ಜಲ್ಪೈಗುರಿ (ಪಶ್ಚಿಮ ಬಂಗಾಳ): ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಮುಳ್ಳುತಂತಿ ಕತ್ತರಿಸಲು ಯತ್ನಿಸಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಈ ವೇಳೆ, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಮೃತನನ್ನು ಖಾಜಿರುಲ್ ಹಕ್ (46) ಎಂದು ಗುರುತಿಸಲಾಗಿದೆ.
ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಭಾತ್ಪಾರಾ ಬಿಒಪಿ ಪ್ರದೇಶದ ಗಡಿಯಲ್ಲಿ ರಾತ್ರಿ ಹೊತ್ತು ಕೆಲ ದುಷ್ಕರ್ಮಿಗಳು ಮುಳ್ಳುತಂತಿ ಕತ್ತರಿಸಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಗಡಿ ಭದ್ರತೆಯಲ್ಲಿದ್ದ ಈ ಬಿಎಸ್‌ಎಫ್ ಯೋಧರು ತಡೆಯಲು ಮುಂದಾಗಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಯೋಧರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮೊದಲಿಗೆ ಬಿಎಸ್‌ಎಫ್ ಯೋಧರು ಚಿಲ್ಲಿ ಗ್ರೆನೇಡ್ ಎಸೆದು ದುಷ್ಕರ್ಮಿಗಳನ್ನು ತಡೆಯಲು ಯತ್ನಿಸಿದ್ದಾರೆ. ಆದರೆ, ಕಲ್ಲು ತೂರಾಟ ಮತ್ತು ಹರಿತವಾದ ಆಯುಧಗಳಿಂದ ಯೋಧರ ಮೇಲೆಯೇ ದುಷ್ಕರ್ಮಿಗಳು ದಾಳಿಗೆ ಮುಂದಾಗಿದ್ದಾರೆ. ಈ ಘರ್ಷಣೆಯಲ್ಲಿ ಓರ್ವ ಯೋಧ ಗಾಯಗೊಂಡಿದ್ದಾರೆ. ಮತ್ತೊಂದೆಡೆ, ದುಷ್ಕರ್ಮಿಗಳ ಮೇಲೆ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಖಾಜಿರುಲ್ ಹಕ್ ಗುಂಡೇಟು ತಾಗಿ ಮೃತಪಟ್ಟಿದ್ದಾನೆ.
ಈ ಖಾಜಿರುಲ್ ಕುಖ್ಯಾತ ಕಳ್ಳಸಾಗಾಣಿಕೆದಾರನಾಗಿದ್ದ. ಭಾರತ-ಬಾಂಗ್ಲಾದೇಶ ಗಡಿಯಲ್ಲಿ ವಿವಿಧ ಅಪರಾಧ ಕೃತ್ಯಗಳಲ್ಲಿ ಈ ಹಿಂದೆಯೂ ಭಾಗಿಯಾಗಿದ್ದ. ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 12 ಪ್ರಕರಣಗಳು ದಾಖಲಾಗಿದ್ದವು. ಅಷ್ಟೇ ಅಲ್ಲ, ಬಾಂಗ್ಲಾದೇಶದಲ್ಲೂ ಈತನ ವಿರುದ್ಧ ಕೇಸ್ಗಳು ಇದ್ದವು ಎಂದು ಮೂಲಗಳು ತಿಳಿಸಿವೆ. ಜಲ್ಪೈಗುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಖಾಜಿರುಲ್ ಮೃತದೇಹವನ್ನು ಸಾಗಿಸಲಾಗಿದೆ.
ಇದನ್ನೂ ಓದಿ: ಯುದ್ಧಪೀಡಿತ ಗಾಜಾದಲ್ಲಿ ಭಾರತೀಯ ಮೂಲದ ವಿಶ್ವಸಂಸ್ಥೆ ಸಿಬ್ಬಂದಿ ಸಾವು