ಚೆನ್ನೈ (ತಮಿಳುನಾಡು): ರಾಜಕೀಯ ಪಕ್ಷಗಳು ನೀಡುವ ಚುನಾವಣಾ ಆಶ್ವಾಸನೆಗಳನ್ನು ಈಡೇರಿಸುವ ಕಾರ್ಯಸಾಧ್ಯತೆಯ ಬಗ್ಗೆ ತಿಳಿದುಕೊಳ್ಳುವ ಹಕ್ಕು ಮತದಾರರಿಗೆ ಇದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ. ಇದೇ ವೇಳೆ, ಈ ವಿಷಯವು ಸದ್ಯ ನ್ಯಾಯಾಲಯದಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚೆನ್ನೈನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜೀವ್ ಕುಮಾರ್ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಚುನಾವಣಾ ಆಯೋಗವು ಚುನಾವಣಾ ಭರವಸೆಗಳನ್ನು ಬಹಿರಂಗಪಡಿಸಲು ಪಕ್ಷಗಳಿಗೆ ಪ್ರೊಫಾರ್ಮಾ ಸಿದ್ಧಪಡಿಸಿದೆ. ಆದಾಗ್ಯೂ, ಈ ವಿಷಯವು ನ್ಯಾಯಾಲಯದಲ್ಲಿ ಬಾಕಿ ಉಳಿದಿರುವುದರಿಂದ ಇದು ನ್ಯಾಯಾಲಯಕ್ಕೆ ಸಂಬಂಧಿಸಿದ ಅಂಶವಾಗಿದೆ ಎಂದು ತಿಳಿಸಿದರು.
ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಭರವಸೆಗಳನ್ನು ನೀಡುವ ಹಕ್ಕನ್ನು ಹೊಂದಿವೆ. ಅದೇ ರೀತಿಯಾಗಿ ಮತದಾರರಿಗೆ ಪ್ರಣಾಳಿಕೆಯ ಭರವಸೆಗಳು ನಿಜವೇ ಮತ್ತು ಈ ಕಾರ್ಯಕ್ರಮಗಳಿಗೆ ಹಣವನ್ನು ಹೇಗೆ ನೀಡಬಹುದು ಎಂಬುದನ್ನು ತಿಳಿದುಕೊಳ್ಳುವ ಹಕ್ಕಿದೆ. ಒಟ್ಟಾರೆ ವಿಷಯವು ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇದೇ ವೇಳೆ, ಜಾರಿ ಸಂಸ್ಥೆಗಳಿಗೆ ಜಾಗರೂಕವಾಗಿರಲು ನಿರ್ದೇಶನ ನೀಡಲಾಗಿದೆ. ನಗದು ಮತ್ತು ಉಚಿತ ಉಡುಗೊರೆಗಳ ವಿತರಣೆ ತಡೆಯಲು ಸೂಚಿಸಲಾಗಿದೆ. ಆನ್‌ಲೈನ್ ವಹಿವಾಟಿನ ಮೇಲೆ ನಿಗಾ ಇಡಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೂ ಸಹ ಜವಾಬ್ದಾರಿ ವಹಿಸಲಾಗಿದೆ ಎಂದು ವಿವರಿಸಿದರು.
ಸುಳ್ಳು ಸುದ್ದಿಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾ ಆಯುಕ್ತರು, ನೀವು ಹೇಳಿದಂತೆ ಇಂದು ಸುಳ್ಳು ಸುದ್ದಿಗಳು ಚಾಲ್ತಿಯಲ್ಲಿವೆ. ಚುನಾವಣೆ ದಿನಾಂಕ ಘೋಷಣೆಯಾಗಿದೆ ಎಂಬ ಸುದ್ದಿ ಹರಡಲಾಗಿತ್ತು. ಆದಾಗ್ಯೂ, ಈ ನಕಲಿ ಸುದ್ದಿಯನ್ನು ಅರ್ಧ ಗಂಟೆಯೊಳಗೆ ಗುರುತಿಸಲಾಗಿದೆ. ಇದೊಂದು ನಕಲಿ ಎಂದು ಸಾಕಷ್ಟು ಬಾರಿ ಸ್ಪಷ್ಟಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಒಂದೇ ಹಂತದ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ರಾಜೀವ್ ಕುಮಾರ್, ನಾವು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ರಾಜ್ಯ ಪಕ್ಷಗಳಾದ ಎಐಎಡಿಎಂಕೆ, ಡಿಎಂಕೆಯಂತಹ ಪಕ್ಷಗಳೊಂದಿಗೆ ಸಭೆ ಮಾಡಿದ್ದೇವೆ. ಒಂದೇ ಹಂತದ ಚುನಾವಣೆ ಮತ್ತು ಹಣ, ಉಚಿತ ಉಡುಗೊರೆಗಳ ಹಂಚುವಿಕೆಯ ಮೇಲೆ ಕಡಿವಾಣ ಹಾಕುವಂತೆ ಬಹುಪಾಲು ಪಕ್ಷಗಳ ಬೇಡಿಕೆಯಾಗಿದೆ. ಅಲ್ಲದೇ, ನಕಲಿ ಮತದಾರರು, ಮದ್ಯ ವಿತರಣೆ ಮತ್ತು ಆನ್‌ಲೈನ್ ಮೂಲಕ ಹಣ ವರ್ಗಾವಣೆಯನ್ನೂ ತಡೆಯಲು ಕ್ರಮ ಕೈಗೊಳ್ಳುವಂತೆ ಪಕ್ಷಗಳು ಕೋರಿವೆ ಎಂದು ತಿಳಿಸಿದರು. ಇನ್ನು, ತಮಿಳುನಾಡಿನಲ್ಲಿ ಹಿಂದಿನ ಚುನಾವಣೆಗಳಲ್ಲಿ ಪಕ್ಷಗಳು ನಗದು ಮತ್ತು ಉಡುಗೊರೆಗಳನ್ನು ಹಂಚುವ ಮೂಲಕ ಮತದಾರರನ್ನು ಆಕರ್ಷಿಸುತ್ತಿವೆ ಎಂಬ ಆರೋಪಗಳು ಆಗಾಗ್ಗೆ ಕೇಳಿ ಬಂದಿದ್ದವು ಎಂದರು.
ಇದನ್ನೂ ಓದಿ: ತಮಿಳುನಾಡಿನ ಕಾಂಗ್ರೆಸ್ ಶಾಸಕಿ ವಿಜಯಾಧರಣಿ ಬಿಜೆಪಿ ಸೇರ್ಪಡೆ