ನವದೆಹಲಿ: ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಮಹತ್ತರ ಹೆಗ್ಗುರುತು ಎಂದೇ ಬಿಂಬಿತವಾಗಿರುವ 'ಒಂದು ದೇಶ, ಒಂದು ಚುನಾವಣೆ' ವಿಧೇಯಕವು ಡಿಸೆಂಬರ್ 16 ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇದನ್ನು ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಉದ್ದೇಶ ಹೊಂದಿರುವ ಸಂವಿಧಾನದ 129ನೇ ತಿದ್ದುಪಡಿ ವಿಧೇಯಕಕ್ಕೆ ಡಿಸೆಂಬರ್ 12ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಜೊತೆಗೆ, ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ವಿಧಾನಸಭೆ ಸ್ಥಾನಮಾನ ನೀಡುವ ಮಸೂದೆಗೂ ಅಂಗೀಕಾರ ಸಿಕ್ಕಿದೆ.
ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಪದ್ಧತಿಯನ್ನು ಜಾರಿಗೆ ತರಬೇಕು ಎಂಬುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಇದರ ಜೊತೆಗೆ ನಡೆಯಬೇಕಾದ ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ಸದ್ಯಕ್ಕೆ ದೂರ ಉಳಿಯಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ವಿಪಕ್ಷಗಳಿಂದ ತೀವ್ರ ವಿರೋಧ: ಸಂಸತ್ತಿನ ಇದೇ ಅಧಿವೇಶನದಲ್ಲಿ ಮಹತ್ವದ ಒಂದು ದೇಶ, ಒಂದು ಚುನಾವಣೆ ವಿಧೇಯಕವನ್ನು ಮಂಡಿಸಲು ತುದಿಗಾಲ ಮೇಲೆ ನಿಂತಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ವಿಧೇಯಕವು ದೇಶದ ಚುನಾವಣಾ ಪದ್ಧತಿಗೆ ಮಾರಕ ಎಂದು ಟೀಕಿಸಿವೆ. ಪ್ರಸ್ತಾವಿತ ವಿಧೇಯಕವು, ದೇಶದ ಒಕ್ಕೂಟ ವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡಲಿದೆ. ಈಗಿರುವ ಚುನಾವಣಾ ಪದ್ಧತಿಯನ್ನೇ ಅನುಸರಿಸಬೇಕು ಎಂದು ವಿಪಕ್ಷಗಳು ಆಗ್ರಹಿಸುತ್ತಿವೆ.
ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಅವರು ಕೇಂದ್ರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಯಾವುದೇ ರಾಜ್ಯ ಸರ್ಕಾರ 6 ತಿಂಗಳೊಳಗೆ ಪತನವಾದರೆ ಅಥವಾ ಬಹುಮತ ಕಳೆದುಕೊಂಡರೆ, ಅಲ್ಲಿ ಚುನಾಯಿತ ಸರ್ಕಾರವಿಲ್ಲದೆ ನಾಲ್ಕೂವರೆ ವರ್ಷ ಆಡಳಿತ ನಡೆಸಲು ಸಾಧ್ಯವೇ? ಎಂದು ಕೇಳಿದ್ದಾರೆ.
ಸರ್ಕಾರ ಪತನವಾದರೆ ಮುಂದೇನು?: ಕೆಲ ರಾಜ್ಯಗಳಲ್ಲಿ ಎರಡೂವರೆ, ಮೂರು ವರ್ಷಗಳಲ್ಲಿ ಸರ್ಕಾರ ಪತನವಾದಾಗ, ಆರು ತಿಂಗಳ ಒಳಗೆ ಮತ್ತೊಂದು ಚುನಾವಣೆ ನಡೆದು ಅಲ್ಲಿನ ಜನರು ಹೊಸ ಸರ್ಕಾರವನ್ನು ಚುನಾಯಿಸುತ್ತಿದ್ದರು. ಸಂವಿಧಾನದಲ್ಲಿ 6 ತಿಂಗಳ ಗಡುವು ನೀಡಲಾಗಿದೆ. ಆದರೆ, ಪ್ರಸ್ತಾವಿತ ಮಸೂದೆಯಲ್ಲಿ ಈ ಅಂಶ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಮತ್ತೋರ್ವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಈ ಬಗ್ಗೆ ಮಾತನಾಡಿದ್ದು, ಚುನಾವಣಾ ವಿಧೇಯಕವು, ಪ್ರಜಾಪ್ರಭುತ್ವದ ಆತ್ಮಕ್ಕೆ ಧಕ್ಕೆ ತರಲಿದೆ. ಹಾಗಾಗಿ, ಇದನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಯನಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ದೇಶ, ಒಂದು ಚುನಾವಣೆ ಕುರಿತು ಅಧ್ಯಯನ ನಡೆಸಿದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಸಮಿತಿಗೆ ಕಳೆದ ವರ್ಷವೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪತ್ರ ಬರೆದು, ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಪಾರದರ್ಶಕ ಚರ್ಚೆಯಾಗಲಿ: ಒಮರ್ ಅಬ್ದುಲ್ಲಾ