ಮುಂಬೈ(ಮಹಾರಾಷ್ಟ್ರ): ಅಮೆರಿಕದ 50 ವರ್ಷದ ಮಹಿಳೆಯೊಬ್ಬರು ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಅರಣ್ಯದಲ್ಲಿ ಪತ್ತೆಯಾಗಿದ್ದಾರೆ. ಈ ಮಹಿಳೆಯಿಂದ ತಮಿಳುನಾಡು ವಿಳಾಸ ಹೊಂದಿರುವ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಸೇರಿದಂತೆ ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದರು.
ಇಲ್ಲಿನ ಸೊನುರ್ಲಿ ಗ್ರಾಮದಲ್ಲಿ ಶನಿವಾರ ಸಂಜೆ ಕುರಿಗಾಯಿಯೊಬ್ಬರು ಮಹಿಳೆಯ ಕೂಗಾಟ ಕೇಳಿಸಿಕೊಂಡು ಸ್ಥಳಕ್ಕೆ ತೆರಳಿದ್ದಾರೆ. ಆಗ ಆಕೆಯನ್ನು ಮರಕ್ಕೆ ಸರಪಳಿಯಿಂದ ಕಟ್ಟಿ ಹಾಕಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯನ್ನು ರಕ್ಷಿಸಿದ್ದಾರೆ. ಸ್ಥಳದಲ್ಲಿ ದೊರೆತ ದಾಖಲೆಗಳ ಪ್ರಕಾರ, ಮಹಿಳೆಯ ಹೆಸರು ಲಲಿತಾ ಕಾಯಿ. ಈಕೆಯ ಪತಿ ಮುಂಬೈನಿಂದ 450 ಕಿ.ಮೀ ದೂರದಲ್ಲಿರುವ ಕರಾವಳಿ ಜಿಲ್ಲೆ ಸಿಂಧುದುರ್ಗ ಕಾಡಿನೊಳಗೆ ಕಟ್ಟಿಹಾಕಿ ಪರಾರಿಯಾಗಿರುವ ಕುರಿತು ಪೊಲೀಸರು ಶಂಕಿಸಿದ್ದಾರೆ.
''ಲಲಿತಾ ಕಾಯಿ ಮೂಲ ಅಮೆರಿಕ. ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಕಳೆದ 10 ವರ್ಷಗಳಿಂದ ತಮಿಳುನಾಡಿನಲ್ಲಿ ನೆಲೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದೀಗ ಆಕೆಯ ಸಂಬಂಧಿಕರನ್ನು ಪತ್ತೆ ಹಚ್ಚಲು ಮತ್ತು ಆಕೆಯ ಬಳಿ ಸಿಕ್ಕ ಸರ್ಕಾರಿ ದಾಖಲೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಆಧಾರ್ ಕಾರ್ಡ್‌ನಲ್ಲಿ ನಮೂದಿಸಲಾದ ವಿಳಾಸಕ್ಕೆ ಸಿಂಧುದುರ್ಗದಿಂದ ತಮಿಳುನಾಡು, ಗೋವಾ ಮತ್ತು ಇತರ ಕೆಲವು ಸ್ಥಳಗಳಿಗೆ ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೌರಭ್ ಅಗರವಾಲ್ ಹೇಳಿದ್ದಾರೆ.
''ನಾವು ಮಹಿಳೆಯಿಂದ ವಶಪಡಿಸಿಕೊಂಡ ಎಲ್ಲ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ಅಲ್ಲದೇ, ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡು ದಾಖಲೆಗಳನ್ನು ಪರಿಶೀಲಿಸಿದ ನಂತರವೇ ನಾವು ಕೆಲವು ತೀರ್ಮಾನಕ್ಕೆ ಬರಲು ಸಾಧ್ಯವಿದೆ. ಸದ್ಯ ನಿಶ್ಶಕ್ತರಾಗಿರುವ ಆಕೆಗೆ ಕೊಂಕಣ ಪ್ರದೇಶದ ಸಾವಂತವಾಡಿಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಸಿಂಧುದುರ್ಗದ ಓರೋಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಗೋವಾ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ'' ಎಂದು ಮಾಹಿತಿ ನೀಡಿದ್ದಾರೆ.
''ಆಸ್ಪತ್ರೆಯಲ್ಲಿ ಮಹಿಳೆಯಿಂದ ಲಿಖಿತ ದೂರು ಪಡೆದಿದ್ದೇವೆ. ಇದರ ಆಧಾರದ ಮೇಲೆ ಆಕೆಯ ಮಾಜಿ ಪತಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಕೊಲೆ ಯತ್ನ, ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡುವ ಕಾಯ್ದೆ ಮತ್ತು ಅಕ್ರಮ ಬಂಧನದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ'' ಎಂದು ಹೇಳಿದ್ದಾರೆ.
ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಪತ್ತೆ: ಲಲಿತಾ ಕಾಯಿ ಅಪಾಯದಿಂದ ಪಾರಾಗಿದ್ದಾರೆ. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಆಕೆಯ ಬಳಿ ವೈದ್ಯಕೀಯ ಪ್ರಿಸ್ಕ್ರಿಪ್ಷನ್‌ಗಳೂ ಸಹ ಪತ್ತೆಯಾಗಿವೆ. ಆಧಾರ್ ಕಾರ್ಡ್‌ನಲ್ಲಿ ತಮಿಳುನಾಡಿನ ವಿಳಾಸ ಇದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಪಾಸ್‌ಪೋರ್ಟ್‌ನ ಫೋಟೋಕಾಪಿ ಇದ್ದು, ವೀಸಾ ಅವಧಿ ಮುಗಿದಿದೆ. ಮರಕ್ಕೆ ಕಟ್ಟಿ ಹಾಕಿರುವ ಕ್ರೌರ್ಯದ ಹಿಂದೆ ಪತಿಯದ್ದೇ ಮೂಲ ಕೈವಾಡ ಇದೆ. ಒಂದೆರಡು ದಿನಗಳಿಂದ ಏನ್ನೂ ತಿನ್ನದೇ ಇದ್ದುದರಿಂದ ಮತ್ತು ಭಾರೀ ಮಳೆಯಿಂದ ನಿತ್ರಾಣಗೊಂಡಿದ್ದಾರೆ. ಆದರೆ, ಎಷ್ಟು ದಿನಗಳ ಹಿಂದೆ ಮರಕ್ಕೆ ಹಾಕಿ ಹೋಗಲಾಗಿದೆ ಎಂಬುವುದು ಇನ್ನೂ ಗೊತ್ತಾಗಿಲ್ಲ ಎಂದು ಮತ್ತೊಬ್ಬ ಅಧಿಕಾರಿ ವಿವರಿಸಿದರು.
ಇದನ್ನೂ ಓದಿ: ವಯನಾಡ್ನಲ್ಲಿ ರಣಮಳೆಗೆ ಸರಣಿ ಭೂಕುಸಿತ: ಮಕ್ಕಳು ಸೇರಿ 41 ಮಂದಿ ಸಾವು, 400ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ