ನವದೆಹಲಿ: ಪಶ್ಚಿಮ ಬಂಗಾಳದಿಂದ 2008ರಲ್ಲಿ ಗುಜರಾತ್ಗೆ ರತನ್ ಟಾಟಾ ನೇತೃತ್ವದ ಟಾಟಾ ನ್ಯಾನೋ ಯೋಜನೆ ಸ್ಥಳಾಂತರಗೊಂಡಾಗ ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ’ವೆಲ್ ಕಮ್’ ಎಂಬ ಒಂದೇ ಒಂದು ಪದದ ಮೂಲಕ ಎಸ್ಎಂಎಸ್ನಲ್ಲಿ ಸ್ವಾಗತ ಕೋರಿದ್ದರು. ಆ ಮೂಲಕ ವಿಶ್ವದ ಅತ್ಯಂತ ಅಗ್ಗದ ಕಾರಿಗೆ ಹೊಸ ಇತಿಹಾಸ ಶುರುವಾಗಿತ್ತು.
ಅಂದು ಟಾಟಾ ನ್ಯಾನೋ ಘಟಕ ರಾಜ್ಯಕ್ಕೆ ಕರೆ ತರಲು ಕರ್ನಾಟಕ ಸರ್ಕಾರವೂ ಭಾರಿ ಕಸರತ್ತು ನಡೆಸಿತ್ತು. ಅದಕ್ಕೆ ಬೇಕಾದ ಭೂಮಿಯನ್ನು ಅಣಿ ಮಾಡಿಟ್ಟಿತ್ತು. ಆದರೆ, ಕಂಪನಿ ಘಟಕ ಮಾತ್ರ ಗುಜರಾತ್ ಪಾಲಾಗಿತ್ತು.
2006 ರಲ್ಲಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ನೇತೃತ್ವದ ಆಗಿನ ಆಡಳಿತಾರೂಢ ಎಡರಂಗ ಸರ್ಕಾರವು, ನ್ಯಾನೊ ಕಾರು ಉತ್ಪಾದನೆ ಘಟಕ ಸ್ಥಾಪಿಸಲು ಟಾಟಾ ಗ್ರೂಪ್‌ಗೆ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಸರ್ಕಾರದ ಈ ಕ್ರಮ ಖಂಡಿಸಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬೃಹತ್ ಪ್ರತಿಭಟನೆ ಆರಂಭಿಸಿದ್ದರು.
ಭಾರೀ ಪ್ರತಿಭಟನೆ ಹಿನ್ನೆಲೆ ಪಶ್ಚಿಮ ಬಂಗಾಳದಿಂದ ಟಾಟಾ ನ್ಯಾನೋ ಯೋಜನೆ ಕೈಬಿಟ್ಟು ನಿರ್ಗಮಿಸುವುದಕ್ಕೆ ಟಾಟಾ ನಿರ್ಧರಿಸಿದ್ದರು. ಈ ಕುರಿತು ಕೋಲ್ಕತ್ತಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರತನ್ ಟಾಟಾಗೆ ಮೋದಿ, ವೆಲ್ಕಮ್ ಎಂಬ ಒಂದೇ ಒಂದು ಪದದ ಎಸ್ಎಂಎಸ್ ಕಳುಹಿಸಿದ್ದರಂತೆ.
ಮೋದಿ ಹೇಳಿದ ಆ ಒಂದು ಕಥೆ: ಬಂಗಾಳದಿಂದ ನಿರ್ಗಮಿತವಾದ ಟಾಟಾ ನ್ಯಾನೋ 2,000 ಕೋಟಿ ರೂಪಾಯಿ ಹೂಡಿಕೆಯಲ್ಲಿ ಗುಜರಾತ್ನ ಸಾನಂದ್‌ನಲ್ಲಿ ಘಟಕವನ್ನು ಕಾರ್ಯಾರಂಭ ಮಾಡಿತ್ತು. ಈ ವೇಳೆ ಉದ್ಘಾಟನಾ ಭಾಷಣ ಮಾಡಿದ್ದ ಮೋದಿ, ರತನ್ ಟಾಟಾ ಅವರ ಕೋಲ್ಕತ್ತಾದ ಪತ್ರಿಕಾಗೋಷ್ಠಿ ವೇಳೆಯಲ್ಲಿ ನಾನು ’ಸ್ವಾಗತಂ‘ - WEL COME ಎಂಬ ಸಂದೇಶ ಕಳುಹಿಸಿದೆ. 1 ರೂ ಮೌಲ್ಯದ ಎಸ್ಎಂಎಸ್ ಏನೆಲ್ಲಾ ಮಾಡಿತು ಎಂದು ಮೆಲುಕು ಹಾಕಿದ್ದರು.
2008ರ ಅಕ್ಟೋಬರ್ 3ರಂದು ಟಾಟಾ ಪಶ್ಚಿಮ ಬಂಗಾಳದಿಂದ ಹೊರನಡೆಯಿತು. ಮುಂದಿನ ನಾಲ್ಕು ದಿನದಲ್ಲಿ ಗುಜರಾತ್ನ ಸಾನಂದ್‌ನಲ್ಲಿ ಘಟಕ ಆರಂಭವಾಯಿತು. ಅನೇಕ ದೇಶಗಳು ನ್ಯಾನೋ ಯೋಜನೆಗೆ ಸಹಾಯ ಮಾಡಲು ಮುಂದಾಗಿದ್ದರು. ಆದರೆ, ಗುಜರಾತ್ ಸರ್ಕಾರಿ ಅಧಿಕಾರಿಗಳು ಈ ಯೋಜನೆ ಭಾರತ ಬಿಟ್ಟು ಹೋಗದಂತೆ ನೋಡಿಕೊಂಡರು ಎಂದಿದ್ದರು.
ಇದೇ ವೇಳೆ, ,ಗುಜರಾತ್ ಸರ್ಕಾರ, ಟಾಟಾ ಕಾರ್ಪೋರೇಟ್ ಸಂಸ್ಕೃತಿಯಲ್ಲಿನ ಸಾಮರ್ಥ್ಯವನ್ನು ಹೊಗಳಿತ್ತು. ಕೊನೆಗೆ ಇದು ರಾಜ್ಯದ ಅಭಿವೃದ್ಧಿಗೆ ವೇಗ ನೀಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದಿದ್ದರು. 2010ರಲ್ಲಿ ಸಾನಂದ್ ಘಟಕದಲ್ಲಿ ಮೊದಲ ಕಾರು ಹೊರ ಬಂದಾಗ ಮೋದಿ ನೇತೃತ್ವದ ಗುಜರಾತ್ ಸರ್ಕಾರ ಮತ್ತು ಸೌಕರ್ಯಕ್ಕಾಗಿ ನೀಡಿದ ಸಹಾಯವನ್ನು ರತನ್ ಟಾಟಾ ಪ್ರಶಂಸಿದ್ದರು.
ನಾವು ಮತ್ತೊಂದು ನ್ಯಾನೋ ಘಟಕದ ಹುಡುಕಾಟ ಆರಂಭಿಸಿದಾಗ ಶಾಂತಿ ಮತ್ತು ಸಾಮರಸ್ಯವನ್ನು ನೋಡಿದೆವು. ನಮಗೆ ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಗುಜರಾತ್ ಸರ್ಕಾರ ನೀಡಿತ್ತು. ಇದು ಕೇವಲ ಟಾಟಾ ಯೋಜನೆಯಲ್ಲ. ಇದು ನಮ್ಮ ಯೋಜನೆ ಎಂದಿದ್ದರು. ಟಾಟಾ ಈ ನ್ಯಾನೋ ಕಾರ್ ಉತ್ಪಾದನೆಯನ್ನು 2018ರಲ್ಲಿ ಸ್ಥಗಿತಗೊಳಿಸಿತ್ತು.
ಇದನ್ನೂ ಓದಿ: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಬ್ರಹ್ಮಚಾರಿಯಾಗಿಯೇ ಉಳಿದ ರತನ್; ಇದು ಟಾಟಾರ ಅದ್ಭುತ ಲವ್ ಸ್ಟೋರಿ!