ನವದೆಹಲಿ: ಪ್ರವಾಸಿಗರು, ನುರಿತ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಅಮೆರಿಕಕ್ಕೆ ಪ್ರಯಾಣಿಸುವ ಭಾರತೀಯ ಪ್ರಯಾಣಿಕರಿಗೆ ಹೆಚ್ಚುವರಿ 2,50,000 ವೀಸಾ ಸಂದರ್ಶನಗಳನ್ನು (ಅಪಾಯಿಂಟ್ಮೆಂಟ್) ನಡೆಸಲಾಗುವುದು ಎಂದು ಭಾರತದಲ್ಲಿನ ಯುಎಸ್ ರಾಯಭಾರ ಕಚೇರಿ ಸೋಮವಾರ ಪ್ರಕಟಿಸಿದೆ.
"ಇತ್ತೀಚೆಗೆ ಬಿಡುಗಡೆಯಾದ ಸಂದರ್ಶನದ ಹೊಸ ಸ್ಲಾಟ್ಗಳು ಲಕ್ಷಾಂತರ ಭಾರತೀಯ ಅರ್ಜಿದಾರರಿಗೆ ಸಮಯೋಚಿತವಾಗಿ ಸಂದರ್ಶನಗಳಿಗೆ ಹಾಜರಾಗಲು ಸಹಾಯ ಮಾಡುತ್ತವೆ. ಅಮೆರಿಕ - ಭಾರತಗಳ ಸಂಬಂಧಕ್ಕೆ ಆಧಾರವಾಗಿರುವ ಹಾಗೂ ಜನರ ನಡುವಿನ ಸಂಬಂಧಗಳ ಬೆನ್ನೆಲುಬಾಗಿರುವ ಪ್ರಯಾಣವನ್ನು ಈ ಕ್ರಮ ಸುಗಮಗೊಳಿಸಲಿದೆ" ಎಂದು ಭಾರತದಲ್ಲಿನ ಯುಎಸ್ ಮಿಷನ್ ಹೇಳಿದೆ.
ಭಾರತೀಯ ಮಿಷನ್ಗೆ ಈಗಾಗಲೇ ಸತತ ಎರಡನೇ ವರ್ಷ ಒಂದು ಮಿಲಿಯನ್ ವಲಸೆಯೇತರ ವೀಸಾ ಅರ್ಜಿಗಳು ಬಂದಿವೆ ಎಂದು ಅದು ವಿವರಿಸಿದೆ.
"ಈ ಬೇಸಿಗೆಯ ನಮ್ಮ ವಿದ್ಯಾರ್ಥಿ ವೀಸಾ ಋತುವಿನಲ್ಲಿ, ದಾಖಲೆ ಸಂಖ್ಯೆಯ ಅರ್ಜಿ ಪ್ರಕ್ರಿಯೆಗೊಳಿಸುವುದನ್ನು ಮುಂದುವರಿಸಿದ್ದೇವೆ ಮತ್ತು ಮೊದಲ ಬಾರಿಯ ಎಲ್ಲಾ ವಿದ್ಯಾರ್ಥಿ ಅರ್ಜಿದಾರರು ಭಾರತದಾದ್ಯಂತದ ನಮ್ಮ ಐದು ಕಾನ್ಸುಲರ್ ವಿಭಾಗಗಳ ಪೈಕಿ ಒಂದರಲ್ಲಿ ಸಂದರ್ಶನಕ್ಕೆ ಹಾಜರಗಾಲು ಸಾಧ್ಯವಾಗಿದೆ. ನಾವು ಈಗ ಕುಟುಂಬಗಳನ್ನು ಒಟ್ಟುಗೂಡಿಸುವುದು, ವ್ಯವಹಾರಗಳನ್ನು ಸಂಪರ್ಕಿಸುವುದು ಮತ್ತು ಪ್ರವಾಸೋದ್ಯಮವನ್ನು ಸುಗಮಗೊಳಿಸುವತ್ತ ಗಮನ ಹರಿಸಿದ್ದೇವೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
2024 ರಲ್ಲಿ ಇಲ್ಲಿಯವರೆಗೆ 1.2 ದಶಲಕ್ಷಕ್ಕೂ ಹೆಚ್ಚು ಭಾರತೀಯರು ಅಮೆರಿಕಕ್ಕೆ ಪ್ರಯಾಣಿಸಿದ್ದಾರೆ. ಇದು 2023 ರ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 35 ರಷ್ಟು ಹೆಚ್ಚಾಗಿದೆ. ಅಮೆರಿಕ ಮಿಷನ್ ಪ್ರಕಾರ, ಕನಿಷ್ಠ ಆರು ಮಿಲಿಯನ್ ಭಾರತೀಯರು ಈಗಾಗಲೇ ಅಮೆರಿಕಕ್ಕೆ ಭೇಟಿ ನೀಡಲು ವಲಸೆಯೇತರ ವೀಸಾ ಹೊಂದಿದ್ದಾರೆ. ಅಲ್ಲದೇ ಪ್ರತಿದಿನವೂ ಸಾವಿರಾರು ಸಂಖ್ಯೆಯಲ್ಲಿ ಹೊಸ ವೀಸಾಗಳನ್ನು ನೀಡಲಾಗುತ್ತಿದೆ.
ಅಮೆರಿಕ ಸೆನೆಟ್ ಸೆಪ್ಟೆಂಬರ್ 30 ಅನ್ನು 'ಯುಎಸ್-ಭಾರತ ಪಾಲುದಾರಿಕೆ ದಿನ' ಎಂದು ಘೋಷಿಸಿದೆ. ಉಭಯ ದೇಶಗಳು ಪರಸ್ಪರ ನೀಡಿದ ಕೊಡುಗೆ ಮತ್ತು ಭಾರತದೊಂದಿಗಿನ ಅಮೆರಿಕದ ಸಹಭಾಗಿತ್ವವು ಇತಿಹಾಸದಲ್ಲಿ ಯಾವುದೇ ಸಮಯಕ್ಕಿಂತ ಬಲವಾಗಿದೆ, ಹತ್ತಿರವಾಗಿದೆ ಮತ್ತು ಹೆಚ್ಚು ಕ್ರಿಯಾತ್ಮಕವಾಗಿದೆ ಎಂದು ರಾಯಭಾರ ಕಚೇರಿ ಸೋಮವಾರ ಹೇಳಿದೆ.
ಕಳೆದ ವಾರ, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ, ಭಾರತ ಸರ್ಕಾರವು ಬೋಸ್ಟನ್ ಮತ್ತು ಲಾಸ್ ಏಂಜಲೀಸ್ನಲ್ಲಿ ಎರಡು ಹೊಸ ದೂತಾವಾಸಗಳನ್ನು ತೆರೆಯಲಿದೆ ಎಂದು ಘೋಷಿಸಿದ್ದರು.
ಇದನ್ನೂ ಓದಿ : ಯೆಮೆನ್ನ ಹೌತಿ ನೆಲೆಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ: 4 ಸಾವು, 49 ಜನರಿಗೆ ಗಾಯ - Israel Strikes Yemen