ್ತೇವೆ. ಕಠಿಣ ಕಾನೂನು ಕ್ರಮವನ್ನು ಆರಂಭಿಸಲಾಗುತ್ತಿದೆ‘‘ ಎಂದು ಪೊಲೀಸರು 'X' ನಲ್ಲಿ ಪೋಸ್ಟ್‌ಗಳ ಸರಣಿಯಲ್ಲಿ ಹೇಳಲಾಗಿದೆ.
ಹೇಳಿಕೆ ಖಂಡಿಸಿದ ಸಿಎಂ ಮಮತಾ ಬ್ಯಾನರ್ಜಿ: ಏತನ್ಮಧ್ಯೆ ಈ ಘಟನೆಯನ್ನು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಖಂಡಿಸಿದ್ದಾರೆ. ಬಿಜೆಪಿಯ ವಿಭಜಕ ರಾಜಕೀಯವು ಸಂವಿಧಾನಾತ್ಮಕ ಗಡಿಗಳನ್ನು ನಾಚಿಕೆಯಿಲ್ಲದೇ ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪ್ರಕಾರ ಟರ್ಬನ್ ಧರಿಸಿದ ಪ್ರತಿಯೊಬ್ಬ ವ್ಯಕ್ತಿಯು ಖಲಿಸ್ತಾನಿ. ನಮ್ಮ ಸಿಖ್ ಸಹೋದರರು ಮತ್ತು ಸಹೋದರಿಯರ ಪ್ರತಿಷ್ಠೆಯನ್ನು ಹಾಳುಮಾಡುವ ಈ ಅಮಾನವೀಯ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
’’ಬಂಗಾಳದ ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡುವಲ್ಲಿ ನಾವು ದೃಢವಾಗಿ ನಿಲ್ಲುತ್ತೇವೆ ಮತ್ತು ಅದನ್ನು ಅಡ್ಡಿಪಡಿಸುವ ಯಾವುದೇ ಪ್ರಯತ್ನಗಳನ್ನು ತಡೆಯಲು ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ‘‘ ಎಂದು X ಖಾತೆಯ ಪೋಸ್ಟ್ ನಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಿಜೆಪಿ ವಿರುದ್ಧ ರಾಹುಲ್ ಗರಂ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿ ವಿಷ ತುಂಬಿಕೊಂಡಿದೆ. ದ್ವೇಷವು ಅವರನ್ನು ಎಷ್ಟರಮಟ್ಟಿಗೆ ಕುರುಡರನ್ನಾಗಿಸಿದೆ ಎಂದರೆ ಅವರು ರೈತ, ಜವಾನ ಅಥವಾ ಅಧಿಕಾರಿಯನ್ನು ಖಾಕಿ ತೊಟ್ಟವರನ್ನು ನೋಡಲಾರದಂತಹ ಸ್ಥಿತಿಗೆ ತಲುಪಿದ್ದಾರೆ. ಬಿಜೆಪಿಯ ದ್ವೇಷದ ವ್ಯವಸಾಯದಿಂದ ವಿಷ ಉತ್ಪತ್ತಿಯಾಗಿದ್ದು, ನಮ್ಮ 'ರಾಜಕೀಯ ಮಾರುಕಟ್ಟೆಯನ್ನು' ಮಲಿನಗೊಳಿಸಿದೆ. ಈ ವಿಷದಿಂದ ಅವರ ಕಣ್ಣುಗಳು ಕುರುಡಾಗಿವೆ, ಅವರಿಗೆ ರೈತರು, ಸೈನಿಕರು, ಖಾಕಿಯ ಗೌರವವನ್ನಾಗಲೀ ನೋಡಲಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಅಷ್ಟಕ್ಕೂ ಏನಿದು ಘಟನೆ?: ಮಂಗಳವಾರ ಬೆಳಗ್ಗೆ ಧಮಖಾಲಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲು ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ. IPS ಜಸ್ಪೀತ್ ಸಿಂಗ್, SSP ಗುಪ್ತಚರ ಶಾಖೆಯ ನೇತೃತ್ವ ವಹಿಸಿದ್ದರು. ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಹಲವಾರು ಶಾಸಕರು ಧಮಖಾಲಿಯಲ್ಲಿ ಉಪಸ್ಥಿತರಿದ್ದರು. ಅವರೆಲ್ಲ ಸಂದೇಶಖಾಲಿಗೆ ಹೋಗುತ್ತಿದ್ದರು. ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆದ ಸಂದರ್ಭದಲ್ಲಿ ಸುವೇಂದು ಅಧಿಕಾರಿ ಈ ನಿಂದನೆ ಮಾಡಿದ್ದಾರೆ. ಎಸ್‌ಎಸ್‌ಪಿ ಗುಪ್ತಚರ ಶಾಖೆಯ ಐಪಿಎಸ್ ಜಸ್ಪೀತ್ ಸಿಂಗ್ ಇಲ್ಲಿ ಕಾನೂನು ಸುವ್ಯವಸ್ಥೆಯ ನೇತೃತ್ವ ವಹಿಸಿದ್ದರು. ಇಂತಹ ಟೀಕೆ ರಾಜಕೀಯ ನಾಯಕರಿಗೆ ಎಂದಿಗೂ ಸರಿಹೊಂದುವುದಿಲ್ಲ. ಈ ಹೇಳಿಕೆ ವಿರುದ್ಧ ನಾವು ಬಲವಾಗಿ ಪ್ರತಿಭಟಿಸುತ್ತೇವೆ. ನಾವು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಡಿಜಿ ಸರ್ಕಾರ್ ಹೇಳಿದ್ದಾರೆ.
ಏನಿದು ಸಂದೇಶ್ ಖಾಲಿ ಪ್ರಕರಣ: ಟಿಎಂಸಿ ನಾಯಕ ಶೇಖ್ ಷಹಜಹಾನ್ ಮತ್ತು ಅವರ ಆಪ್ತರು ನಡೆಸಿದ ದೌರ್ಜನ್ಯದ ವಿರುದ್ಧ ಕಳೆದ 10 ದಿನಗಳಿಂದ ಮಹಿಳಾ ಪ್ರತಿಭಟನಾಕಾರರು ಹೋರಾಟ ನಡೆಸಿದ್ದಾರೆ. ಇದು ಸಂದೇಶಖಾಲಿ ಪ್ರದೇಶದಲ್ಲಿ ಅಶಾಂತಿಗೆ ಕಾರಣವಾಗಿದೆ. ತೃಣಮೂಲ ಕಾಂಗ್ರೆಸ್ ನಾಯಕ ಷಹಾಜಹಾನ್ ಶೇಖ್ ಮತ್ತು ಅವರ ಬೆಂಬಲಿಗರು ತಮ್ಮ ಮೇಲೆ ಬಲವಂತವಾಗಿ "ಭೂ ಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯ" ನಡೆಸಿದ್ದಾರೆ ಎಂದು ಸಂದೇಶ್‌ಖಾಲಿಯ ಮಹಿಳೆಯರು ಆರೋಪಿಸಿದ್ದರು. ಮತ್ತೊಂದು ಕಡೆ ಈ ಪ್ರದೇಶಕ್ಕೆ ಭೇಟಿ ನೀಡದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಈ ಸಂಬಂಧ ಪ್ರತಿಪಕ್ಷಗಳು ಅಲ್ಲಿನ ಹೈಕೋರ್ಟ್ ಮೆಟ್ಟಿಲೇರಿದ್ದವು. ಇನ್ನು ಸೋಮವಾರ, ಪಶ್ಚಿಮ ಬಂಗಾಳ ಪೊಲೀಸರು ಸಂದೇಶಖಾಲಿಯಲ್ಲಿ ಪತ್ರಕರ್ತನೊಬ್ಬನನ್ನು ಬಂಧಿಸಿದ್ದರು. ಈ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕರಿಗೆ (DGP) ನೋಟಿಸ್ ಜಾರಿ ಮಾಡಿದೆ.
ಇದನ್ನು ಓದಿ: ಸಂದೇಶ್‌ಖಾಲಿ ಪ್ರಕರಣ: ಹೈಕೋರ್ಟ್ ಅನುಮತಿ ಬಳಿಕ ಸಂತ್ರಸ್ತರನ್ನು ಭೇಟಿಯಾದ ಸುವೇಂದು ಅಧಿಕಾರಿ