ಸಿದ್ದಿಪೇಟ್ (ತೆಲಂಗಾಣ): ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತ ಹೋದಂತೆ ಸೈಬರ್ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಿದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಒಂದಲ್ಲ ಒಂದು ರೂಪದಲ್ಲಿ ಜನರು ವಂಚಕರ ಬಲೆಗೆ ಬಿದ್ದು ಮೋಸ ಹೋಗುತ್ತಲೇ ಇದ್ದಾರೆ. ಇಷ್ಟು ದಿನಗಳವರೆಗೆ ಆನ್‌ಲೈನ್ ಮೂಲಕ ವಂಚಿಸುತ್ತಿದ್ದ ಖದೀಮರು ಇದೀಗ ಯುಪಿಐ ಪಾವತಿ ವಂಚನೆಯನ್ನು ಶುರು ಹಚ್ಚಿಕೊಂಡಿದ್ದಾರೆ. ಸಿದ್ದಿಪೇಟೆ ಜಿಲ್ಲೆಯ ಅಕ್ಕಣ್ಣಪೇಟೆ ಮಂಡಲದ ಹೋಟೆಲ್ ಮಾಲೀಕರೊಬ್ಬರು ಇಂತಹ ವಂಚನೆಗೆ ಬಲಿಯಾಗಿ 96 ಸಾವಿರ ರೂ. ಕಳೆದುಕೊಂಡಿದ್ದಾರೆ.
ಘಟನೆ ವಿವರ: ರಾಜಸ್ಥಾನ ಮೂಲದ ನಾರಾಯಣ ಎಂಬುವವರು ಕಳೆದ ಐದು ವರ್ಷಗಳಿಂದ ಸಿದ್ದಿಪೇಟೆಯ ಅಕ್ಕಣ್ಣಪೇಟೆ ಎಂಬಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಶುಕ್ರವಾರ ಛತ್ತೀಸ್‌ಗಢ ಮೂಲದ ವ್ಯಕ್ತಿಯೊಬ್ಬ ಚಹಾ ಕುಡಿಯಲು ಹೋಟೆಲ್‌ಗೆ ಬಂದಿದ್ದಾನೆ. ಚಹಾ ಕುಡಿದ ನಂತರ ತನ್ನ ಬಳಿ ಹಣವಿಲ್ಲ ಸ್ನೇಹಿತನಿಂದ ಗೂಗಲ್ ಪೇ ಮಾಡಿಸುವೆ ಎಂದು ಹೇಳಿ ತನ್ನ ಗೆಳೆಯನ ನಂಬರ್ಗೆ ಕರೆ ಮಾಡಲು ತಿಳಿಸಿದ್ದಾನೆ. ಇದನ್ನು ನಂಬಿದ ಹೋಟೆಲ್ ಮಾಲೀಕ ಆತ ತಿಳಿಸಿದ ನಂಬರ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಆರೋಪಿಯ ಸ್ನೇಹಿತ ಹೋಟೆಲ್ ಮಾಲೀಕನಿಗೆ 500 ರೂ. ಗೂಗಲ್ ಪೇ ಮಾಡಿದ್ದಾನೆ.
ನಂತರ ಹಣ ಬಂದಿದೆಯೇ ಅಂತ ಒಮ್ಮೆ ಪರಿಶೀಲಿಸಿ ಎಂದು ಆರೋಪಿ ಖದೀಮ ಹೋಟೆಲ್ ಮಾಲೀಕ ನಾರಾಯಣಗೆ ಹೇಳಿದ್ದಾನೆ. ಅದರಂತೆ ಹಣ ಪರಿಶೀಲನೆ ಮಾಡುವ ವೇಳೆ ಪಕ್ಕನೇ ಇದ್ದ ಆರೋಪಿ ಯುಪಿಐ ಪಿನ್ ನೋಡಿಕೊಂಡಿದ್ದಾನೆ.
ಬಳಿಕ ಮತ್ತೆ ಹೋಟೆಲ್ ಮಾಲೀಕನ ಬಳಿ ತನ್ನ ಬೇರೊಬ್ಬ ಸ್ನಹಿತನಿಗೆ ಕರೆ ಮಾಡಲು ಮೊಬೈಲ್ ಕೊಡುವಂತೆ ಕೇಳಿದ್ದಾನೆ. ಇದನ್ನು ನಂಬಿದ ಹೋಟೆಲ್ ಮಾಲೀಕ ಆರೋಪಿ ಕೈಗೆ ತನ್ನ ಮೊಬೈಲ್ ಕೊಟ್ಟಿದ್ದಾರೆ. ಬಳಿಕ ವಂಚಕ ಸ್ನೇಹಿತನೊಂದಿಗೆ ಮಾತನಾಡುವ ಹಾಗೆ ನಟಿಸಿ ಹೋಟೆಲ್ ಮಾಲೀಕನ ಖಾತೆಯಿಂದ ಮೊದಲಿಗೆ 90,000 ರೂ. ಎಗರಿಸಲು ನೋಡಿದ್ದಾನೆ. ಲಿಮಿಟ್ ಹೆಚ್ಚಾದ ಕಾರಣ ಅದು ವಿಫಲವಾಗಿದೆ. ಆಗ 48 ಸಾವಿರದಂತೆ ಎರಡು ಬಾರಿ ಹಣವನ್ನು ತನ್ನ ಖಾತೆಗೆ ಕಳುಹಿಸಿಕೊಂಡ ಖದೀಮ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಕೆಲಸದಲ್ಲಿ ನಿರತವಾಗಿದ್ದ ಕಾರಣ ಹೋಟೆಲ್ ಮಾಲೀಕ ಈ ಬಗ್ಗೆ ಗಮನಹರಿಸಿಲ್ಲ. ಕೆಲಸ ಮುಗಿದ ಬಳಿಕ ನೋಡಿದಾಗ ತಮ್ಮ ಖಾತೆಯಲ್ಲಿ ಹಣ ಇಲ್ಲದಿರುವುದು ಕಂಡು ಬಂದಿದೆ. ಈ ರೀತಿ ಮೋಸ ಹೋಗಿರುವುದು ಕಂಡು ಬಂದ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಹೋಟೆಲ್ ಮ್ಯಾನೇಜರ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಮುಂಬೈ ಪೊಲೀಸ್ ಸೋಗಿನಲ್ಲಿ ಬ್ಯಾಂಕ್ ಉದ್ಯೋಗಿಗೆ ₹17 ಲಕ್ಷ ವಂಚನೆ! - cyber Fraud