ಡೆಹ್ರಾಡೂನ್(ಉತ್ತರಾಖಂಡ): ರಾಮ ನಾಮ ಜಗದಗಲ. ಕೋಟ್ಯಂತರ ಭಕ್ತರಿಗೆ ಪುರುಷೋತ್ತಮನೇ ಆದರ್ಶ. ಉತ್ತರಾಖಂಡದ ವ್ಯಕ್ತಿಯೊಬ್ಬರು ರಾಮನ ಅಪ್ಪಟ ಭಕ್ತರಾಗಿದ್ದು, 35 ಕೋಟಿ ಸಲ ರಾಮನಾಮ ಬರೆದಿದ್ದಾರೆ. ಇದಕ್ಕೆ ತೆಗೆದುಕೊಂಡ ಅವಧಿ 35 ವರ್ಷ. ಇವರ ಈ ಭಕ್ತಿಪರವಶತೆ ರಾಜ್ಯದಲ್ಲಿ ಸಂಚಲನ ಉಂಟು ಮಾಡಿದೆ.
ಉತ್ತರಾಖಂಡದ ಅಲ್ಮೋಡಾ ಜಿಲ್ಲೆಯ ಮೌಲೇಖಲ್ ಗ್ರಾಮದ ನಿವಾಸಿಯಾಗಿರುವ ಈ ರಾಮಭಕ್ತನ ಹೆಸರು ಶಂಭು ದಯಾಳ್. ಸಣ್ಣ ಟೀ ಅಂಗಡಿ ನಡೆಸುವ ದಯಾಳ್ ಅವರು ಸೂರ್ಯವಂಶದ ರಾಮನ ನಿರ್ಮಲ ಭಕ್ತ. 35 ಕೋಟಿಗೂ ಅಧಿಕ ಬಾರಿ ರಾಮ ನಾಮ ಬರೆದ ಇವರನ್ನು ಜನರು ಆಧುನಿಕ ಕಾಲದ ರಾಮನ ಪ್ರಿಯ ಭಕ್ತ ಎಂದು ಬಣ್ಣಿಸಿದ್ದಾರೆ.
ಬದುಕಿಗಾಗಿ ಸಣ್ಣ ಚಹಾ ಅಂಗಡಿ ನಡೆಸುತ್ತಿರುವ ಶಂಭು ದಯಾಳ್ ಅವರಿಗೆ ಪತ್ನಿ, ನಾಲ್ವರು ಮಕ್ಕಳಿದ್ದಾರೆ. ಅದರಲ್ಲಿ ಇಬ್ಬರು ದಿವ್ಯಾಂಗರಾಗಿದ್ದಾರೆ. ಔದಾರ್ಯ ವ್ಯಕ್ತಿಯಾಗಿರುವ ಶಂಭು ಅವರು, ತಮ್ಮ ಅಂಗಡಿಗೆ ಬಂದ ಬಡವರು ಮತ್ತು ಕಾವಿಧಾರಿ ಶರಣರು ಚಹಾ ಸೇವಿಸಿದಲ್ಲಿ ಹಣ ಪಡೆದುಕೊಳ್ಳುವುದಿಲ್ಲವಂತೆ.
35 ವರ್ಷಗಳಿಂದ ರಾಮನಾಮ ಜಪ: ಶಂಭು ದಯಾಳ್ ಅವರಿಗೆ ರಾಮನೆಂದರೆ ಬಲು ಪ್ರೀತಿ. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ರಾಮನ ಮೇಲಿನ ಭಕ್ತಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಅದಕ್ಕಾಗಿಯೇ ಕಳೆದ 35 ವರ್ಷಗಳಿಂದ ಹಲವು ಪುಸ್ತಕಗಳಲ್ಲಿ ರಾಮನ ಹೆಸರು ಬರೆದಿದ್ದಾರೆ. ಇದುವರೆಗೆ ಅವರು 35 ಕೋಟಿ ಬಾರಿ ರಾಮನಾಮವನ್ನು ಶ್ರದ್ಧಾಭಕ್ತಿಯಿಂದ ಅಚ್ಚೊತ್ತಿದ್ದಾರೆ. ಎಂಥದ್ದೇ ಸಂಕಷ್ಟವಿದ್ದರೂ, ರಾಮನ ಹೆಸರನ್ನು ಬರೆಯುವುದನ್ನು ಮರೆಯುವುದಿಲ್ಲ. ವಿಶ್ವಶಾಂತಿಗಾಗಿ ರಾಮನಾಮ ಬರೆಯುತ್ತಿದ್ದೇನೆ ಎಂದು ಶಂಭು ಅವರು ತಿಳಿಸಿದ್ದಾರೆ.
"ರಾಮನ ಕೃಪೆಯಿಂದ ನನ್ನ ಕುಟುಂಬ ಬದುಕುತ್ತಿದೆ. ನನ್ನ ಗುರುಗಳಿಂದ ಪ್ರೇರಣೆ ಪಡೆದು ಕಳೆದ 35 ವರ್ಷಗಳಿಂದ ರಾಮನ ನಾಮವನ್ನು ಬರೆಯುತ್ತಿದ್ದೇನೆ. ವಿಶ್ವಶಾಂತಿಗಾಗಿ ಅಯೋಧ್ಯಾಧೀಶನ ನಾಮ ಸ್ಮರಣೆ ಮಾಡುತ್ತಿದ್ದೇನೆ. ನನ್ನ ಜೀವನದುದ್ದಕ್ಕೂ ರಾಮ ನಾಮವನ್ನು ಬರೆಯುತ್ತೇನೆ" ಎಂದು ಹೇಳಿದ್ದಾರೆ.
ತುಂಬಿದ ಪುಸ್ತಕ, ಖಾಲಿಯಾದ ಪೆನ್ನುಗಳು: ಶಂಭು ದಯಾಳ್ ಅವರು ರಾಮನಾಮವನ್ನು ಬರೆಯಲು ಹಲವಾರು ಪುಸ್ತಕಗಳನ್ನು ಬಳಸಿದ್ದಾರೆ. ನೂರಾರು ಪೆನ್ನುಗಳನ್ನು ಬಳಸಿದ್ದಾರೆ. ನೋಟ್ ಪುಸ್ತಕಗಳು ರಾಮನ ಹೆಸರಿನಿಂದ ತುಂಬಿದ್ದರೆ, ಪೆನ್ನುಗಳು ಖಾಲಿಯಾಗಿ ಬಿದ್ದಿವೆ.
ಶಂಭು ದಯಾಳ್ ಅವರ ಬಗ್ಗೆ ಗ್ರಾಮಸ್ಥರು ಮತ್ತು ಸುತ್ತಲಿನ ಜನರು ಅಷ್ಟೇ ಗೌರವ ಹೊಂದಿದ್ದಾರೆ. ಭಗವಾನ್ ರಾಮನ ಮೇಲೆ ಅಂತಹ ಭಕ್ತಿ ಹೊಂದಿರುವ ವ್ಯಕ್ತಿಯನ್ನು ನಾವು ನೋಡಿಲ್ಲ. ಅವರು ಬರೆದ ರಾಮನಾಮವನ್ನು ಬಹಳ ವರ್ಷಗಳಿಂದ ನೋಡುತ್ತಿದ್ದೇವೆ. ಅದಕ್ಕೆ ಹಲವು ಪ್ರತಿಗಳು, ನೂರಾರು ಪೆನ್ನುಗಳೇ ಸಾಕ್ಷಿ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಶಂಭು ಅವರ ಹೆಸರು ದಾಖಲಾಗಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರಾಜೀನಾಮೆ ಅಂಗೀಕರಿಸಲು ಮುಂದಾದ ರೈಲ್ವೆ: ಚುನಾವಣಾ ಕಣಕ್ಕಿಳಿಯಲು ವಿನೇಶ್ ಫೋಗಟ್ಗಿಲ್ಲ ಅಡ್ಡಿ - Vinesh Phogat